ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಣಿಪುರದ ಎನ್ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಿಂದ ತನ್ನ ಬೆಂಬಲವನ್ನು ಹಿಂಪಡೆದಿದೆ. ಮಣಿಪುರದ ಏಕೈಕ ಜೆಡಿಯು ಶಾಸಕ ಸರ್ಕಾರದಿಂದ ಬೆಂಬಲ ಹಿಂಪಡೆದು ವಿಪಕ್ಷದ ಪಾಳಯಕ್ಕೆ ಸೇರಿದ್ದಾರೆ.
ಜೆಡಿಯು ಬೆಂಬಲ ಹಿಂಪಡೆದಿರುವುದರಿಂದ ಮಣಿಪುರ ಸರ್ಕಾರದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗದಿದ್ದರೂ ಕೂಡಾ ಕೇಂದ್ರದಲ್ಲಿ ಮತ್ತು ಬಿಹಾರದಲ್ಲಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಇದು ಎಚ್ಚರಿಕೆ ಕರೆಗಂಟೆ ಎಂದರೆ ತಪ್ಪಾಗಲಾರದು.
ಇನ್ನು ತಿಂಗಳುಗಳ ಹಿಂದಷ್ಟೇ ಮೇಘಾಲಯದಲ್ಲಿ ಅಧಿಕಾರ ಹೊಂದಿರುವ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಮಣಿಪುರ ಬಿಜೆಪಿ ಸರ್ಕಾರದಿಂದ ಬೆಂಬಲವನ್ನು ಹಿಂಪಡೆದಿದೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್‌ಗೆ ‘ಭಾರತ ರತ್ನ’ ನೀಡಿ: ಪೋಸ್ಟರ್ ಹಾಕಿದ ಜೆಡಿಯು ನಾಯಕ!
2022ರ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಆರು ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಆದರೆ ಕೆಲವು ತಿಂಗಳುಗಳಲ್ಲೇ ಆರು ಶಾಸಕರ ಪೈಕಿ ಐವರು ಬಿಜೆಪಿಗೆ ಪಕ್ಷಾಂತರಗೊಂಡಿದ್ದು, ಜೆಡಿಯುನಲ್ಲಿ ಏಕೈಕ ಶಾಸಕರು ಉಳಿದಿದ್ದರು.
ಸದ್ಯ ಬಿಜೆಪಿ 60 ಸದಸ್ಯರ ವಿಧಾನಸಭೆ ಕ್ಷೇತ್ರದಲ್ಲಿ 37 ಸೀಟುಗಳನ್ನು ಹೊಂದಿದ್ದು, ಐವರು ಎನ್‌ಪಿಎಫ್ ಶಾಸಕರು, ಮೂವರು ಸ್ವತಂತ್ರ್ಯ ಅಭ್ಯರ್ಥಿಗಳು ಬಿಜೆಪಿ ಬೆಂಬಲಕ್ಕೆ ನಿಂತಿರುವುದರಿಂದ ಇನ್ನೂ ಕೂಡಾ ಸರ್ಕಾರ ಉಳಿದುಕೊಂಡಿದೆ.
“ಮಣಿಪುರದಲ್ಲಿ ಜೆಡಿಯು ಬಿಜೆಪಿ ಸರ್ಕಾರಕ್ಕೆ ಯಾವುದೇ ಬೆಂಬಲ ನೀಡುವುದಿಲ್ಲ. ನಮ್ಮ ಏಕೈಕ ಶಾಸಕ ಅಬ್ದುಲ್ ನಸೀರ್ ವಿರೋಧ ಪಕ್ಷದ ಶಾಸಕರಾಗಿರಲಿದ್ದಾರೆ” ಎಂದು ಪತ್ರದಲ್ಲಿ ಜೆಡಿಯು ತಿಳಿಸಿದೆ.
ಮಣಿಪುರದಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲದಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 200ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರವನ್ನು ಹತೋಟಿಗೆ ತರುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಕಾರಣದಿಂದಾಗಿ ಬಿಜೆಪಿಯು ಮಣಿಪುರದಲ್ಲಿ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಈವರೆಗೆ ಒಂದು ಬಾರಿಯೂ ಮಣಿಪುರಕ್ಕೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ನಿತೀಶ್ ಕುಮಾರ್‌ಗೆ ‘ಭಾರತ ರತ್ನ’ ನೀಡಿ: ಪೋಸ್ಟರ್ ಹಾಕಿದ ಜೆಡಿಯು ನಾಯಕ!
ಇದರೊಂದಿಗೆ ಜೆಡಿಯು ಶಾಸಕರನ್ನು ಬಿಜೆಪಿಯು ತನ್ನೆಡೆಗೆ ಸೆಳೆದುಕೊಂಡಿರುವುದು ಮಣಿಪುರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವೆ ವೈಮನಸ್ಸಿಗೆ ಕಾರಣವಾಗಿದೆ. ಉಭಯ ಪಕ್ಷಗಳು ಕೇಂದ್ರದಲ್ಲಿ ಮಿತ್ರ ಪಕ್ಷಗಳಾಗಿದ್ದರೂ ಮಣಿಪುರದಲ್ಲಿ ವಿಪಕ್ಷಗಳಾಗಿವೆ.
ಮಣಿಪುರ ವಿಧಾಸನಭೆ ಚುನಾವಣೆಯ ಫಲಿತಾಂಶವು 2022ರ ಮಾರ್ಚ್ 10ರಂದು ಹೊರಬಿದ್ದಿದೆ. ರಾಜ್ಯದಲ್ಲಿ ಒಟ್ಟು 60 ವಿಧಾನಸಭೆ ಕ್ಷೇತ್ರಗಳಿದ್ದು, 32ರಲ್ಲಿ ಬಿಜೆಪಿ, 7ರಲ್ಲಿ ಎನ್‌ಪಿಪಿ, ಆರರಲ್ಲಿ ಜೆಡಿಯು ಗೆದ್ದಿದೆ. ಬಳಿಕ ಐವರು ಜೆಡಿಯು ಶಾಸಕರು ಬಿಜೆಪಿ ಸೇರಿದ್ದು, ಬಿಜೆಪಿ ಸಂಖ್ಯಾ ಬಲ 37ಕ್ಕೆ ಏರಿಕೆಯಾಗಿದೆ.
