ವಿಜಯಪುರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ಅಪರಾಧಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗೆ ಪ್ರಗತಿಪರ ಸಂಘಟನೆಗಳ ವೇದಿಕೆ ಮನವಿ ಸಲ್ಲಿಸಿತು.
ಹೊಟ್ಟೆಪಾಡಿಗಾಗಿ ಬೇರೆ ಕಡೆಗಳಿಂದ ಕೆಲಸಕ್ಕೆ ಬಂದ ಅಮಾಯಕ ಕಾರ್ಮಿಕರಿಗೆ ಮನಬಂದಂತೆ ಥಳಿಸಿದ ಪ್ರಕರಣ ಇಡೀ ಮಾನವ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಶ್ರಮಿಕ ವರ್ಗದ ಮೇಲೆ ಮಾಲೀಕರ ನಿರಂತರ ದೌರ್ಜನ್ಯ ಹೆಚ್ಚತ್ತಲೇ ಇದೆ. ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಮುಂದುವರೆದು ಅಪರಾಧಿಗಳನ್ನು ಸೂಕ್ತ ಕಾನೂನು ಕ್ರಮಕ್ಕೊಳಪಡಿಸಬೇಕು. ಶೋಚನೀಯ ಸ್ಥಿತಿಯಲ್ಲಿರುವ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ವೇದಿಕೆ ಮುಖಂಡರು ಒತ್ತಾಯಿಸಿದರು.
ಆರೋಪಿಗಳ ಪರವಾಗಿ ಯಾರು ಎಷ್ಟೇ ಪ್ರಭಾವ ಬೀರಿದರೂ ಪರಿಗಣಿಸದೆ ಎಲ್ಲ ಆರೋಪಿಗಳಿಗೆ ನಿರ್ದಯನೀಯ ಶಿಕ್ಷೆ ನೀಡಬೇಕು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಜಿಲ್ಲಾ ಕಾರ್ಮಿಕ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಪ್ರತಿಭಟನೆ ಮೂಲಕ ವೇದಿಕೆ ಆಗ್ರಹಿಸಿತು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಪಠ್ಯದ ಜೊತೆಗೆ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ | ಬಿ ಜಿ ಮೂಲಿಮನಿ
ಪ್ರತಿಭಟನಾ ಸಭೆಯಲ್ಲಿ ವೇದಿಕೆ ಮುಖಂಡ ಸಿ ಎ ಘಂಟೆಪ್ಪಗೊಳ್, ಪ್ರಭುಗೌಡ ಪಾಟಿಲ್, ಶ್ರೀನಾಥ ಪೂಜಾರಿ, ಸಿದ್ದಲಿಂಗ ಬಾಗೇವಾಡಿ, ಹಫೀಜ್ ಸಿದ್ದಿಕಿ, ಸಂಗಮೇಶ ಸಗರ, ಬಾಳು ಜೆವೂರ, ಚೆನ್ನು ಕಟ್ಟಿಮನಿ, ಕರಿಯಪ್ಪ ಗುಡಿಮನಿ, ಶಿವಬಾಳಮ್ಮ ಕೊಂಡಗೂಳಿ, ಅಕ್ಷಯ ಅಜಮನಿ, ರಮೇಶಗೌಡ ಪಾಟೀಲ, ಜಕರಾಯ ಪೂಜಾರಿ, ಮಾದೇವಪ್ಪ ತೇಲಿ, ಎಮ್ ಎಮ್ ಮಾಶಳಕರ್, ಮಹಮದ್ ಇದಾಯತ್, ರೇಷ್ಮಾ ಮುಂತಾದವರು ಇದ್ದರು.
