ಹೊಸ ಪುಸ್ತಕ | ʼಕೊರಗರು; ತುಳುನಾಡಿನ ಮಾತೃ ಸಮುದಾಯʼ- ನವೀನ್‌ ಸೂರಿಂಜೆ

Date:

Advertisements

ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರ ಐದನೇ ಕೃತಿ ʼಕೊರಗರು; ತುಳುನಾಡಿನ ಮಾತೃ ಸಮುದಾಯʼ ನಾಳೆ ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ವಸ್ತುನಿಷ್ಠ ವಿಚಾರಗಳಿಗೆ ನಿಷ್ಠರಾದ ವಾಸ್ತವವಾದಿ, ಹಿರಿಯ ಪತ್ರಕರ್ತ ನವೀನ್ ಸೂರಿಂಜೆಯವರಿಂದ ಕೊರಗರ ಕುರಿತಾದ ಬರಹಗಳ ಸಾಲಿಗೆ ಮತ್ತೊಂದು ಕೊಡುಗೆಯಾಗಿ ʼಕೊರಗರು; ತುಳುನಾಡಿನ ಮಾತೃ ಸಮುದಾಯʼ ಈ ಕೃತಿ ಸಲ್ಲುತ್ತಿದೆ. ನವೀನ್ ರವರು ನಿಷ್ಠುರವಾದಿಯಾಗಿ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡವರು. ಯಾರ ಮುಲಾಜಿಗೂ ಒಳಗಾಗದೆ ವಾಸ್ತವವನ್ನು ಅನಾವರಣ ಮಾಡುವ ಛಾತಿಯುಳ್ಳವರು. ಮಂಗಳೂರಿನಲ್ಲಿ ಉಷಾ ಕಿರಣ, ಕರಾವಳಿ ಅಲೆ ಸಂಜೆ ಪತ್ರಿಕೆಗಳಲ್ಲಿ ಇವರು ಬರೆಯುತ್ತಿದ್ದಾಗಲೇ ಅವರ ಬರಹಗಳನ್ನು ಗಮನಿಸುತ್ತಿದ್ದೆ. ಮಾನವ ಹಕ್ಕುಗಳ ಬಗ್ಗೆ ನಿರಂತರ ಹೋರಾಡುತ್ತಿರುವ ಇವರು ಅದಕ್ಕಾಗಿ ಕೇಸುಗಳನ್ನು ಹಾಕಿಸಿಕೊಂಡವರು. ದೀನ ದಲಿತರ ಪರ ಧ್ವನಿ ಎತ್ತರಿಸುವ ನವೀನ್ ಸೂರಿಂಜೆಯವರಿಗೆ ಹಲವು ಕಡೆಗಳಿಂದ ಒತ್ತಡಗಳಿವೆ. ಬಹುಜನ ಸಮಾಜಮುಖಿ ಚಿಂತನೆಯನ್ನು ಹೊಂದಿರುವ ನವೀನ್, ದುಷ್ಟರಿಗೆ ಕನಸಿನಲ್ಲೂ ಬೆವರಿಳಿಸುವ ತಾಕತ್ತು ಹೊಂದಿದ್ದಾರೆ. ಇಂತಹ ಧೀಮಂತ ಪತ್ರಕರ್ತ, ಈ ನೆಲಮೂಲದ ಜನಸಮುದಾಯದ ಬಗ್ಗೆ ಬರೆಯುತ್ತಾರೆ ಎಂದರೆ ಅದರಲ್ಲೊಂದು ಗಟ್ಟಿ ತಿರುಳು ಇರಲೇಬೇಕು.

ಮೂಲನಿವಾಸಿ ಕೊರಗ ಸಮುದಾಯದ ಬಗ್ಗೆ ನೂರಾರು ಮಂದಿ ಬರೆದಿದ್ದಾರೆ, ಬರೆಯುತ್ತಲೇ ಇದ್ದಾರೆ. ಅವುಗಳಲ್ಲಿ ಕೆಲವು ಬರಹಗಳು ಕೊರಗರ ಅಮಾನವೀಯ ಅಸಹಾಯಕ ಬದುಕನ್ನೂ ತುಳುನಾಡಿನ ಸಾಂಸ್ಕೃತಿಕ ವೈಭವ ಎನ್ನುವಂತೆ ಬಿಂಬಿಸುತ್ತವೆ. ಉದಾಹರಣೆಗೆ, ಕಂಬಳದಲ್ಲಿ ಕೊರಗರ ಭಾಗೀದಾರಿಕೆಯ ಬಗ್ಗೆ ಬರೆದವರೆಲ್ಲರೂ ಅಲ್ಲಿ ನಡೆಯುವ ಕೆಲವು ಕ್ರಮಗಳನ್ನು ತುಳುನಾಡಿನ ಪರಂಪರೆ, ಸಂಸ್ಕೃತಿ, ಸಂಪ್ರದಾಯವೆಂದು ಅತಿರಂಜನೀಯವಾಗಿ ವರ್ಣಿಸುತ್ತಾರೆ. ಪನಿಕುಲ್ಲುನು (ಹನಿಗೆ ಕೂರುವುದು) ಆಚರಣೆಯಲ್ಲಿ ಕಂಬಳದ ಗದ್ದೆಗೆ ಕೊರಗರು ತಮ್ಮ ವೀರ್ಯವನ್ನು ಸ್ಕಲಿಸುತ್ತಾರೆ. ಅದರಿಂದಾಗಿ ಗದ್ದೆಯಲ್ಲಿ ಫಸಲು ಫಲವತ್ತಾಗಿ ಬೆಳೆಯುತ್ತದೆ. ತುಳುನಾಡಿನ ಸಿರಿ ಸಂಪತ್ತು ವಿಜೃಂಭಿಸುತ್ತದೆ ಎಂದೆಲ್ಲ ಬಣ್ಣಿಸುತ್ತಾರೆ. ವಾಸ್ತವವಾಗಿ ಅಲ್ಲಿ ಅಂತಹ ಕ್ರಿಯೆ ನಡೆಯುವುದೇ ಇಲ್ಲ. ರಾತ್ರಿ ಇಡೀ ಗದ್ದೆ ಕಾಯುವಾಗ ಕೊರಗರು ಡೋಲು ಬಡಿಯುತ್ತಾ ಕುಣಿಯುತ್ತಾರೆ, ಹಾಡುತ್ತಾರೆ. ಕೆಲವೊಮ್ಮೆ ಸಮಯ ಕಳೆಯುವುದಕ್ಕಾಗಿ ಕೆಲವರು ಹೆಣ್ಣು ಗಂಡಿನ ವೇಷ ಹಾಕಿ ಅಸಭ್ಯವಾಗಿ ನಟಿಸುತ್ತಾರೆ. ಇದು ನಟನೆಯೇ ಹೊರತು ಬಹಿರಂಗವಾಗಿ ನಡೆಯುವ ಲೈಂಗಿಕ ಚಟುವಟಿಕೆಗಳಲ್ಲ. ಇದನ್ನೇ ಕೆಲವು ಬರಹಗಾರರು ಕದ್ದು ಮುಚ್ಚಿ ನೋಡಿ, ಕೊರಗರ ವೀರ್ಯದಿಂದಲೇ ಊರಲ್ಲಿ ಕೃಷಿ ನಡೆಯುತ್ತದೆ ಎಂಬಂತೆ, ಇದು ಫಲವಂತಿಕೆಯ ದ್ಯೋತಕ ಎಂದು ಬಿಂಬಿಸುತ್ತಾರೆ. ಇಂತಹ ಅಸಂಬದ್ಧ ವಿಚಾರಗಳು ಕೊರಗರನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುತ್ತದೆ. ಪ್ರಸ್ತುತ ನವೀನ್ ಸೂರಿಂಜೆಯವರ ಕೃತಿಯಲ್ಲೂ ಕಂಬಳದ ಉಲ್ಲೇಖವಿದೆ. ನವೀನ್ ಸೂರಿಂಜೆಯವರು, ಬಂಟ, ಗೌಡರಿಗೆ ಫಲವಂತಿಕೆಯ ಕೊರತೆ ಇದೆಯಾ ಎಂದು ಅನುಮಾನಿಸಿರುವುದು ಸರಿಯಾಗಿಯೇ ಇದೆ. ಮುಗ್ಧ ಕೊರಗರನ್ನು ಹೆದರಿಸುವುದು, ಬೆದರಿಸುವುದು ಸುಲಭವಾದ್ದರಿಂದ ಅವರನ್ನು ಬಲಿಷ್ಠ ಸಮುದಾಯಗಳು ಅತ್ಯಂತ ಹೀನಾಯವಾಗಿ ಬಳಸಿಕೊಂಡಿದೆ.

Advertisements

ಡಾ. ಮಹ್ಮದ್ ಪೀರ್ ಅವರ ಅಧ್ಯಯನಕ್ಕೆ ಮೂಲ ಕಾರಣರಾದವರು ಕಾಪು ದೇವದಾಸ ಶೆಟ್ಟಿಯವರು. ಕೊರಗರನ್ನು ಸಂಘಟಿಸಿ, ಹೋರಾಟದ ಮನಸ್ಥಿತಿಗೆ ಒಗ್ಗಿಸಿದ ಬಲಿಷ್ಠ ಬಂಟ ದೇವದಾಸ್ ಶೆಟ್ಟಿಯವರನ್ನು ಕೊರಗರೆಂದೂ ಮರೆಯುವಂತಿಲ್ಲ. ಅವರು ಕಟ್ಟಿ ಬೆಳೆಸಿದ ಅದೇ ಸಂಘಟನೆ ಭೂಮಿ ಚಳವಳಿ, ಅಜಲು ಚಳವಳಿ ಹಾಗೂ ಪೌಷ್ಟಿಕ ಆಹಾರಕ್ಕಾಗಿನ ಹೋರಾಟಗಳನ್ನು ಮಾಡಿ ಸಮುದಾಯಕ್ಕೆ ಒಂದಿಷ್ಟು ಜೀವವಾಯು ನೀಡಿದೆ. ವಿಧಾನಸಭೆಯಲ್ಲಿ ಕೊರಗರ ಕುರಿತಾಗಿ ನಡೆದ ಚರ್ಚೆಯ ವಿವರಗಳನ್ನು ಇಲ್ಲಿ ಉಲ್ಲೇಖಿಸಿರುವುದು ಸಕಾಲಿಕವಾಗಿದೆ. ನಂತರದ ದಿನಗಳಲ್ಲಿ ವಿಧಾನ ಪರಿಷತ್ ನಲ್ಲಿ ಡಾ. ಸಿದ್ಧಲಿಂಗಯ್ಯನವರು ಕೂಡಾ ಕೊರಗರ ಪರವಾಗಿ ಧ್ವನಿ ಎತ್ತಿದ್ದಾರೆ ಎನ್ನುವುದು ಉಲ್ಲೇಖಾರ್ಹ. ವಿಪರ್ಯಾಸವೆಂದರೆ ಡಾ. ಪೀರ್ ವರದಿಯು ಇಂದಿಗೂ ಸರಕಾರದ ಕಪಾಟಿನಲ್ಲಿ ಧೂಳು ನೆಕ್ಕುತ್ತಿದೆ.

ನವೀನ್ ಸೂರಿಂಜೆಯವರು ಕೊರಗರ ಜನಪದ ಐತಿಹ್ಯವನ್ನು ತೆರೆದಿಡುವ ಪ್ರಯತ್ನವನ್ನೂ ಮಾಡಿದ್ದಾರೆ. ಜನಪದ ಎಂದ ಮೇಲೆ ಯಾವುದೇ ವಿಚಾರಗಳು ಒಂದೇ ರೀತಿಯಾಗಿರುವುದು ಸಾಧ್ಯವಿಲ್ಲ. ಕಾಲಕಾಲಕ್ಕೆ ಬಾಯಿಯಿಂದ ಬಾಯಿಗೆ ಹರಿದಾಡುವ ಕಥಾನಕಗಳು ಆಯಾಕಾಲದ ಸಂಗತಿಗಳನ್ನು ಲೇಪಿಸಿಕೊಂಡೇ ಮುಂದುವರಿಯುತ್ತದೆ. ಕೊರಗರ ಜನಪದ ಕತೆಗಳೂ ವಿಭಿನ್ನ ಕವಲುಗಳಲ್ಲಿ ಹರಿದಿರುವುದು ಕಂಡುಬರುತ್ತದೆ. ಇದೇ ಸತ್ಯ ಎಂದು ವಾದಿಸುವಂತಿಲ್ಲ. ಕೊರಗರ ಅರಸ ಹುಭಾಷಿಕನ ಕತೆ, ಬರೀ ಕತೆಯಲ್ಲದೆ ಇತಿಹಾಸವೂ ಆಗಿರಬಹುದು. ಆ ಬಗ್ಗೆ ಸಂಶೋಧನೆಗಳು ಇನ್ನೂ ಕಡಿಮೆ ನಡೆದಿರಬಹುದು ಎಂದೆನಿಸುತ್ತದೆ. ಅದೇನಿದ್ದರೂ, ಬ್ರಾಹ್ಮಣರು ಈ ನೆಲಕ್ಕೆ ಕಾಲಿಟ್ಟಾಗ ಕೊರಗರು ಪ್ರಬಲವಾದ ಪ್ರತಿರೋಧವನ್ನು ಒಡ್ಡಿದ್ದರು ಎನ್ನುವುದು ಸತ್ಯ.

ಚಂಡ-ಮುಂಡರು ಚಾಂಡಾಲ ವರ್ಗಕ್ಕೆ ಸೇರಿದವರು ಮತ್ತು ಕೊರಗರನ್ನು ಚಾಂಡಲರು ಎನ್ನಲಾಗುತ್ತಿತ್ತು ಎನ್ನುವುದು ನನಗೆ ಹೊಸತು. ಕಟೀಲು, ಕಾಂತಾವರ, ಬಪ್ಪನಾಡು ವ್ಯಾಪ್ತಿಯಲ್ಲಿ ಕೊರಗರು ದಟ್ಟವಾಗಿ ಹರಡಿದ್ದರು ಹಾಗೂ ಅಲ್ಲಿನ ಕತೆಗಳನ್ನು ಬೇರೆ ಬೇರೆ ರೂಪದಲ್ಲಿ ಹೇಳಲಾಗುತ್ತಿದೆ. ಕಾಪು ಸಮೀಪದ ಎಲ್ಲೂರು ವಿಶ್ವೇಶ್ವರ ದೇವಳದ ದೇವರು ಕೂಡ ಬುಡಕಟ್ಟು ಜನರಿಗೆ ಸಿಕ್ಕಿದ ಬಗ್ಗೆ ಜನಪದ ಕತೆಗಳು ಇವೆ. ಇಲ್ಲಿನ ಅತಿ ಪುರಾತನ ಎನ್ನಲಾಗುವ ದೇಗುಲಗಳೆಲ್ಲ ಈ ಬುಡಕಟ್ಟು ಜನರ ಆರಾಧನಾ ಕ್ಷೇತ್ರಗಳೇ ಆಗಿದ್ದಿರಬಹುದು. ಕೊರಗರು ಈ ನೆಲದ ಆದಿಮರು ಆಗಿದ್ದರಿಂದ ಈ ಎಲ್ಲ ದಂತ ಕತೆಗಳಿಗೆ ಕನಿಷ್ಠ ಪುರಾವೆ ಇದೆ ಎನ್ನಬಹುದು. ವೈದಿಕಾಗಮನದ ಬಳಿಕ ಇಲ್ಲಿನ ಚಿತ್ರಣ ಬದಲಾಗುತ್ತಿರುವುದು ಬಹಿರಂಗ ಸತ್ಯ.

ನವೀನ್ ಸೂರಿಂಜೆ ಉಲ್ಲೇಖಿಸಿರುವ ಕೊರಗರು ಮತ್ತು ಕೊರಗ ತನಿಯನ ಹುಟ್ಟಿನ ಬಗ್ಗೆಯೂ ಹತ್ತಾರು ದಂತ ಕತೆಗಳಿವೆ. ಒಂದೊಂದು ಕತೆಗಳೂ ಪ್ರತ್ಯೇಕ ದಿಕ್ಕಿನಲ್ಲಿ ಸಾಗುತ್ತವೆ. ತೀರಾ ಇತ್ತೀಚೆಗೆ ಅಂದರೆ ಮೂವತ್ತರಿಂದ ಮೂವತ್ತೈದು ವರ್ಷಗಳಿಂದೀಚೆಗೆ, ಕೊರಗ ತನಿಯನನ್ನು ಕೊರಗಜ್ಜ ಎಂದು ಮರುನಾಮಕರಣ ಮಾಡಿ ಅಪಭ್ರಂಶ ಮಾಡಲಾಗಿದೆ. ಈಗ ಮೂಲ ಕೊರಗ ತನಿಯ ಎರಡನೇ ಬಾರಿ ಮಾಯವಾಗಿ ಕೊರಗಜ್ಜನಾಗಿ ವಿಜೃಂಭಿಸುತ್ತಿದ್ದಾನೆ! ವಿದ್ವಾಂಸರು ಹೇಳುವಂತೆ ತನಿಯ ಮಾಯವಾದಾಗ ಸುಮಾರು 18 ರಿಂದ 25 ವರ್ಷ ಪ್ರಾಯವಿರಬಹುದು. ಆದರೂ ಈಗ ಕೊರಗಜ್ಜ!

ಕೊರತಿ ದೈವವು ಕೊರಗರಲ್ಲಿ ತೀರಾ ಅಪರೂಪ. ಇತ್ತೀಚೆಗೆ ಕೆಲವು ಕಡೆ ಇತರರ ಮಾರ್ಗದರ್ಶನದಂತೆ ಕೊರಗರು ತಮ್ಮ ನೆಲೆಗಳಲ್ಲಿ ಕೊರತಿಯ ಪ್ರತಿಷ್ಟಾಪನೆ ಮಾಡಿಕೊಂಡಿದ್ದಾರೆ. ಕೊರಗರ ಆಪ್ತ ದೈವ ಬೈಕಾಡ್ದಿಯನ್ನು ಕೆಲವು ಕಡೆ ಕೊರತಿ, ಜಾಲಕೊರತಿ ಎಂಬುವುದಾಗಿ ಹೇಳುವುದಿದೆ. ಕೊರಗ ತನಿಯ, ಬೈಕಾಡ್ದಿ, ಅಂಜ ಮಂಜ, ಹಾಗೂ ಗುರುವಜ್ಜ ಮೂಲತಃ ಕೊರಗ ಸಮುದಾಯದಲ್ಲಿ ಬಾಳಿ ಬದುಕಿದವರು. ಕಾಲಾಂತರದಲ್ಲಿ ಕಾಲವಾದವರು.

ಕಮ್ಯುನಿಷ್ಟ್ ಸಿದ್ಧಾಂತವು ಕೊರಗರಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ. ಆದರೆ ಸಹಸ್ರಮಾನಗಳಿಂದ ತಾವು ನಂಬಿ ಆರಾಧಿಸಿಕೊಂಡು ಬಂದಿರುವ ದೈವ ಸಂಸ್ಕೃತಿಯನ್ನು ಈ ಬಡಪಾಯಿಗಳಿಂದ ದೂರ ಮಾಡಿ ಅನಾಥ ಪ್ರಜ್ಞೆಯನ್ನು ಹುಟ್ಟುಹಾಕಬಹುದು. ಸಮುದಾಯವು ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳುವುದು. ಸೋ ಕಾಲ್ಡ್ ಧರ್ಮಗಳ ಲೇಪನ ಇಲ್ಲದ ಬುಡಕಟ್ಟು ಚಹರೆಗಳು ಈ ಸಮುದಾಯಕ್ಕೆ ಒಂದಷ್ಟು ಬೂಸ್ಟ್ ಒದಗಿಸಬಹುದು. ಇಂದು ಇವರಿಗೆ ಮೌಢ್ಯತೆಗಳಿಲ್ಲದ ಅಸ್ಮಿತೆ, ಚಹರೆಗಳನ್ನು ಉಳಿಸಿಕೊಳ್ಳುವಂತಹ ತರಬೇತಿಯ ಅನಿವಾರ್ಯತೆಗಳಿವೆ.

ಈ ನಿಟ್ಟಿನಲ್ಲಿ ಸರಕಾರ ಒಂದಷ್ಟು ಯೋಜನೆಗಳನ್ನು ರೂಪಿಸಬಹುದು. ಮುಖ್ಯವಾಗಿ, ಕನಿಷ್ಠ ಇಪ್ಪತ್ತೈದು ಎಕ್ರೆ ಜಮೀನಿನಲ್ಲಿ ಥೀಮ್ ಪಾರ್ಕ್ ಮಾದರಿಯ ಕೊರಗರ ಸಾಂಸ್ಕೃತಿಕ ವಲಯ ಸ್ಥಾಪನೆಯಾಗಬೇಕು. ಅದರಲ್ಲಿ ಏನೆಲ್ಲ ಇರಬೇಕು ಎನ್ನುವುದನ್ನು ಕೊರಗ ಮುಖಂಡರೊಂದಿಗೆ ಚರ್ಚಿಸಿ ನೀಲ ನಕ್ಷೆ ತಯಾರಿಸಬಹುದು. ಸಮುದಾಯದಲ್ಲಿ ಶಿಕ್ಷಣವನ್ನು ಉನ್ನತೀಕರಿಸಬೇಕು. ಇಂದಿನ ಯುವಜನರ ವಿದ್ಯಾರ್ಹತೆಗೆ ಅನುಗುಣವಾಗಿ ನೇರ ನೇಮಕಾತಿ ಮೂಲಕ ಉದ್ಯೋಗ ನೀಡಬೇಕು. ಇವರ ಮರಣದ ಪ್ರಮಾಣವನ್ನು ತಗ್ಗಿಸುವಂತಹ ಯೋಜನೆಗಳು ಆಗಬೇಕು. ಶತ ಶತಮಾನಗಳಿಂದ ಶೋಷಣೆ ಮಾಡಿದುದಕ್ಕಾಗಿ ಸಾರ್ವಜನಿಕ ಕ್ಷೇತ್ರಗಳು ಇವರಿಗೆ ತೆರೆದುಕೊಳ್ಳಬೇಕು. ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಗಳಲ್ಲಿ ಇವರನ್ನು ಒಳಗಿನ ಕೆಲಸಗಳಿಗೆ ಬಳಸಿಕೊಳ್ಳುವಂತಾದರೆ ಇವರ ಸಾವಿರ ವರ್ಷದ ಭಯ, ಕೀಳರಿಮೆಗಳು ದೂರವಾಗಬಹುದು.

ಈ ನಿಟ್ಟಿನಲ್ಲಿ ನವೀನ್ ಸೂರಿಂಜೆಯವರ ಈ ಕೃತಿಯು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವುದು. ರಾಜಕೀಯ ಕ್ಷೇತ್ರದಲ್ಲಿ ನಾಮ ನಿರ್ದೇಶನದ ಮೂಲಕ ಅವಕಾಶ ಒದಗಿಸುವಂತಾಗಬೇಕು. ಆ ಕುರಿತ ವಾದ ಮುನ್ನಲೆಗೆ ಬರಬೇಕು ಎಂಬ ಸೂರಿಂಜೆಯವರ ಸಲಹೆಯ ಕಾರ್ಯರೂಪಕ್ಕೆ ಇದು ಸಕಾಲವಾಗಿದೆ. ಕಟೀಲು, ಕಾಂತಾವರ ಮುಂತಾದ ದೇಗುಲಗಳ ಆಡಳಿತದವರೂ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಮೂಲೆಗುಂಪಾಗಿರುವ ಮೂಲನಿವಾಸಿಗಳು ಅಳಿದು ಹೋಗುವ ಮುನ್ನ ಈ ಅವಕಾಶಗಳು ಇವರಿಗೆ ದಕ್ಕೀತೆ?!

ನೇತ್ರಾವತಿಯಲ್ಲಿ ನೆತ್ತರು, ಸದನದಲ್ಲಿ ಶ್ರೀರಾಮ ರೆಡ್ಡಿ, ಕುತ್ಲೂರು ಕಥನ, ನಡುಬಗ್ಗಿಸದ ಎದೆಯ ದನಿ ಮುಂತಾದ ಕೃತಿಗಳನ್ನು ಜನಮನಕ್ಕೆ ಅರ್ಪಿಸಿದ ನವೀನ್ ಸೂರಿಂಜೆಯವರಿಂದ ಇನ್ನಷ್ಟು ಉತ್ಕೃಷ್ಟವಾದ, ಸಂವೇದನಾ ಶೀಲ, ಸಮಾಜಮಖಿ ಬರಹಗಳು ಪುಸ್ತಕ ರೂಪ ಪಡೆಯಲಿ. ಜನಮನದ ಮುಸುಕು ಸರಿಸುವ ಪ್ರಯತ್ನ ಮುಂದುವರಿಯಲಿ ಎಂಬ ಸದಾಶಯಗಳೊಂದಿಗೆ, ಪ್ರಸ್ತುತ ಕೃತಿಗೆ ಮುನ್ನುಡಿ ಬರೆಯುವ ಜವಾಬ್ದಾರಿಯನ್ನು ನನಗೇ ವಹಿಸಿಕೊಟ್ಟಿರುವುದಕ್ಕೆ ನವೀನ್ ಸೂರಿಂಜೆಯವರಿಗೆ ಒಡಲಾಳದ ವಂದನೆಗಳು. (ಮುನ್ನುಡಿಯಿಂದ)

- ಪಾಂಗಾಳ ಬಾಬು ಕೊರಗ, ಸಾಹಿತಿ ಮತ್ತು ಕೊರಗ ಹಕ್ಕುಗಳ ಹೋರಾಟಗಾರರು
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X