ಈ ದಿನ ಸಂಪಾದಕೀಯ | ಕೊಲ್ಕತ್ತಾದ ಭೀಭತ್ಸ ರೇಪ್-ಹತ್ಯೆ ತನಿಖೆಯಲ್ಲಿ ವಿಫಲವಾಯಿತೇ ಸಿಬಿಐ?

Date:

Advertisements

90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ನಿಯಮದ ಪಾಲನೆ ಆಗಲಿಲ್ಲ. ಆದರೂ ತನಿಖೆ ಮತ್ತು ವಿಚಾರಣೆ ತ್ವರಿತಗತಿಯಲ್ಲಿ ನಡೆದು ಐದು ತಿಂಗಳಲ್ಲೇ ತೀರ್ಪು ಹೊರಬಿದ್ದಿರುವುದು ಸ್ವಾಗತಾರ್ಹ. ಆದರೆ ತನಿಖೆಯು ಈ ಪ್ರಕರಣದಲ್ಲಿ ಎದ್ದಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಅತ್ಯಾಚಾರ-ಕೊಲೆ ಕೃತ್ಯ ಒಬ್ಬ ವ್ಯಕ್ತಿಯದೇ, ಆತನೊಂದಿಗೆ ಇನ್ನೂ ಯಾರಾದರೂ ಇದ್ದರೇ ಎಂಬ ಬಹುಮುಖ್ಯ ಶಂಕೆ ನಿವಾರಣೆ ಆಗಿಲ್ಲ.

2012ರ ಡಿಸೆಂಬರ್ 12ರ ರಾತ್ರಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬರ್ಬರತೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಸಿಡಿದಿದ್ದವು. ಈ ಕ್ರೌರ್ಯದ ವಿರುದ್ಧದ ರೊಚ್ಚು ರಸ್ತೆಗಳಿಗೆ ಹರಿದಿತ್ತು. ವಿದ್ಯಾರ್ಥಿಶಕ್ತಿ ಸಂಸತ್ ಭವನಕ್ಕೆ ದೆಹಲಿಯ ರಾಜಪಥಕ್ಕೆ ಲಗ್ಗೆ ಹಾಕಿ ಸಂಸತ್ತಿನ ಮುತ್ತಿಗೆಗೆ ಮುಂದಾಗಿತ್ತು. ಈ ಹೆಣ್ಣುಮಗಳ ಮೇಲಿನ ಕ್ರೌರ್ಯಕ್ಕೆ ವೈದ್ಯರೇ ಬೆಚ್ಚಿ ಬಿದ್ದಿದ್ದರು. ಪುರುಷ ಪಶುಗಳ ಅತ್ಯಾಚಾರದ ವಿಕೖತ ಕೖತ್ಯದ ಸೋಂಕಿನಿಂದ ಕೊಳೆಯತೊಡಗಿದ್ದ ಈಕೆಯ ಸಣ್ಣ ಕರುಳನ್ನು ಕತ್ತರಿಸಿ ಬಿಸುಟಿದ್ದರು. ಸಿಂಗಪುರದ ಆಸ್ಪತ್ರೆಗೆ ಕರೆದೊಯ್ದರೂ ಆಕೆ ಬದುಕಿ ಉಳಿಯಲಿಲ್ಲ.

ನಿರ್ಭಯ ಪ್ರಕರಣ ಎಂದೇ ಹೆಸರಾದ ಈ ಅತ್ಯಾಚಾರ ಪ್ರಕರಣ, ಅತ್ಯಾಚಾರ ಪ್ರಕರಣಗಳ ಕುರಿತ ಕಾನೂನು ಬದಲಾವಣೆಗೂ ದಾರಿ ಮಾಡಿತ್ತು. 2024ರ ಆಗಸ್ಟ್ ಒಂಬತ್ತರಂದು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲೂ ಯುವ ವೈದ್ಯೆಯ ಮೇಲೆ ದೆಹಲಿಯ ಚಲಿಸುವ ಬಸ್ಸಿನಲ್ಲಿ ನಡೆದಂತಹುದೇ ಅಥವಾ ಅದಕ್ಕಿಂತ ಬರ್ಬರ ಪೈಶಾಚಿಕ ಅತ್ಯಾಚಾರ- ಹತ್ಯೆ ಜರುಗಿತ್ತು. ರಾಷ್ಟ್ರವ್ಯಾಪೀ ಪ್ರತಿಭಟನೆಗಳು ಜರುಗಿದವು. ಕೊಲ್ಕತ್ತಾದಲ್ಲೂ ವೈದ್ಯರ ಮುಷ್ಕರ ನಿರಂತರವಾಗಿತ್ತು. ತನ್ನ ಮಗನನ್ನು ನೇಣಿಗೇರಿಸಿದರೂ ತನಗೆ ಯಾವ ಅಭ್ಯಂತರವೂ ಇಲ್ಲವೆಂದು ಆರೋಪಿ ಸಂಜಯ ರಾಯ್‌ನ ತಾಯಿ ಹೇಳಿದ್ದರು.

ಕೊಲ್ಕತ್ತಾ ವೈದ್ಯೆಯ ಮೇಲೆ ಪೈಶಾಚಿಕ ಅತ್ಯಾಚಾರ ನಡೆಸಿ ಆಕೆಯನ್ನು ಭೀಕರವಾಗಿ ಕೊಂದಿರುವ ಪ್ರಕರಣ ಕುರಿತ ಜಿಲ್ಲಾ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಬಂಧಿತ ಆರೋಪಿ ಸಂಜಯ ರಾಯ್ ಈ ಕೃತ್ಯ ಎಸಗಿರುವುದು ಸಾಬೀತಾಗಿದೆಯೆಂದು ನ್ಯಾಯಾಲಯ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅತ್ಯಾಚಾರದ ಪ್ರಕರಣಗಳಿಗೆ ಕನಿಷ್ಠ ಶಿಕ್ಷೆ ಜೀವಾವಧಿ ಜೈಲುವಾಸ. ಗರಿಷ್ಠ ಶಿಕ್ಷೆ ಮರಣದಂಡನೆ. ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರವೇ ಗರಿಷ್ಠ ಶಿಕ್ಷೆಯನ್ನು ನೀಡಬೇಕೆಂದು ಸುಪ್ರೀಮ್ ಕೋರ್ಟ್ ವಿಧಿಸಿದೆ. ಎಂತಹ ಪ್ರಕರಣಗಳು ವಿರಳಾತಿವಿರಳ ಎಂಬುದನ್ನೂ ಸೂಚಿಸಿದೆ. ಸುಪ್ರೀಮ್ ಕೋರ್ಟ್ ಹೇಳಿರುವ ವಿರಳಾತಿವಿರಳ ಅತ್ಯಾಚಾರ ಪ್ರಕರಣಗಳ ಸಾಲಿಗೆ ಕೊಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣ ಸೇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮಮತಾ ಸರ್ಕಾರ, ಸುಪ್ರೀಮ್ ಕೋರ್ಟ್ ಮಧ್ಯಪ್ರವೇಶದ ನಂತರ  ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಆರೋಗ್ಯ ವಲಯದ ವೃತ್ತಿಪರರ ಸುರಕ್ಷತಾ ಕ್ರಮಗಳನ್ನು ಸೂಚಿಸಲೆಂದು ಹತ್ತು ಮಂದಿ ಸದಸ್ಯರ ಕಾರ್ಯದಳವನ್ನು ರಚಿಸಿತ್ತು.

90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ನಿಯಮದ ಪಾಲನೆ ಆಗಲಿಲ್ಲ. ಆದರೂ ತನಿಖೆ ಮತ್ತು ವಿಚಾರಣೆ ತ್ವರಿತಗತಿಯಲ್ಲಿ ನಡೆದು ಐದು ತಿಂಗಳಲ್ಲೇ ತೀರ್ಪು ಹೊರಬಿದ್ದಿರುವುದು ಸ್ವಾಗತಾರ್ಹ. ಆದರೆ ತನಿಖೆಯು ಈ ಪ್ರಕರಣದಲ್ಲಿ ಎದ್ದಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಅತ್ಯಾಚಾರ-ಕೊಲೆ ಕೃತ್ಯ ಒಬ್ಬ ವ್ಯಕ್ತಿಯದೇ, ಆತನೊಂದಿಗೆ ಇನ್ನೂ ಯಾರಾದರೂ ಇದ್ದರೇ ಎಂಬ ಬಹುಮುಖ್ಯ ಶಂಕೆ ನಿವಾರಣೆ ಆಗಿಲ್ಲ. ಸಂಜಯರಾಯ್ ತಾನು ಅಮಾಯಕನೆಂದೇ ಹೇಳಿದ್ದಾನೆ. ಆದರೆ ರಾಯ್ ಡಿ.ಎನ್.ಎ. ಅತ್ಯಾಚಾರ-ಹತ್ಯೆಗೆ ಈಡಾದ ಹೆಣ್ಣುಮಗಳ ದೇಹದ ಮೇಲೆ ಕಂಡುಬಂದಿದೆ. ಈ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಕೈವಾಡ ಇದೆಯೆನ್ನುತ್ತಾನೆ. ಯಾರನ್ನೋ ರಕ್ಷಿಸುವ ಇರಾದೆಯಿತ್ತು ಎಂಬಂತೆ ಅಪರಾಧ ನಡೆದ ಸ್ಥಳವನ್ನು ರಾತ್ರೋರಾತ್ರಿ ನವೀಕರಿಸಲಾಗಿತ್ತು. ಸಾಕ್ಷ್ಯಗಳು ನಾಶವಾಗಿದ್ದವು. ಆಳುವ ಸರ್ಕಾರಕ್ಕೆ ಹತ್ತಿರವಿದ್ದರು ಎನ್ನಲಾದ ಪ್ರಾಂಶುಪಾಲ ಸಂದೀಪ್ ಘೋಷ್ ಗೆ ವರ್ಗಾವಣೆ ಮತ್ತು ಬಂಧನಕ್ಕಿಂತ ಹೆಚ್ಚಿನ ‘ಶಿಕ್ಷೆ’ ಆಗಿಲ್ಲ. ಸಾಕ್ಷ್ಯಗಳನ್ನು ನಾಶ ಮಾಡಿದ ಗಂಭೀರ ಆಪಾದನೆ ಈತನ ಮೇಲಿತ್ತು. ಚಾರ್ಜ್ ಶೀಟ್ ಸಲ್ಲಿಕೆ ನಿಗದಿತ ಅವಧಿಯನ್ನು ಮೀರಿ ವಿಳಂಬವಾದ ಕಾರಣ ಘೋಷ್ ಗೆ ಜಾಮೀನು ಸಿಕ್ಕಿತ್ತು.

ಹೆಣ್ಣು ಮಕ್ಕಳಿಗೆ ಸುರಕ್ಷಿತವೆನಿಸಿದ ಪ್ರಗತಿಪರ ಮನೋಭಾವದ ಮಹಾನಗರ ಎಂಬ ಭಾವನೆಯಿದ್ದ ಕೊಲ್ಕತ್ತಾದಲ್ಲಿ ನಡೆದ ಕೃತ್ಯವಿದು. ಸಾರ್ವಜನಿಕ ಆವರಣಗಳಲ್ಲಿ ಹೆಣ್ಣುಮಕ್ಕಳ ಸುರಕ್ಷತೆಗೆ ಬೇಕಾದ ಕ್ರಮಗಳ ತೀವ್ರ ಕೊರತೆಯ ಮೇಲೆ ಈ ಕೃತ್ಯ ಬೆಳಕು ಚೆಲ್ಲಿತ್ತು.

ಈ ಭೀಭತ್ಸದ ತರುವಾಯ ಹೆಣ್ಣು ಮಕ್ಕಳ ಮೇಲೆ ಜರುಗುವ ನೀಚ ಅಪರಾಧಗಳ ತ್ವರಿತ ವಿಚಾರಣೆ ಮತ್ತು ಅಪರಾಧಿಗೆ ಮರಣದಂಡನೆ ವಿಧಿಸುವ ತಿದ್ದುಪಡಿ ಮಸೂದೆಯನ್ನು ಪಶ್ಚಿಮಬಂಗಾಳ ವಿಧಾನಸಭೆ ಅಂಗೀಕರಿಸಿತು. ಹೆಣ್ಣುಮಕ್ಕಳ ಸುರಕ್ಷತೆಯ ದಿಸೆಯಲ್ಲಿ ಸರ್ಕಾರಗಳ ಮಾತು ಮತ್ತು ಕೃತಿಯ ನಡುವೆ ಅಗಾಧ ಅಂತರವಿದೆ. ಕೇಂದ್ರ ಸರ್ಕಾರ ತನ್ನ 2024ರ ಬಜೆಟ್ಟಿನಲ್ಲಿ ನಿರ್ಭಯಾ ನಿಧಿಯ ಮೊತ್ತವನ್ನು ದುಪ್ಪಟ್ಟು ಮಾಡಿತ್ತು. ಆದರೆ ಈ ನಿಧಿಯನ್ನು ಸ್ಥಾಪಿಸಿದ 2022ರ ಸಾಲಿನಿಂದ ಇಲ್ಲಿಯ ತನಕ ಹಂಚಿಕೆಯಾದ ನಿಧಿಯ ಅರ್ಧದಷ್ಟನ್ನು ಮಾತ್ರ ವಿನಿಯೋಗಿಸಲಾಗಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹೆಣ್ಣುಮಗಳು. ತಮ್ಮ ಪಕ್ಷದಿಂದ ಲೋಕಸಭೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಗೆಲ್ಲಿಸಿ ಕಳಿಸಿದ್ದಾರೆ. ಲಕ್ಷ್ಮೀಭಂಡಾರ ಮತ್ತು ಕನ್ಯಾಶ್ರೀಯಂತಹ ಹೆಣ್ಣುಮಕ್ಕಳ ಹಿತದ ಯೋಜನೆಗಳನ್ನು ಜಾರಿಯಲ್ಲಿ ಇಟ್ಟಿದ್ದಾರೆ. ಅತ್ಯಾಚಾರ-ಹತ್ಯೆಯ ಹೀನಾತಿಹೀನ ಘಟನೆಯ ನಂತರ ಶುರುವಿನಲ್ಲಿ ನೇತ್ಯಾತ್ಮಕ ನಿಲುವು ತಳೆದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತರುವಾಯ ಜ್ಞಾನೋದಯ ಆಗಿದ್ದು ಒಳ್ಳೆಯ ಸಂಗತಿ. ತಮ್ಮ ರಾಜ್ಯದ ಕಿರಿಯ ವೈದ್ಯರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿದ್ದಾರೆ. ಅತ್ಯಾಚಾರ-ಹತ್ಯೆಗೆ ಬಲಿಯಾದ ವೈದ್ಯೆಯ ಪೋಷಕರು ಮಮತಾ ಸರ್ಕಾರ ನೀಡಿದ ನಗದು ಪರಿಹಾರವನ್ನು ತಿರಸ್ಕರಿಸಿದ್ದಾರೆ. ಅವರ ಈ ಚರ್ಯೆಯನ್ನು ನ್ಯಾಯಾಧೀಶರು ಅನುಕಂಪಿತರಾಗಿ ಅರ್ಥ ಮಾಡಿಕೊಂಡಿದ್ದಾರೆ. ‘ಎಷ್ಟೇ ದೊಡ್ಡ ಮೊತ್ತವಾದರೂ ಸಾವಿಗೆ ಹಣ ಪರಿಹಾರ ಅಲ್ಲ. ಕರ್ತವ್ಯನಿರತಳಾಗಿದ್ದ ನಿಮ್ಮ ಮಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿತ್ತು’. ಸಬಲೀಕರಣ ಮತ್ತು ಸಮಾನತೆಯ ಕುರಿತು ನೀಡಿದ ಆಶ್ವಾಸನೆಗಳನ್ನು ಜಾರಿಗೆ ತರುವ ಕುರಿತು ಸರ್ಕಾರ ಮತ್ತು ಸಮಾಜ ಪ್ರತಿಬದ್ಧತೆಯನ್ನು ಪ್ರದರ್ಶಿಸಬೇಕಾದ ಗಳಿಗೆಯಿದು. ಲಿಂಗಸೂಕ್ಷ್ಮ ವಿನ್ಯಾಸ ಮತ್ತು ನೀತಿಯನ್ನು ಪಟ್ಟಣಗಳು-ನಗರಗಳ ಯೋಜನೆಯಲ್ಲಿ ಅಳವಡಿಸಬೇಕು. ಮನೆಯಿಂದ ಹೊರಬೀಳುವ ಮಹಿಳೆ ಸುರಕ್ಷಿತವಾಗಿ ಹಿಂತಿರುಗುವಂತಾಗಬೇಕು. ಆಕೆಯ ಸಂಚಾರ ಸುಭದ್ರವೆನಿಸಬೇಕು. ಲಿಂಗಸಮಾನತೆಯ ಕುರಿತ ಸಾರ್ವಜನಿಕ ಸಂವಾದಗಳು ಹೆಚ್ಚಬೇಕು.

ಈ ಭೀಭತ್ಸ ಅತ್ಯಾಚಾರ-ಹತ್ಯೆ ನಿಜಕ್ಕೂ ‘ವಿರಾಳತಿವಿರಳ ಪ್ರಕರಣ’ವೇ ಹೌದು. ಆದರೆ ಇದು ‘ವಿರಳಾತಿವಿರಳ ಪ್ರಕರಣ’ವೆಂದು ಸಾಬೀತುಪಡಿಸುವಲ್ಲಿ ಸಿಬಿಐ ತನಿಖೆ ಮತ್ತು ಪ್ರಾಸಿಕ್ಯೂಷನ್ ವಿಫಲವಾಗಿದೆ. ನ್ಯಾಯಾಧೀಶರಿಗೆ ಮನವರಿಕೆ ಮಾಡಿಸಿಲ್ಲ. ಅತ್ಯಾಚಾರ-ಹತ್ಯೆಗೀಡಾದ ಹೆಣ್ಣುಮಗಳ ತಂದೆ ತಾಯಿ ನಿರಾಶರಾಗಿದ್ದಾರೆ. ಅಪರಾಧಿಗೆ ಗಲ್ಲು ಶಿಕ್ಷೆಯಾಗಬೇಕಿತ್ತು ಎಂಬುದು ಸಾರ್ವಜನಿಕ ಇರಾದೆಯೂ ಆಗಿತ್ತು. ಆದರೆ ನ್ಯಾಯಾಲಯದ ತೀರ್ಪು ತನ್ನ ಮುಂದೆ ಮಂಡಿಸಲಾದ ಸಾಕ್ಷ್ಯಗಳು ಮತ್ತು ವಾದವನ್ನು ಆಧರಿಸಿರುತ್ತದೆ. ಅದುವೇ ನ್ಯಾಯದಾನದ ಅಸಲು ರೀತಿನೀತಿ. ಜನಪ್ರಿಯ ಭಾವನೆಗಳು ಅಥವಾ ಭಾವಪೂರಿತ ಮನವಿಗಳನ್ನು ಆಧರಿಸಿ ತೀರ್ಪು ನೀಡಲು ಬರುವುದಿಲ್ಲ ಎಂದು ನ್ಯಾಯಾಧೀಶರು ಕೂಡ ಹೇಳಿದ್ದಾರೆ. ಕಾನೂನು ಮತ್ತು ಸಾರ್ವಜನಿಕ ಗ್ರಹಿಕೆ ಒಂದೇ ಅಲ್ಲ.

ನ್ಯಾಯಾಧೀಶರು ಅಪರಾಧಿಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದಂತಿದೆ. ಗಲ್ಲು ಶಿಕ್ಷೆಯು ಅಪರಾಧಗಳನ್ನು ತಡೆಯಲು ಸಹಾಯಕವಲ್ಲ ಎಂಬುದು ಪ್ರಪಂಚದ ಎಲ್ಲೆಡೆಯ ನಿಲುವು. ಮರಣದಂಡನೆಯು ಅತ್ಯಾಚಾರ ಪೀಡಿತೆಯ ಪ್ರಾಣಕ್ಕೇ ಆಪತ್ತು ತರುವ ಸಾಧ್ಯತೆಯಿದೆ. ಅತ್ಯಾಚಾರದ ನಂತರ ಸಾಕ್ಷ್ಯವನ್ನು ಉಳಿಯಗೊಡದಂತೆ ಆಕೆಯನ್ನು ಕೊಲ್ಲುವ ಪ್ರವೃತ್ತಿ ಹೆಚ್ಚುತ್ತದೆ ಎಂಬುದು ಅನೇಕ ಮಹಿಳಾವಾದಿಗಳ ನಿಲುವು ಕೂಡ. ಬಹುತೇಕ ರಾಷ್ಟ್ರಗಳು ಮರಣದಂಡನೆಯನ್ನು ರದ್ದು ಮಾಡಿವೆ. ಮರಣದಂಡನೆ ಮತ್ತು ಆಜೀವ ಕಾರಾಗಾರ ಜೈಲು ಶಿಕ್ಷೆಯ ಆಯ್ಕೆಯ ಸಂಕೀರ್ಣತೆಗೆ ಕೊಲ್ಕತ್ತಾ ಪ್ರಕರಣದ ತೀರ್ಪು ಕನ್ನಡಿ ಹಿಡಿದಿದೆ.  

Advertisements
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X