ರಾಜ್ಯದ ಕೊಬ್ಬರಿ ಮತ್ತು ಅಡಿಕೆ ಬೆಳೆಗಾರರು ಸೇರಿದಂತೆ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದರು.
ಅಡಿಕೆಗೆ ಬರುತ್ತಿರುವ ರೋಗಗಳ ಪರಿಹಾರಕ್ಕೆ ₹67 ಕೋಟಿಗಳನ್ನು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ಚೌಹಾಣ್ ಅವರು ಘೋಷಣೆ ಮಾಡಿದ್ದು, ಆ ಬಗ್ಗೆ ಕುಮಾರಸ್ವಾಮಿ ಕೃಷಿ ಸಚಿವರಿಗೆ ಅಭಿನಂದನೆ ತಿಳಿಸಿದರು. ಅಗತ್ಯ ಮಾರುಕಟ್ಟೆ ಸೌಲಭ್ಯದ ಕೊರತೆ ಹಾಗೂ ಬೆಳೆ ತೆಗೆಯುವ ಬಗ್ಗೆ ಸವಾಲು ಎದುರಿಸುವ ರೈತರಿಗೆ ಸಹಾಯ ಹಸ್ತದ ಬೇಕಿದೆ. ಈ ನಿಟ್ಟಿನಲ್ಲಿ ತಾವು ನೀಡಿರುವ ಭರವಸೆ ರೈತರಲ್ಲಿ ಹರ್ಷ ಮೂಡಿಸಿದೆ ಎಂದು ಕುಮಾರಸ್ವಾಮಿ ಅವರು ಚೌಹಾಣ್ ಅವರಿಗೆ ಹೇಳಿದರು.
ಕರ್ನಾಟಕದ ತೆಂಗು ಬೆಳೆಗಾರರು ಎದುರಿಸುತ್ತಿರುವ ಕಠಿಣ ಸವಾಲುಗಳ ಬಗ್ಗೆ ಕೃಷಿ ಸಚಿವರ ಗಮನ ಸೆಳೆದ ಕುಮಾರಸ್ವಾಮಿ ಅವರು; ತೆಂಗು ಬೆಳೆಗಾರರ ಸಂಕಷ್ಟ ಪರಿಹಾರ ಮಾಡುವ ನಿಟ್ಟಿನಲ್ಲಿ ತಮ್ಮ ಕಡೆಯಿಂದ ದೊಡ್ಡ ಉಪ ಕ್ರಮ ಆಗಬೇಕಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯದಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿ ಅವರ ಸಂಕಷ್ಟಗಳಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಉತ್ಪನ್ನಗಳ ಸರಪಳಿಯಿಂದ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಅಗತ್ಯತೆಯ ಬಗ್ಗೆಯೂ ಇಬ್ಬರೂ ಸಚಿವರು ಚರ್ಚೆ ನಡೆಸಿದರು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳ ಉಪಟಳ ಮೆರೆ ಮೀರಿದೆ. ಕೇಂದ್ರ ಸರ್ಕಾರದಿಂದ ಎಷ್ಟೇ ಅನುಕೂಲರ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ರೈತರ ಸಂಕಷ್ಟ ಬಗೆಹರಿದಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಬೆಲೆ ಖಾತರಿ ಜತೆಗೆ, ಬೆಳೆಗಳ ಅತ್ಯುತ್ತಮ ದಾಸ್ತಾನು ಖಾತರಿಯನ್ನು ರೈತರಿಗೆ ಕೊಡಬೇಕಿದೆ ಎಂಬ ಬಗ್ಗೆ ಸಚಿವರಿಬ್ಬರೂ ಚರ್ಚಿಸಿದರು.