ಏಟಿಎಂ ಕಾರ್ಡ್ ಬದಲಿಸಿ ಹಣ ಲೂಟಿ ಮಾಡುತ್ತಿದ್ದ ಆರೋಪಿಯನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಲಸಿಂದ ಗ್ರಾಮದ ನಿವಾಸಿ ಕಿರಣಕುಮಾರ ಕಾಳೇಗೌಡ (32) ಎಂದು ಗುರುತಿಸಲಾಗಿದೆ. ಈತನಿಂದ 47 ಸಾವಿರ ರೂ. ನಗದು, 28 ಸಾವಿರ ಮೌಲ್ಯದ ಮೊಬೈಲ್, ವಿವಿಧ ಬ್ಯಾಂಕ್ಗಳ 60ಕ್ಕೂ ಹೆಚ್ಚು ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಕಿರಣಕುಮಾರ ಹಣ ಡ್ರಾ ಮಾಡಿಕೊಳ್ಳುವ ನೆಪದಲ್ಲಿ ಎಟಿಎಂ ಹತ್ತಿರವೇ ನಿಲ್ಲುತ್ತಿದ್ದ. ಎಟಿಎಂಗೆ ಬರುವ ಅನಕ್ಷರಸ್ಥರು, ಅಮಾಯಕರು ಸಹಾಯ ಕೇಳಿದಾಗ ಅವರ ಎಟಿಎಂ ತೆಗೆದುಕೊಂಡು ಪಾಸ್ವರ್ಡ್ ಪಡೆಯುತ್ತಿದ್ದ. ಬಳಿಕ ಹಣ ಬರಲಿಲ್ಲ, ಸಮಸ್ಯೆ ಇದೆ ಎಂದು ಅವರಿಗೆ ತನ್ನ ಬಳಿಯಿರುವ ಬದಲಿ ಎಟಿಎಂ ಕಾರ್ಡ್ ಕೊಡುತ್ತಿದ್ದ. ಈ ವೇಳೆ ಪಾಸ್ವರ್ಡ್ ತಿಳಿದುಕೊಂಡಿರುತ್ತಿದ್ದ ಆರೋಪಿಯು ಬಳಿಕ ಬೇರೆ ಎಟಿಎಂಗಳಿಗೆ ತೆರಳಿ ಹಣ ಡ್ರಾ ಮಾಡಿಕೊಂಡು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು 2024 ಆ.6ರಂದು ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಕಾರ್ಡ್ ಬದಲಾವಣೆ ಮಾಡಿ 75 ಸಾವಿರ ಕಳ್ಳತನ ಮಾಡಿದ್ದ. ಬಂಕಾಪುರ ಪಿಎಸ್ಐ ನಿಂಗರಾಜ್ ನೇತೃತ್ವದಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ. ಕಿರಣಕುಮಾರ್ ಅಂತರ್ಜಿಲ್ಲೆಯಲ್ಲದೆ, ಅಂತಾರಾಜ್ಯ ವಂಚಕನಾಗಿದ್ದಾನೆ ಎಂಬ ಅಂಶ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
