ನಮ್ಮ ಕಾಲದ ಮಹಾಕಾವ್ಯವೆಂದರೆ ಬಾಬಾ ಸಾಹೇಬರು ರಚಿಸಿರುವ ʼಸಂವಿಧಾನʼ. ಈ ಮಹಾಕಾವ್ಯವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಣೆ ಮಾಡುವುದು ನಮ್ಮ ಬಹುದೊದ್ದ ಜವಾಬ್ದಾರಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ ಎನ್ ಮುಕುಂದರಾಜ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಹೊಸಪೇಟೆ ಸರ್ಕಾರಿ ನೌಕರರ ಭವನದಲ್ಲಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಚಕೋರ ಸಾಹಿತ್ಯ ವಿಚಾರ ವೇದಿಕೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ʼಸಾಹಿತ್ಯ ಅಕಾಡೆಮಿಯ ಪ್ರತಿ ಸದಸ್ಯರಿಗೆ ಜವಾಬ್ದಾರಿ ಕೊಡಲೆಂದು ಪ್ರತಿ ತಿಂಗಳು ‘ಚಕೋರ ಸಾಹಿತ್ಯ ವಿಚಾರ ವೇದಿಕೆʼ ಕಾರ್ಯಕ್ರಮ ಮಾಡಲಾಗುತ್ತಿದೆ. ಇನ್ನು ಜನಸಾಮಾನ್ಯರಿಗೆ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಈರೀತಿ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ. ಧರ್ಮಾಂಧತೆಯಲ್ಲಿ ಮುಳುಗಿರುವ ಯುವ ಸಮೂಹವನ್ನು ಸಾಹಿತ್ಯದ ಮೂಲಕ ಎಚ್ಚರಿಸಿ ಬೆಳಕಿನೆಡೆಗೆ ಕಳುಹಿಸಲು ಪ್ರಯತ್ನಿಸಲಾಗುತ್ತಿದೆʼ ಎಂದರು.

ʼನಮ್ಮ ಕಾಲದಲ್ಲಿ ಪ್ರೇಯಸಿ ಕುರಿತು ಕಾವ್ಯ ರಚಿಸುತ್ತಿದ್ದೆವು. ಆ ರೀತಿ ವಾತಾವರಣ ಆಗ ನಮಗಿತ್ತು; ಆದರೆ, ಈಗ ಯುವ ಸಮೂಹದಲ್ಲಿ ದುಗುಡ, ಸಂಕಟ, ಆತಂಕ, ಹತಾಶೆ, ನೋವುಗಳನ್ನೇ ತುಂಬಿದ್ದೇವೆ. ಇದು ಬದಲಾಗಬೇಕು. ಯುವ ಸಮೂಹದಲ್ಲಿ ಹೊಸ ಬಗೆಯ ಪ್ರೇಮ, ಪ್ರೀತಿ, ಪ್ರಣಯ, ಹೂವು, ಪ್ರೇಯಸಿಯ ಕುರಿತು ಕವಿತೆಗಳನ್ನು ರಚಿಸುವಂತ ಕಾಲವನ್ನು ಸೃಷ್ಟಿಸಿಕೊಡಬೇಕು ಎಂದು ಸಂದೇಶ ಕೊಟ್ಟರು.
ಕನ್ನಡ ಉಪನ್ಯಾಸಕ ಕೆ ರವೀಂದ್ರನಾಥ್ ಮಾತನಾಡಿ, ʼಕನ್ನಡ ಸಾಹಿತ್ಯ ವ್ಯಾಪಕವಾಗಿ ಬೆಳೆಯಲಿಕ್ಕೆ ಕಾರಣ ಸೃಜನಶೀಲತೆ. ಸೃಜನಶೀಲತೆ, ವಿಮರ್ಶೆ, ಸಂಶೋಧನೆ ಕಾವ್ಯ ಸಾಮಾಜಿಕ ಪರಿವರ್ತನೆಯನ್ನು ಬಯಸಬೇಕು ಅದನ್ನು ಸೃಷ್ಟಿ ಕಾವ್ಯ ಎನ್ನುತ್ತಾರೆ. ಹೊಸ ರೂಪಕಗಳನ್ನು ಸೃಷ್ಟಿ ಮಾಡುವುದು ಸೃಜನಶೀಲವಾಗುತ್ತದೆ. ಸೃಜನಶೀಲತೆಯ ವಿಶೇಷ ಗುಣ ಕವಿಯಲ್ಲಿ ಇರಬೇಕು. ರಾಮಾಯಣ, ಮಹಾಭಾರತ, ವಚನ ಸಾಹಿತ್ಯ ಇವೆಲ್ಲವೂ ಸಾರಿದ್ದು ಮಾನವ ಧರ್ಮವನ್ನೇ. ಈಗಿನ ಯುವಕರು ಅರ್ಥಮಾಡಿಕೊಳ್ಳಬೇಕಿರುವುದು ಅದನ್ನೇʼ ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಕೃಷಿಕ ಸಮಾಜದ ಚುನಾವಣೆ: ಜಿಲ್ಲೆಯಿಂದ ಹಲವು ಮಂದಿ ಆಯ್ಕೆ
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮಾನ್ಪಡೆ, ಸಿದ್ದರಾಮ ಹೊನಕಲ್, ಪೀರ್‌ಬಾಷಾ, ನೂರ್ ಜಹಾನ್, ಭಾರತಿ ಮೂಲಿಮನಿ, ಎಚ್ ಸೌಭಾಗ್ಯಲಕ್ಷ್ಮೀ, ಸುಧಾ ಚಿದಾನಂದ, ಸಹನಾ, ದಯಾನಂದ ಕಿನ್ನಾಳ, ಉಮಾಮಹೇಶ್ವರ ಹಾಗೂ ಇತರರು ಇದ್ದರು.
