ಮದುವೆಯಾದ ಒಂದು ದಿನದ ನಂತರ ನವ ದಂಪತಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ.
24 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಎಂಬ ವಧುವಿನ ಜೊತೆ ಮೇ 30 ರಂದು ಬಹ್ರೈಚ್ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿವಾಹವಾಗಿದ್ದರು. ಮದುವೆಯಾದ ನಂತರ ಕೆಲವು ವಿಧಿವಿಧಾನಗಳನ್ನು ನೆರವೇರಿಸಿದ ನಂತರ ರಾತ್ರಿ ದಂಪತಿ ಕೋಣೆಯಲ್ಲಿ ಮಲಗಿದ್ದಾರೆ.
ಮೇ 31 ರಂದು ಮಾರನೇ ದಿನ ಬೆಳಗ್ಗೆ ಸುಮಾರು ಹೊತ್ತು ಇಬ್ಬರು ಎದ್ದೇಳದ ಕಾರಣ ಸಂಬಂಧಿಕರು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ
ನವದಂಪತಿಯ ಸಾವಿನ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಕೋಣೆಗೆ ವಿಧಿವಿಜ್ಞಾನ ತಜ್ಞರ ತಂಡವನ್ನು ಕರೆಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ ಎಂದು ಬಲರಾಂಪುರದ ಪೊಲೀಸ್ ಅಧೀಕ್ಷಕ ಪ್ರಶಾಂತ್ ವರ್ಮಾ ಹೇಳಿದ್ದಾರೆ.
ದಂಪತಿಗೆ ಯಾವುದೇ ಹೃದಯ ಸಂಬಂಧಿ ಕಾಯಿಲೆ ಇದ್ದ ಬಗ್ಗೆ ಇತಿಹಾಸವಿಲ್ಲ. ಅಲ್ಲದೆ ಬಲವಂತವಾಗಿ ಕೋಣೆಗೆ ಪ್ರವೇಶಿಸಿದ ಯಾವುದೇ ಲಕ್ಷಣಗಳು ಅಥವಾ ಅವರ ದೇಹದ ಮೇಲೆ ಗಾಯದ ಗುರುತುಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ದಂಪತಿ ಒಂದೇ ಸಮಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಶವಪರೀಕ್ಷೆಯ ಫಲಿತಾಂಶ ಆತಂಕವನ್ನು ಹೆಚ್ಚಿಸಿವೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.