ಈ ವರ್ಷದ ಸೆಪ್ಟಂಬರ್ 17ಕ್ಕೆ, ನರೇಂದ್ರ ಮೋದಿ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ, ಪ್ರಧಾನಿ ಹುದ್ದೆಯಿಂದ ಮೋದಿ ಕೆಳಗೆ ಇಳಿಯಲಿದ್ದಾರಾ ಎನ್ನುವ ಪ್ರಶ್ನೆಯನ್ನು ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಎತ್ತಿದ್ದಾರೆ. ವರ್ಷಾಂತ್ಯಕ್ಕೆ ಪದತ್ಯಾಗ ಮಾಡಲಿದ್ದಾರೆ ಎನ್ನುವ ಸುದ್ದಿ ನನ್ನ ಕಿವಿಗೂ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಂತೋಷ್ ಲಾಡ್, “ನಾನು ಪಕ್ಷದ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದೆ. ಆಗ ನನ್ನ ಕಿವಿಗೊಂದು ವಿಷಯ ಬಿತ್ತು. ಅದು, ನಮ್ಮ ನರೇಂದ್ರ ಮೋದಿಯವರು ವರ್ಷಾಂತ್ಯಕ್ಕೆ ಪ್ರಧಾನಿ ಸ್ಥಾನದಿಂದ ಇಳಿಯಲಿದ್ದಾರೆ ಎಂದು. ಅದು ಎಷ್ಟು ನಿಜವೋ ಗೊತ್ತಿಲ್ಲ ” ಎಂದು ಲಾಡ್ ಹೇಳಿದ್ದಾರೆ.
ಈ ಹಿಂದೆ ಕೂಡಾ ಮಾಧ್ಯಮದವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು 75 ವರ್ಷದ ಮೇಲ್ಪಟ್ಟವರು, ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರೀಬೇಕಾ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಸಿಂಗ್, ಖಡಾಖಂಡಿತವಾಗಿ ಇಲ್ಲ ಎಂದು ಹೇಳಿದ್ದರು. ಆ ರೀತಿಯ ಯಾವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು.
“ದೆಹಲಿಗೆ ಹೋದಾಗ ಊಹಾಪೋಹಗಳಿವೆ, ಮುಂದೆ ನಿತಿನ್ ಗಡ್ಕರಿಯವರು ಪ್ರಧಾನಿಯಾಗುವ ಸಾಧ್ಯತೆಯಿದೆ. ಈ ವರ್ಷ ಮೋದಿಯವರ ಅವಧಿ ಕೊನೆ ಆಗಬಹುದು. ಯಾಕೆಂದರೆ 75 ವರ್ಷ ಮೇಲ್ಪಟ್ಟವರು ರಾಜಕೀಯದಲ್ಲಿ ಇರಬಾರದು ಎಂದು ಅವರೇ ಮಾಡಿರುವ ಕಾನೂನು. ಆರ್ ಎಸ್ ಎಸ್‌ನವರು ಗಡ್ಕರಿಯವರನ್ನು ಪ್ರಧಾನಿ ಆಗಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ ” ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ರೋಹಿತ್ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’
ನಾಯಕತ್ವದ ಜಟಾಪಟಿ ಬರೀ ಕಾಂಗ್ರೆಸ್ಸಿನಲ್ಲಿ ಮಾತ್ರವಲ್ಲ, ಬಿಜೆಪಿಯಲ್ಲೂ ಇದೆ. ಮೋದಿ ಕೆಳಗಿಳಿಯುವ ಊಹಾಪೋಹ ಸುದ್ದಿಗಳು ಇರುವುದರಿಂದ, ಮಾಧ್ಯಮದವರು ಅದನ್ನು ಹೆಚ್ಚುಹೆಚ್ಚು ಪ್ರಚಾರ ಮಾಡಬೇಕು. ಬಿಜೆಪಿಯವರು ಒನ್ ನೇಶನ್, ಒನ್ ಇಲೆಕ್ಷನ್ ಕಾಯಿದೆಯನ್ನು ಸದ್ಯಕ್ಕೆ ಮಂಡಣೆ ಮಾಡುವುದಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ನನ್ನ ಬಿಜೆಪಿ ಗೆಳೆಯರೇ ನಿತಿನ್ ಗಡ್ಕರಿ ಮುಂದಿನ ಪ್ರಧಾನಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅವರಲ್ಲೂ ಭಿನ್ನಾಭಿಪ್ರಾಯವಿದೆ, ಕುಟುಂಬ ಎಂದ ಮೇಲೆ ಸಣ್ಣಪುಟ್ಟ ಗೊಂದಲಗಳು ಇರುತ್ತದೆ. ನಮ್ಮಲ್ಲಿ ಯಾರು ಸಿಎಂ ಆಗಬೇಕು, ಕೆಪಿಸಿಸಿ ಅಧ್ಯಕ್ಷರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಬಿಜೆಪಿಯವರಿಗೆ ಮತದಾರ ಒಂದು ಅವಕಾಶ ಕೊಟ್ಟಿದ್ದಾನೆ. ಈ ಅವಕಾಶದಲ್ಲಿ ಏನು ಮಿಂಚಬೇಕೋ ಅದಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಚೆನ್ನಾಗಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ.
