ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು; ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ ಮಾಡುವುದು. 'ಹೊಲೆಮಾದಿಗರ ಕೇರಿಯಿಂದ ಬುದ್ಧನೆಡೆಗೆ' ಸಾಗಿರುವ ಕವಿಯ ಸೃಜನಶೀಲ ಕಾವ್ಯಯಾನವನ್ನು ಅವರ ಜನ್ಮದಿನದ ನೆಪದಲ್ಲಿ ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ...
ಆಧುನಿಕ ಕನ್ನಡ ದಲಿತ ಸಾಹಿತ್ಯ ಹಾಗೂ ದಲಿತ ಚಳವಳಿ ಇವೆರಡೂ ಸಾಂಸ್ಕೃತಿಕ ವಿದ್ಯಮಾನಗಳು ಜೀವಕೊರಳ ಸಂಬಂಧವನ್ನು ಪಡೆದಿವೆ. 1970 ರ ದಶಕದಲ್ಲಿ ಉಂಟಾದ ರಾಜಕೀಯ ಸ್ಥಿತ್ಯಂತರಗಳು, ಜನಪರ ಸಿದ್ಧಾಂತಗಳು, ಹೋರಾಟಗಳು ಮುನ್ನೆಲೆಗೆ ಬಂದದ್ದರಿಂದ ಆ ವಿಪ್ಲವ ಕಾಲಘಟ್ಟದ ಒಡಲಾಳದಲ್ಲಿ ಉಂಟಾದ ಸಾಮಾಜಿಕ ಪ್ರಜ್ಞೆಯ ಜಾಗೃತಿ ಸಿದ್ದಲಿಂಗಯ್ಯನವರ ಸೃಜನಶೀಲತೆಗೆ ಪ್ರೇರಣೆಯಾಯಿತು. “ಇಪ್ಪತ್ತನೆಯ ಶತಮಾನದ ಬಹುಮುಖ್ಯ ಸಾಮಾಜಿಕ ಕಾಳಜಿಯಾಗಿದ್ದ ಸಮಾನತೆಯ ಕೂಗನ್ನು ಕನ್ನಡದ ಸಂದರ್ಭದಲ್ಲಿ ಸಿದ್ಧಲಿಂಗಯ್ಯನವರು ಹಿಡಿದ ರೀತಿ ಅನನ್ಯವಾದದ್ದು. ಅವರ ಬರಹದ ವ್ಯಾಪ್ತಿ ದೊಡ್ಡದು. ವೈಚಾರಿಕವಾಗಿ ಅವರು ಮಾಡಿದ ಆಲೋಚನೆಗಳೆಲ್ಲವೂ ಕೇವಲ ವೈಚಾರಿಕ ನೆಲೆಗಟ್ಟಿನಿಂದಲೇ ಬಂದವುಗಳಲ್ಲ. ಅವುಗಳ ಹಿನ್ನೆಲೆಯಲ್ಲಿ ಅನುಭವದ ವ್ಯಾಪ್ತಿ ಇದೆ; ಬಡ, ಶೋಷಿತ ಸಮುದಾಯದ ನೋವಿನ ಸೆಲೆಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಸೃಜನಶೀಲಶಕ್ತಿ ಇದೆ. ತುಳಿತಕ್ಕೆ ಒಳಗಾದ ಅಸ್ಪೃಶ್ಯ ಜನಾಂಗ ಹಾಗೂ ಶೋಷಣೆಯ ವರ್ಗ ಸ್ವರೂಪವನ್ನು ಸಿದ್ಧಲಿಂಗಯ್ಯನವರು ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ವಿಶಿಷ್ಟ ಶೈಲಿಯಲ್ಲಿ ಹಿಡಿದಿಟ್ಟರು… ಹುಸಿ ಚರಿತ್ರೆಯೊಳಗಿನ ವೈಭವೀಕರಣದ ತಿರಸ್ಕಾರವನ್ನು, ಚರಿತ್ರೆಯ ಬೆಳಕು ಬೀಳದ ಮಗ್ಗುಲಿನ ಸತ್ಯಗಳನ್ನು ತುಳಿಯಲ್ಪಟ್ಟ ಜನರ ಭಾವನೆ, ಕನಸುಗಳನ್ನು ಅನಾವರಣ ಮಾಡಲು ಸಿದ್ಧಲಿಂಗಯ್ಯನವರ ಕವಿತೆಗಳು ಮತ್ತೆ ಮತ್ತೆ ಕರೆಕೊಡುತ್ತವೆ”1
ಸಿದ್ಧಲಿಂಗಯ್ಯನವರ ಕವಿತೆಗಳಿಗೆ ಮುಖಾಮುಖಿಯಾಗುವುದು ಎಂದರೆ, 1970 ರ ದಶಕದ ಜನಪರ ಚಳವಳಿಗಳು, ಹೋರಾಟಗಳೊಂದಿಗೆ ಮುಖಾಮುಖಿಯಾಗುವುದು ಎಂದರ್ಥ. ಈ ನೆಲದ ಅಸ್ಪೃಶ್ಯರ, ದಮನಿತರ, ಶ್ರಮಿಕರ, ನೊಂದವರ ನಿಟ್ಟುಸಿರು ಅಕ್ಷರದ ಮೂಲಕ ಜೀವತಳೆದಿರುವ ಆದಿಮ ಪರಂಪರೆಯೊಂದಿಗೆ ಅನುಸಂಧಾನ ಮಾಡುವುದು ಎಂದರ್ಥ. ಸಿದ್ಧಲಿಂಗಯ್ಯನವರು ಕನ್ನಡದ ಪ್ರಥಮ ದಲಿತ ಕವಿಯೇ ಅಲ್ಲವೇ ಎನ್ನುವುದು ಚರ್ಚಾಸ್ಪದವಾಗಿರಬಹುದು. ಆದರೆ ದಲಿತ-ಬಂಡಾಯ ಸಾಹಿತ್ಯ ಹಾಗೂ ಚಳವಳಿಗೆ ತಮ್ಮ ಹೋರಾಟದ ಹಾಡುಗಳ ಮೂಲಕ ಸ್ಥಾಪಿತ ಮೌಲ್ಯಗಳು ಹಾಗೂ ಯಾಜಮಾನ್ಯ ಸಂಸ್ಕೃತಿಗೆ ಪ್ರತಿರೋಧವಾಗಿ ಅಲಕ್ಷಿತರ ಸಮಷ್ಟಿ ಪ್ರಜ್ಞೆಯನ್ನು ಹಕ್ಕೊತ್ತಾಯದ ಧಾಟಿಯಲ್ಲಿ ಅಭಿವ್ಯಕ್ತಿಸಿದವರಲ್ಲೊಬ್ಬರು ಎಂಬುದು ನಿರ್ವಿವಾದ. “20ನೇ ಶತಮಾನದ ಕನ್ನಡ ಕಾವ್ಯದಲ್ಲಿ ಸಿದ್ಧಲಿಂಗಯ್ಯನವರಿಗೆ ಸ್ಥಾನವಿರುವುದು ಈ ಶತಮಾನದಲ್ಲಿ ಅವರು ದಲಿತರ ಆದಿಕವಿ ಎಂಬ ಕಾರಣಕ್ಕೆ… ಈ ಕವಿಯ ಪ್ರತಿಭಾ ಸಂಕಲ್ಪದಲ್ಲಿ ಕನ್ನಡ ದಲಿತ ಜನಾಂಗ ಒಂದು ನಿರ್ದಿಷ್ಟ ರೀತಿಯಲ್ಲಿ ನಿರ್ಮಿತವಾಯಿತು. ಹಾಡು ಜನಾಂಗವನ್ನು ಕಟ್ಟಿತು. ಜನಾಂಗ ಹಾಡನ್ನು ಸೃಷ್ಟಿಸುವುದರ ಜತೆಯೇ ತಾನು ಸೃಷ್ಟಿಸಿರುವ ಹಾಡಿನಿಂದಲೂ ಅದು ಪ್ರಭಾವಿತಗೊಳ್ಳುತ್ತದೆ. 1975 ರಿಂದಾಚೆಗೆ ದಲಿತರು ಹೊಸ ಪ್ರಜ್ಞಾವಂತ ಜನಾಂಗವಾಗಿ ಕರ್ನಾಟಕದಲ್ಲಿ ಸಿದ್ಧಲಿಂಗಯ್ಯನವರ ಕವಿತೆಗಳ ಎರಕದಲ್ಲಿ ರೂಪುಗೊಂಡರು. ಅದಕ್ಕಾಗಿಯೇ ದಲಿತರ ಮೆರವಣಿಗೆ ಬೀದರ್ ನಿಂದ ಕೋಲಾರದ ತನಕ ಯಾವುದೇ ಮೂಲೆಯಲ್ಲಿ ನಡೆದರೂ ಅಲ್ಲಿ ಕವಿಯ ಹಾಡುಗಳು. ಅದಕ್ಕಾಗಿಯೇ ಇದು ಸಾರ್ವಜನಿಕ ಕಾವ್ಯದ ಅಂತಿಮ ಯಶಸ್ಸು. ಈ ಕವಿತೆಗಳನ್ನು ವ್ಯಕ್ತಿಯೊಬ್ಬ ತನ್ನ ಅತ್ಯಂತ ಖಾಸಗಿ ದುಃಖ, ರೋಮಾಂಚನದ, ದಿಗ್ಭ್ರಮೆಗಳ ಗಳಿಗೆಗಳಲ್ಲಿ ಓದಿಕೊಂಡಾಗ ಹೇಗೆ ಭಾವಿಸುತ್ತಾನೋ ಅಷ್ಟು ಖಚಿತವಾಗಿ ಹೇಳಲಾಗದು. ಇವು ತೀರಾ ಸಾರ್ವಜನಿಕವೆನ್ನಿಸಿಬಿಡುವ ಸಾಧ್ಯತೆಯೇ ಹೆಚ್ಚು. ಆದರೆ, ಆತ ತನ್ನ ಸಾಮಾಜಿಕ, ಸಾರ್ವಜನಿಕ ಗಳಿಗೆಗಳಲ್ಲಿಯಂತೂ ಈ ಕಾವ್ಯಕ್ಕೆ ಪ್ರತಿಸ್ಪಂದಿಸದೆ ಇರಲಾರ. ಸಾರ್ವಜನಿಕ ರಾಜಕೀಯ ಬದುಕಿನ ಉತ್ಸಾಹ, ರೋಷ, ಭೀತಿಗಳನ್ನು ಕವಿ ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ…
ಸಾರ್ವಜನಿಕ ಕಾವ್ಯ ತನ್ನ ಅತ್ಯುತ್ತಮ ಕ್ಷಣಗಳಲ್ಲಿ ಕವಿ ಮತ್ತು ಸಮಷ್ಟಿಯನ್ನು ಜೋಡಿಸುತ್ತದೆ. ಈ ದೃಷ್ಟಿಯಿಂದ ಬೇಂದ್ರೆಯ ನಂತರ ಅತ್ಯಂತ ಹೆಚ್ಚು ಸಾರ್ವಜನಿಕ ಅಸ್ತಿತ್ವವುಳ್ಳ ಕಾವ್ಯ ಬರೆದ ಕವಿಯೆಂದರೆ ಸಿದ್ಧಲಿಂಗಯ್ಯನವರೇ ಇರಬೇಕು. ಸಿದ್ಧಲಿಂಗಯ್ಯ ಈ ತನಕ ಮಹಾಸಾರ್ವಜನಿಕ ಕವಿ.”2
ಕನ್ನಡದ ಸಂಸ್ಕೃತಿ ಚಿಂತಕ ಡಿ.ಆರ್. ನಾಗರಾಜ್ ತಮ್ಮ ಮಹತ್ವದ ‘The Flaming Feet’ (1993) ಪುಸ್ತಕದಲ್ಲಿ ಕನ್ನಡ ದಲಿತ ಸಾಹಿತ್ಯದಲ್ಲಿ ಎರಡು ಭಿನ್ನ ಮಾದರಿಗಳನ್ನು ಗುರ್ತಿಸುತ್ತಾರೆ. ಅವುಗಳೆಂದರೆ:
1. ಸಾಮಾಜಿಕ ಕ್ರೋಧದ ಮಾದರಿ (Social Rage)
2. ಆಧ್ಯಾತ್ಮಿಕ ಹುಡುಕಾಟದ ಮಾದರಿ (Spiritual Quest)
ಸಿದ್ಧಲಿಂಗಯ್ಯನವರ ಕಾವ್ಯವನ್ನು ಸಾಮಾಜಿಕ ಕ್ರೋಧದ ಮಾದರಿಗೆ ಪ್ರಾತಿನಿಧ್ಯವೆಂಬಂತೆ ವಿಶ್ಲೇಷಿಸುತ್ತಾರೆ. ಸಿದ್ಧಲಿಂಗಯ್ಯನವರ ಮೊದಲ ‘ಹೊಲೆಮಾದಿಗರ ಹಾಡು’ ಕವನ ಸಂಕಲನದಿಂದ ಅವರ ಕಡೆಯ ‘ಬೋಧಿವೃಕ್ಷದ ಕೆಳಗೆ’ ಸಮಗ್ರ ಕಾವ್ಯದ ಶೀರ್ಷಿಕೆಗಳನ್ನು ರೂಪಕದಂತೆ ಪರಿಭಾವಿಸುವುದಾದರೆ, ಸಮಾಜದಲ್ಲಿನ ಶೋಷಣೆ, ತಾರತಮ್ಯ, ಅಸಮಾನತೆಯಿಂದ ಕನಲಿ ಸಂಘರ್ಷದ ಪ್ರತಿಕ್ರಿಯೆ ಹಾಗೂ ಕೀಳರಿಮೆಯಿಂದ ನರಳುತ್ತಿದ್ದ ವಿಸರ್ಜಿತ ಲೋಕದಿಂದ ಹುಟ್ಟಿದ ಬಂಡಾಯದಂತೆ ಸ್ಫೋಟಿಸಿದ ಅವರ ಕವಿತೆಗಳು ಸಮ ಸಮಾಜದ ಹಂಬಲವಾದ ಸಾಮರಸ್ಯದ ಕಡೆಗೆ ಸಾಗಿರುವ ಸೃಜನಶೀಲ ಪಯಣದ ವಿಕಾಸ ಎಂದು ವ್ಯಾಖ್ಯಾನಿಸಬಹುದು. ಇಲ್ಲಿ ಆತ್ಯಂತಿಕ ತೀವ್ರತೆಯಿಂದ ಹುಟ್ಟಿದ ಬಂಡಾಯ ಸಮುದಾಯದಲ್ಲಿ ಸ್ವಾಭಿಮಾನ ಹಾಗೂ ಮಾನವ ಘನತೆಯನ್ನು ಮೂಡಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಸಮಷ್ಟಿ ಬದುಕನ್ನು ಕುರಿತ ಗಾಢ ವಿಷಾದ ಈ ಅನ್ಯಾಯದ ವ್ಯವಸ್ಥೆ ಬದಲಾಗಬೇಕೆಂಬ ಹಂಬಲ ಇಲ್ಲಿನ ಕವಿತೆಗಳು ಪ್ರತಿಪಾದಿಸುವ ನಿಲುವು. “ಸಿದ್ದಲಿಂಗಯ್ಯವರ ಕಾವ್ಯಕ್ಕೆ ಅನಾದಿಕಾಲದ ಪುರಾತನ ದನಿಯಿದೆ. ಈ ದನಿಗೆ ಸಮಷ್ಟಿಯಾದ ಸಾಂಸ್ಕೃತಿಕ ಶಕ್ತಿಯಿದೆ. ದಲಿತ ಸಮುದಾಯದ ಆತ್ಮಕಥನವೇ ರೂಪಕ, ಸಂಕೇತ, ಪ್ರತಿಮೆಗಳಾಗಿ ಸಿದ್ಧಲಿಂಗಯ್ಯನವರ ಕಾವ್ಯದಲ್ಲಿ ಚಾಚಿಕೊಂಡಿದೆ… ಸಿದ್ಧಲಿಂಗಯ್ಯನವರು ಕೆಲವೇ ರೂಪಕಗಳಲ್ಲಿ ಸಮುದಾಯದ ಒಟ್ಟು ಬದುಕನ್ನು ಬಿಂಬಿಸಿದ್ದಾರೆ. ‘ಅಪ್ಪನ ಬೆವರಿನ ರಕ್ತವು ಸೋರಿ ಕೆಂಪಾದವು ಹೂವು’ ಎಂಬ ಈ ಒಂದೇ ಒಂದು ಸಾಲು ಸಾಕು; ಸಿದ್ಧಲಿಂಗಯ್ಯನವರ ಕಾವ್ಯದ ಗಾಢತೆಯನ್ನು ಸೂಚಿಸಲು. ಈ ಸಾಲು ಬಹಳ ಸರಳವಾದದ್ದೇ. ಆದರೆ, ಆ ಸಾಲಿನ ಅನುಭವಕ್ಕೆ ಶತಮಾನಗಳ ಹೊರೆ ಇದೆ. ಅನಾದಿ ಕಾಲದ ಅಪಮಾನವಿದೆ. ಶೋಷಣೆಯ ದೊಡ್ಡ ಇತಿಹಾಸವಿದೆ… ಜಾತಿ ಸೂತಕದಿಂದ ‘ದಲಿತ’ ಬರಹವನ್ನು ಯಾರೂ ಪ್ರವೇಶಿಸಬೇಕಾದ್ದಿಲ್ಲ. ಸಿದ್ಧಲಿಂಗಯ್ಯನವರ ಕವಿತೆಗಳ ಕೇಂದ್ರ ದಲಿತಲೋಕವೇ ಆಗಿದ್ದರೂ ಅವರು ರೂಪಿಸುತ್ತಿರುವ ಸಂವೇದನೆಗೆ ಯಾವುದೇ ಜಾತಿ, ಲಿಂಗ, ಧರ್ಮ, ಬಣ್ಣ ಮತ್ತು ಪ್ರಾದೇಶಿಕ ಗುಣಗಳಿಲ್ಲ. ಸೃಜನಶೀಲ ಸಂವೇದನೆ ಈ ಬಗೆಯ ಮಿತಿಗಳ ಆಚೆಗಿನದು.”3
ಇದನ್ನು ಓದಿದ್ದೀರಾ?: ನೆನಪು | ಲಂಕೇಶ್ ಎಂಬ ಕನ್ನಡದ ಅಪ್ರತಿಮ ಸೃಷ್ಟಿಕರ್ತ
ಹೀಗೆ ಅನಾದಿ ಕಾಲದಿಂದಲೂ ಅಸ್ಪೃಶ್ಯತೆಯ ಸಂಕಟ ಹಾಗೂ ಅವಮಾನಕ್ಕೆ ತುತ್ತಾದ ದಲಿತ ಸಮುದಾಯದ ಹೆಪ್ಪುಗಟ್ಟಿದ ಸಿಟ್ಟಿನ ಆಸ್ಫೋಟವಾಗಿ ಹೊಮ್ಮಿದ ಅವರ ಹಾಡುಗಳು ಬಹುಜನರ ಅಂತರಂಗದಲ್ಲಿ ವಿಲೀನವಾಗಿ ತನ್ನ ಅಭಿವ್ಯಕ್ತಿಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಸಮಾಜದ ಮುಖ್ಯವಾಹಿನಿಯಿಂದ ಹೊರತಾಗಿ ಅಂಚಿಗೆ ತಳ್ಳಲ್ಪಟ್ಟ ದಮನಿತರು, ರೈತರು, ಕೂಲಿ-ಕಾರ್ಮಿಕರು, ಬಡವರ ನೋವಿನ ಪ್ರತಿಧ್ವನಿಯಾಗಿ, ವಿಮೋಚನೆಯ ಹಾಡುಗಳಾಗಿ, ಜನಪರ ಹೋರಾಟಗಳ ಕರಪತ್ರಗಳ ಘೋಷಣೆಗಳಾಗಿ, ಗೋಡೆಬರಹಗಳಾಗಿ, ರಂಗಭೂಮಿಯಲ್ಲಿ ನಾಟಕ ಪಠ್ಯಗಳಾಗಿ ಪ್ರಯೋಗಗೊಂಡು ರೂಪಾಂತರವಾದದ್ದು ಚಾರಿತ್ರಿಕ ಮಹತ್ವವನ್ನು ಪಡೆದಿದೆ. ಕೀರ್ತಿನಾಥ ಕುರ್ತಕೋಟಿಯವರು ಸಿದ್ಧಲಿಂಗಯ್ಯನವರ ಕಾವ್ಯದ ಧೋರಣೆಯನ್ನು ಕುರಿತಂತೆ, “ಕ್ರಾಂತಿಯಲ್ಲಿ ಹುಟ್ಟಿ ಬರುವ ಕಾವ್ಯಕ್ಕೆ ಪ್ರಾಮಾಣಿಕತೆ ಇರಲೇಬೇಕು. ಕವಿಯ ಸ್ವಾನುಭವ ಪ್ರಾಮಾಣಿಕವಾಗಿದ್ದರೆ ಅದರ ಸಂವಹನಶಕ್ತಿ ಹೆಚ್ಚಾಗುತ್ತದೆ. ಆದರೆ, ಸಿದ್ಧಲಿಂಗಯ್ಯನವರ ಕಾವ್ಯ ಇದಕ್ಕೂ ಹೆಚ್ಚಿನ ಉದ್ದೇಶವೊಂದನ್ನು ನೆರವೇರಿಸುತ್ತದೆ. ಈಗಾಗಲೆ, ಡಿ.ಆರ್. ನಾಗರಾಜರು ಗುರುತಿಸಿರುವಂತೆ ಸಿದ್ಧಲಿಂಗಯ್ಯನವರ ಕಾವ್ಯ ಒಂದು ಜನಾಂಗವನ್ನು ಕಟ್ಟಿದೆ, ಕೇವಲ ಜೈವಿಕ ಪಾತಳಿಯ ಮೇಲೆ ಜೀವಿಸುತ್ತಿರುವ ಜನಾಂಗಕ್ಕೆ ಒಂದು ಸಾಂಸ್ಕೃತಿಕ ನೆಲೆಯನ್ನು ಕಟ್ಟಿಕೊಟ್ಟಿದೆ.

ಈ ಕಾವ್ಯ ಕೇವಲ ಒಂದು ಜನಾಂಗವನ್ನಲ್ಲ, ವಿಶ್ವದ ಎಲ್ಲ ದಲಿತರನ್ನೂ ಒಂದುಗೂಡಿಸುವ ಸಾಮರ್ಥ್ಯವನ್ನು ಪಡೆದಿದೆ. ತನ್ನ ವಿರುದ್ಧವಾದದ್ದರ ಬಗ್ಗೆ ಆಕ್ರೋಶವಿದ್ದರೂ, ತನ್ನ ನೋವಿನ ಅನನ್ಯತೆಯ ಬಗ್ಗೆ ಅಭಿಮಾನವಿದೆ. ಬೇಕೆಂದೇ ಈ ನೋವು ಜೋರಾದ ದನಿಯಲ್ಲಿ, ಉತ್ಪ್ರೇಕ್ಷೆಗಳು ತುಂಬಿರುವ ಭಾಷೆಯಲ್ಲಿ ಅಭಿವ್ಯಕ್ತವಾಗುತ್ತದೆ. ನೋವು ಅಸಹನೀಯವಾಗಿರುವುದರಿಂದ ಧ್ವನಿಗಾಗಲಿ, ಮೆಲುಮಾತಿಗಾಗಲಿ ಇಲ್ಲಿ ಅವಕಾಶವಿಲ್ಲ. ಉಳ್ಳವರ ಸಾಂಸ್ಕೃತಿಕ ಮೌಲ್ಯಗಳನ್ನು ನಿರಾಕರಿಸುವ ಮಟ್ಟಿಗೆ ನೋವು ತೀಕ್ಷ್ಣವಾಗಿದೆ… ಸಿದ್ಧಲಿಂಗಯ್ಯ ತನ್ನ ಜನರ ಹಾಡಾಗಬಯಸಿದ ಕವಿ, ಹಾಗೆ ಆಗಿರುವ ಕವಿ. ನಾಯಕ ತನ್ನ ಜನಾಂಗದಿಂದ ಬೇರೆ ಆಗಬೇಕಾಗಿಲ್ಲ. ಕವಿಯಂತೂ ಆಗಲೇಬಾರದು.”4 ಎಂಬ ಅರ್ಥಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹನ್ನೆರಡನೆಯ ಶತಮಾನದ ವಚನಕಾರರ ಆಶಯವನ್ನು ಮುಂದುವರೆಸಿದ ಕವಿ ಸಿದ್ಧಲಿಂಗಯ್ಯನವರು ಕತ್ತಲ ಲೋಕದಲ್ಲಿದ್ದ ಜನಾಂಗದ ಕಣ್ಣು ತೆರೆಸಿದ ಕವಿ ಎಂದರೆ ಅತಿಶಯೋಕ್ತಿ ಅಲ್ಲ. “ಕ್ರಾಂತಿಕಾರಕವಾದ ಕವಿತೆಗಳನ್ನು ಬರೆಯಲು ನನಗೆ ಉಂಟಾದ ಸ್ಫೂರ್ತಿ ಏನು ಎಂಬುದರ ಬಗ್ಗೆ ನಾನು ಹಲವು ಬಾರಿ ಯೋಚಿಸಿದ್ದೇನೆ. ಈ ಕವಿತೆಗಳನ್ನು ಬರೆಯಲು ನಾನು ಶುರುಮಾಡಿದ್ದು 1968ರಲ್ಲಿ. 1970-71ರ ಹೊತ್ತಿಗೆ ಅನೇಕ ಕವಿತೆಗಳನ್ನು ಬರೆದಿದ್ದೆ. 1971ರಲ್ಲಿ ಈ ಪದ್ಯಗಳನ್ನು ಗೆಳೆಯ ಡಿ.ಆರ್. ನಾಗರಾಜ್ ಅವರಿಗೆ ತೋರಿಸಿದೆ.
ಕ್ರಾಂತಿಕಾರಿ ಪದ್ಯಗಳನ್ನು ನಾನು ಮರಾಠಿ ದಲಿತ ಸಾಹಿತ್ಯದಿಂದ ಮತ್ತು ತೆಲುಗಿನ ದಿಗಂಬರ ಕಾವ್ಯದಿಂದ ಸ್ಫೂರ್ತಿಗೊಂಡು ಬರೆದೆನೆಂದು ಕೆಲವರು ಹೇಳಿದ್ದಾರೆ; ಅದು ಸರಿಯಲ್ಲ. ನಾನು ಈ ಪದ್ಯಗಳನ್ನು ಬರೆಯುವ ಹೊತ್ತಿಗೆ ನನಗೆ ಮರಾಠಿ ದಲಿತ ಸಾಹಿತ್ಯ ಮತ್ತು ತೆಲುಗಿನ ಕ್ರಾಂತಿಕಾರಿ ದಿಗಂಬರ ಕಾವ್ಯ ಪರಂಪರೆಯ ಹೆಸರು ಗೊತ್ತಿತ್ತೇ ಹೊರತು, ಯಾವ ಪದ್ಯವನ್ನು ಓದಿರಲಿಲ್ಲ. ನಾನು ಈ ಪದ್ಯಗಳನ್ನು ಬರೆಯಲು ಪ್ರೇರಣೆಯಾದದ್ದು ವಚನ ಸಾಹಿತ್ಯ, ದಾಸರ ಕೀರ್ತನೆಗಳು ಮತ್ತು ಕುವೆಂಪು. ಆದ್ದರಿಂದ ನನ್ನ ಬಂಡಾಯದ ಮೂಲ ಕನ್ನಡದಲ್ಲೇ ಇದೆ ಎಂದರೆ ತಪ್ಪಾಗಲಾರದು.”5 ಎಂದು ಸ್ವತಃ ಕವಿಗಳೇ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ.
ಜುಲೈ 18, 1942 ನಾಗಪುರದಲ್ಲಿ ನಡೆದ ‘ಅಖಿಲ ಭಾರತ ಪರಿಶಿಷ್ಟ ಜಾತಿ, ವರ್ಗಗಳ ಒಕ್ಕೂಟದ ಸಮಾವೇಶ’ದಲ್ಲಿ ಶೋಷಿತರ ವಿಮೋಚನೆಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಕರೆಕೊಟ್ಟ ‘Educate, Agitate and Organize’ (ಜಾಗೃತರಾಗಿ, ಹೋರಾಡಿ ಮತ್ತು ಸಂಘಟಿತರಾಗಿ) ಎಂಬ ಮೂರು ಮೂಲಭೂತ ಮಾರ್ಗೋಪಾಯಗಳನ್ನು ತಮ್ಮ ಮಿತಿಯೊಳಗೆ ಸಾಕಾರಗೊಳಿಸಲೆತ್ನಿಸಿದ ಸಿದ್ಧಲಿಂಗಯ್ಯನವರ ಬದುಕು- ಹೋರಾಟವನ್ನು ಈ ರೀತಿಯಾಗಿ ಪರಿಶೀಲಿಸಬಹುದು.
ಇದನ್ನು ಓದಿದ್ದೀರಾ?: ಹೊಸ ಓದು | ಜೆ.ಎಂ. ಕಟ್‌ಸೇ ಅವರ ʼಕಲ್ಲುನೆಲದ ಹಾಡುಪಾಡುʼ: ಕೊನೆಯಿರದ ನಿಟ್ಟುಸಿರು…
- ವಿದ್ಯಾರ್ಥಿ ದಿಸೆಯಲ್ಲಿನ ವಿಚಾರವಾದಿ ಪರಿಷತ್ತು ಮತ್ತು ಬಸವಲಿಂಗಪ್ಪನವರ ಬೂಸಾ ಹೇಳಿಕೆ ವಿವಾದದ ಸಂದರ್ಭದಲ್ಲಿ ಸೈದ್ಧಾಂತಿಕ ಬದ್ಧತೆಯಿಂದ ಸಮಾನ ಮನಸ್ಕರೊಂದಿಗೆ ನಡೆಸಿದ ಹೋರಾಟ.
- ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ, ಜಾಥಾಗಳಲ್ಲಿ, ಬೀದಿನಾಟಕಗಳಲ್ಲಿ ತಮ್ಮ ಹಾಡುಗಳ ಮೂಲಕ ಜಾಗೃತಿ ಮೂಡಿಸಿದ್ದು, ಸಮಾವೇಶಗಳಲ್ಲಿ ತಮ್ಮ ಕ್ರಾಂತಿಕಾರಿ ವಿಚಾರಪೂರ್ಣ ಭಾಷಣಗಳಿಂದ ರಾಜ್ಯದಾದ್ಯಂತ ಸಂಘಟನೆ ಕಟ್ಟಲು ಶ್ರಮಿಸಿದ್ದು, ಕೊಳಗೇರಿಗಳಲ್ಲಿ ರಾತ್ರಿಶಾಲೆಗಳನ್ನು ಆರಂಭಿಸುವುದರ ಮೂಲಕ ಶಿಕ್ಷಣದ ಮಹತ್ವ ಹಾಗೂ ಅಕ್ಷರದ ಅರಿವನ್ನು ಮೂಡಿಸಿದ್ದು.
- ವಿಧಾನ ಪರಿಷತ್ತಿನ ಸದಸ್ಯರಾಗಿ ಸದನದಲ್ಲಿ ಮಂಡಿಸಿದ ನಿರ್ಣಯಗಳ ಮೂಲಕ ಶೋಷಿತರು, ಬಡವರು, ಕಾರ್ಮಿಕರು, ದಲಿತರು, ಅಲೆಮಾರಿ ಸಮುದಾಯದವರ ವಿಮೋಚನೆಗೆ, ಸಾಮಾಜಿಕ ನ್ಯಾಯದ ಉಳಿವಿಗಾಗಿ ಜನತಂತ್ರದ ರಾಜಕಾರಣದಲ್ಲಿ ದನಿಯಾದದ್ದು, ಮೂಢನಂಬಿಕೆಗಳು, ಅಂಧ ಸಂಪ್ರದಾಯಗಳನ್ನು ಸರ್ಕಾರದ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಅವುಗಳನ್ನು ವಿರೋಧಿಸುವ ಶಾಸನಗಳು ಜಾರಿಗೆ ಬರುವಲ್ಲಿ ಶ್ರಮಿಸಿದ್ದು.
- ಕನ್ನಡ ನಾಡಿನ ಅಸ್ಮಿತೆ ಹಾಗೂ ನುಡಿಯ ಏಳಿಗೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ಸರ್ಕಾರದ ವಿವಿಧ ಸಮಿತಿಗಳ ಸದಸ್ಯರಾಗಿ ತಮ್ಮ ವ್ಯಾಪ್ತಿಯಲ್ಲಿ ಅರ್ಥಪೂರ್ಣವಾದ ಸೇವೆಯನ್ನು ಸಲ್ಲಿಸಿದ್ದು.
ಸಿದ್ಧಲಿಂಗಯ್ಯನವರ ಕವಿತೆ, ನಾಟಕಗಳಲ್ಲಿ, ಆತ್ಮಕಥನದಲ್ಲಿ, ವಿಮರ್ಶಾ ಬರಹಗಳಲ್ಲಿ, ಜಾನಪದೀಯ ಅಧ್ಯಯನ, ಭಾಷಣಗಳಲ್ಲಿ, ಪ್ರಕಟಿತ ಸಂದರ್ಶನಗಳಲ್ಲಿ ನೆಲಮೂಲ ದಲಿತ ಸಂಸ್ಕೃತಿಯ ಚಹರೆಗಳನ್ನು, ಸಮಾಜಮುಖಿಯಾದ ಸಿದ್ದಾಂತಗಳ ಅನುಸಂಧಾನ ಮತ್ತು ಜನಪರ ಹೋರಾಟಗಳ ಮೂಲಕ ಅವರು ಪಡೆದ ಅನುಭವಗಳಲ್ಲಿ ಸಮಾನತೆಯ ಆಶಯ ಹಾಗೂ ಸೌಹಾರ್ದ ಪರಂಪರೆಯ ಜಾತ್ಯತೀತ ಧೋರಣೆಯನ್ನು ಕಾಣಬಹುದಾಗಿದೆ.

ಕೊನೆ ಟಿಪ್ಪಣಿಗಳು:
- ಬಡವರ ನಗುವಿನ ಶಕ್ತಿ: ಡಾ. ಸಿದ್ಧಲಿಂಗಯ್ಯನವರ ಸಾಹಿತ್ಯ ಕುರಿತ ಲೇಖನಗಳು, ಪ್ರಸ್ತಾವನೆಯಲ್ಲಿ, ಎಚ್. ದಂಡಪ್ಪ, 2001, ಅಂಕಿತ ಪುಸ್ತಕ, ಬೆಂಗಳೂರು.
- ಆಯ್ದ ಕವಿತೆಗಳು: ಡಾ. ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ್ ಅವರ ಮುನ್ನುಡಿಯಲ್ಲಿ, 1997, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
- ನನ್ನ ಜನಗಳು ಮತ್ತು ಇತರ ಕವಿತೆಗಳು: ಡಾ. ಸಿದ್ಧಲಿಂಗಯ್ಯ, ಮೊಗಳ್ಳಿ ಗಣೇಶ್ ಮುನ್ನುಡಿಯಲ್ಲಿ, 2015, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
- ಸಿದ್ಧಲಿಂಗಯ್ಯನವರ ಕಾವ್ಯ: ಕೀರ್ತಿನಾಥ ಕುರ್ತಕೋಟಿ, ನೂರು ಮರ ನೂರು ಸ್ವರ, 1998, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಊರು ಕೇರಿ-2: ಆತ್ಮಕಥನ, ಡಾ. ಸಿದ್ಧಲಿಂಗಯ್ಯ ಪುಟ: 101-102, 2009, ಅಂಕಿತ ಪುಸ್ತಕ, ಬೆಂಗಳೂರು.
ಪರಾಮರ್ಶನ ಗ್ರಂಥಗಳು:
- ಬೋಧಿವೃಕ್ಷದ ಕೆಳಗೆ (ಸಮಗ್ರ ಕಾವ್ಯ): ಡಾ. ಸಿದ್ಧಲಿಂಗಯ್ಯ, 2021, ಕಿರಂ. ಪ್ರಕಾಶನ, ಬೆಂಗಳೂರು.
- ಉರಿಕಂಡಾಯ (ಸಾಂಸ್ಕೃತಿಕ ಸಂವೇದನೆಯ ತಲ್ಲಣ): ಡಾ. ಸಿದ್ಧಲಿಂಗಯ್ಯ, 2009, ಅಂಕಿತ ಪುಸ್ತಕ, ಬೆಂಗಳೂರು.
- ಜನಸಂಸ್ಕೃತಿ: ಡಾ. ಸಿದ್ಧಲಿಂಗಯ್ಯ, 2007, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
- ಉರಿ ಚಮ್ಮಾಳಿಗೆ: ದಲಿತ ಚಳವಳಿಯ ಅಧ್ಯಯನ (ಡಿ.ಆರ್. ನಾಗರಾಜ್ ಅವರ ʼದಿ ಫ್ಲೇಮಿಂಗ್ ಫೀಟ್ʼ ಕೃತಿಯ ಅನುವಾದ) ಎಂ.ಎಸ್. ಆಶಾದೇವಿ, 2002, ವಸಂತ ಪ್ರಕಾಶನ, ಬೆಂಗಳೂರು.

ಆರ್. ಶ್ರೀಧರ್
ಲೇಖಕರು, ಸಹಾಯಕ ಪ್ರಾಧ್ಯಾಪಕರು
ಉತ್ತಮ ಬರವಣಿಗೆ ಮುಂದುವರೆಸಿ