‘ದಿಲ್ಲಿ ಮೇ ಭಜಪಾ ಕಿ ಉಪಲಬ್ಧಿಯಾನ್’ (ದೆಹಲಿಯಲ್ಲಿ ಬಿಜೆಪಿ ಸಾಧನೆಗಳು) ಎಂಬ ಖಾಲಿ ಪುಸ್ತಕವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಬಿಡುಗಡೆ ಮಾಡಿದೆ. ಬಿಜೆಪಿ ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದಿರುವ ಎಎಪಿ, ಖಾಲಿ ಪುಸ್ತಕಗಳನ್ನು ಬಿಡುಗಡೆ ಅಪಹಾಸ್ಯ ಮಾಡಿದೆ.
ಎಎಪಿ ರಾಜ್ಯಸಭಾ ಸದಸ್ಯ ಎಂಜಯ್ ಸಿಂಗ್ ಪತ್ರಿಕಾಗೋಷ್ಟಿಯಲ್ಲಿ ‘ಬಿಜೆಪಿ ಅಚೀವ್‌ಮೆಂಟ್ ಇನ್ ದೆಲ್ಲಿ’ ಎಂಬ ಹೆಸರಿನ ಖಾಲಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಆ ಪುಸ್ತಕಗಳ ಪ್ರತಿಗಳನ್ನು ಪುಸ್ತಕ ಮಳಿಗೆಗಳಲ್ಲಿ ಇಟ್ಟು, ಖಾಲಿ ಹಾಳೆಗಳಿರುವ ಪುಸ್ತಕವನ್ನು ತೆರೆದು, ಅದನ್ನು ವಿಡಿಯೋ ಮಾಡಿ, ಇದೇ ಬಿಜೆಪಿಯ ಸಾಧನೆಯೆಂದು ಸಾಮಾಜಿಕ ಜಾಲತಾಣದಲ್ಲಿ ಎಎಪಿ ವೈರಲ್ ಮಾಡಿದೆ.
ಪುಸ್ತಕವು ಬಿಜೆಪಿಯ ಅಪ್ರಬುದ್ಧತೆಯನ್ನು ಸಂಕೇತಿಸುತ್ತದೆ ಎಂದಿರುವ ಸಿಂಗ್, “ಬಿಜೆಪಿ ತನ್ನ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ ನಾವು ಅವರಿಗಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದೇವೆ. 2014ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಶಾಶ್ವತ ವಸತಿ ಒದಗಿಸುವುದು, ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ರೂಪಾಯಿಯನ್ನು ಬಲಪಡಿಸುವುದು ಹಾಗೂ ಗಡಿ ಭದ್ರತೆಯನ್ನು ಹೆಚ್ಚಿಸುವುದು ಸೇರಿದಂತೆ ಪೊಳ್ಳು ಭರವಸೆಗಳನ್ನು ನೀಡಿದೆ” ಎಂದು ಆರೋಪಿಸಿದ್ದಾರೆ.
Who did this 🤣🤣🤣 pic.twitter.com/0thgevZBEv
— aree_shuklajii (@th_anonymouse) January 20, 2025
“2014ರಲ್ಲಿ ಭಾರೀ ಭರವಸೆಗಳನ್ನು ನೀಡಿದ್ದ ಪ್ರಧಾನಿ ಮೋದಿ, ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂ. ತಲುಪಿಸಲು, ವಾರ್ಷಿಕವಾಗಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲು ಅಥವಾ ಕೊಳೆಗೇರಿಗಳಲ್ಲಿ ಪಕ್ಕಾ ಮನೆಗಳನ್ನು ಒದಗಿಸಲು ವಿಫಲರಾಗಿದ್ದಾರೆ. 50 ರೂ.ಗೆ ಪೆಟ್ರೋಲ್, 40 ರೂ.ಗೆ ಡೀಸೆಲ್ ಹಾಗೂ 250 ರೂ.ಗೆ ಅಡುಗೆ ಅನಿಲ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಾಸ್ತವ ಭಾರೀ ಗಂಭೀರವಾಗಿದೆ” ಎಂದು ಕಿಡಿಕಾರಿದ್ದಾರೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, “ಬಿಜೆಪಿಯ ಸಾಧನೆಗಳ ಕುರಿತು ಈ ಪುಸ್ತಕವನ್ನು ದೇಶದ ಮುಂದೆ ತರುವುದು ಅಗತ್ಯವಾಗಿತ್ತು. ಸಾರ್ವಜನಿಕರು ತಮಗೆ ಬಿಜೆಪಿ ಎಷ್ಟು ಸುಳ್ಳುಗಳನ್ನು ನೀಡಿತ್ತು ಎಂಬುದರ ಬಗ್ಗೆ ಗಮನಿಸಬೇಕು” ಎಂದು ಹೇಳಿದ್ದಾರೆ.