ವಿಜಯನಗರದ ಕೂಡ್ಲಿಗಿ ಪಟ್ಟಣದ ಮದಕರಿ ವೃತ್ತದ ಆಟೋ ನಿಲ್ದಾಣವನ್ನು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಆಟೋ ಚಾಲಕರನ್ನು ಒಕ್ಕಲಿಸಬಾರದೆಂದು ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ಸ್ ಅಧಿಕಾರಿಗಳಿಗೆ ಮನವಿ ಮಾಡಿತು.
ಈಗಿರುವ ಆಟೋ ನಿಲ್ದಾಣವನ್ನು ಸಂಪೂರ್ಣವಾಗಿ ಸಾರ್ವಜನಿಕರ ಶೌಚಾಲಯಕ್ಕಾಗಿ ತೆಗೆದುಕೊಂಡರೆ ಅದನ್ನೆ ನಂಬಿ ಜೀವನ ನಡೆಸುತ್ತಿರುವವರ ಗತಿ ಏನು ಎನ್ನುವ ಆತಂಕ ಚಾಲಕರಲ್ಲಿ ಎದುರಾಗಿದೆ. ಈ ರೀತಿಯಾದರೆ ನಮಗೆ ಜೀವನ ನಡೆಸಲೂ ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.
ಯೂನಿಯನ್ ಅಧ್ಯಕ್ಷ ಮಯೂರ ಮಂಜುನಾಥ ಮಾತನಾಡಿ, ಸುಮಾರು 200 ಕುಟುಂಬಗಳು ಆಟೋ ವೃತ್ತಿಯನ್ನು ನಂಬಿ ಜೀವನ ನಡೆಸುತ್ತಿವೆ. ಈಗ ನಿಲ್ದಾಣ ತೆರವುಗೊಳಿಸಿ ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಬಡ ಆಟೋ ಚಾಲಕರಿಗೆ ತೊಂದರೆ ಕೊಡಬೇಡಿ. ಶೌಚಾಲ ನಿರ್ಮಿಸಲು ಬದಲಿ ಸ್ಥಳ ಗುರುತಿಸಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿ ಗಿರೀಶ್ ಅವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಬಾಬಾ ಸಾಹೇಬರ ‘ಸಂವಿಧಾನ’ವೊಂದು ಮಹಾಕಾವ್ಯ: ಎಲ್ ಎನ್ ಮುಕುಂದರಾಜ್
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ ಮಾತನಾಡಿ, ಚಾಲಕರಿಗೆ ತೊಂದರೆ ಆಗುವುದರ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಕೆಲಸ ಸ್ಥಗಿತಗೊಳಿಸುತ್ತೇವೆ. ಹಾಗೂ ಸರ್ಕಾರದಿಂದ ಮಂಜೂರಾದ ಶೌಚಾಲಯವನ್ನು ಬೇರೆ ಸ್ಥಳ ನಿಗದಿ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿರ್ಮಿಸುತ್ತೇವೆ ಎಂದು ಹೇಳಿದರು.
