ದಲಿತ ಚಳವಳಿಯ ಮುಂಚೂಣಿ ಹೋರಾಟಗಾರರಾದ ಕೊಮ್ಮಣ್ಣ ಎಂ ಬುಧವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ದಲಿತ ಚಳವಳಿಗಳಲ್ಲಿ ಮುಂಚೂಣಿ ನಾಯಕರಾಗಿದ್ದ ಕೊಮ್ಮಣ್ಣ ಅವರು, ಹಲವು ತಿಂಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕೋಲಾರದ ಬಂಗಾರಪೇಟೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು, ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕೋಲಾರ ಹೊರವಲಯದ ತೇರಹಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕರಲ್ಲಿ ಒಬ್ಬರಾದ ಇವರು, ಹಲವು ವರ್ಷಗಳಿಂದ ಆದಿಮ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ದಲಿತ ಹೋರಾಟಗಳಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದ ಕೊಮ್ಮಣ್ಣ ಎಂ ಅವರು, ನಾಗಸಂದ್ರ ಭೂ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊಮ್ಮಣ್ಣ ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಎನ್ ಮುನಿಸ್ವಾಮಿ, ಹ.ಮಾ.ರಾಮಚಂದ್ರ, ಅರಿವು ಶಿವಪ್ಪ, ಜೆ ಜಿ ನಾಗರಾಜ್, ಅಮಾಸ ಕೆ.ವಿ.ನಾಯಕ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕುಸಿಯುತ್ತಿರುವ ಸಾಮ್ರಾಜ್ಯದ ಹೊಸ ಅಧಿಪತಿ ಡೊನಾಲ್ಡ್ ಟ್ರಂಪ್
ಇವರಿಗೆ ಪತ್ನಿ, ಮಗ, ಅಣ್ಣ, ಇಬ್ಬರು ತಂಗಿಯರಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೋಲಾರದ ಸ್ವಗೃಹದಲ್ಲಿ ನಾಳೆ ಮಧ್ಯಾಹ್ನದವರೆಗೆ ಅಂತಿಮದರ್ಶನ ಕಾರ್ಯ ನೆರವೇರಲಿದೆ.