ಸಿಬಿಐ ಇರುವುದು ಅಪರಾಧಗಳ ತನಿಖೆಗೆ ಹೊರತು ರೈಲ್ವೆ ಅಪಘಾತ ತನಿಖೆಗಲ್ಲ: ಪ್ರಧಾನಿ ವಿರುದ್ಧ ಖರ್ಗೆ ಆಕ್ರೋಶ

Date:

Advertisements

ಕೇಂದ್ರೀಯ ತನಿಖಾ ದಳ ಇರುವುದು ಅಪರಾಧಗಳ ಪತ್ತೆ ಕಾರ್ಯ ಚಟುವಟಿಕೆಗಳಿಗೆ ವಿನಾ ರೈಲ್ವೆ ಅಪಘಾತಗಳ ತನಿಖೆಗಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಅವರು, “ಸರ್ಕಾರದ ಈ ನಿರ್ಧಾರದಿಂದ ತಾಂತ್ರಿಕ, ಸಾಂಸ್ಥಿಕ ಹಾಗೂ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಒಡಿಶಾದಲ್ಲಿ ನಡೆದಿರುವ ಭೀಕರ ಅಪಘಾತಕ್ಕೆ ನೈಜ ಕಾರಣವೇನು ಎಂಬುದರ ಬಗ್ಗೆ ಸರ್ಕಾರ ಬಹಿರಂಗಪಡಿಸಬೇಕಿದೆ. ಭಾರತೀಯ ರೈಲ್ವೆಯಲ್ಲಿ ಸಾಮಾನ್ಯ ಪ್ರಯಾಣಿಕನ ಸುರಕ್ಷತೆಯ ಸವಾಲು ಎದುರಾಗಿದೆ. ಹೀಗಾಗಿ ಈ ಅಪಘಾತ ಹಿಂದಿನ ನೈಜ ಕಾರಣವನ್ನು ಪತ್ತೆ ಮಾಡಿ, ಪ್ರಯಾಣಿಕರ ಹಿತದೃಷ್ಟಿಯಿಂದ ಸುರಕ್ಷತಾ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಒಡಿಶಾ ರೈಲ್ವೆ ಅಪಘಾತದಿಂದ ಸಾಮಾನ್ಯ ಜನತೆ ಆಕ್ರೋಶಗೊಂಡಿದ್ದಾರೆ ಹಾಗೂ ಸತ್ಯ ಏನೆಂದು ತಿಳಿಯಬಯಸುತ್ತಿದ್ದಾರೆ. ಆದರೆ ನೀವು ಮತ್ತು ರೈಲ್ವೆ ಸಚಿವರು ವಾಸ್ತವ ಸಮಸ್ಯೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ರೈಲ್ವೆ ಸಚಿವರು ಕೋರಿದ್ದಾರೆ. ಸಿಬಿಐ ಇರುವುದು ಅಪರಾಧ ಕೃತ್ಯಗಳ ಪತ್ತೆಗೇ ಹೊರತು, ರೈಲ್ವೆ ಅಪಘಾತಗಳ ತನಿಖೆಗಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisements

2016 ಪ್ರಕರಣಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ

“2016ರಲ್ಲಿ ಕಾನ್ಪುರದಲ್ಲಿ ರೈಲು ಹಳಿ ತಪ್ಪಿದ್ದರಿಂದ 150 ಪ್ರಯಾಣಿಕರು ಮೃತಪಟ್ಟರು. ಆ ಸಂದರ್ಭದಲ್ಲೂ ರೈಲ್ವೆ ಸಚಿವರು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಗೆ ವಹಿಸಿದ್ದರು. 2017ರ ಚುನಾವಣೆಯಲ್ಲಿ ಇದನ್ನು ನೀವೆ ದೊಡ್ಡ ವಿಷಯವನ್ನಾಗಿ ಎಲ್ಲೆಡೆ ಭಾಷಣ ಮಾಡಿದ್ದಿರಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಿರಿ. ಆದರೆ 2018ರಲ್ಲಿ ಎನ್ಐಎ ಈ ಪ್ರಕರಣವನ್ನೇ ಮುಕ್ತಾಯಗೊಳಿಸಿತು. ಹಾಗಿದ್ದರೆ ಆ 150 ಅಮಾಯಕರ ಸಾವಿಗೆ ಕಾರಣ ಯಾರು? ಇದಕ್ಕೆ ಉತ್ತರ ಸಿಗಬೇಕಲ್ಲವೇ” ಎಂದು ಖರ್ಗೆ ತಮ್ಮ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

’ರೈಲ್ವೆ ಇಲಾಖೆಯನ್ನು ತಳಮಟ್ಟದಿಂದ ಸದೃಢಗೊಳಿಸುವ ಬದಲು, ಸದಾ ಸುದ್ದಿಯಲ್ಲಿರಲು ಮೇಲ್ನೋಟಕ್ಕೆ ಇಲಾಖೆಯನ್ನು ಅಂದಗೊಳಿಸುವ ಪ್ರಯತ್ನವನ್ನಷ್ಟೇ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆ ಕುರಿತು ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುರಿಸುತ್ತಿದೆ. ನಿರಂತರ ತಪ್ಪು ನಿರ್ಧಾರಗಳಿಂದ ಪ್ರಯಾಣಿಕರಲ್ಲಿ ಗೊಂದಲ ಹಾಗೂ ಸುರಕ್ಷತೆಯ ಪ್ರಶ್ನೆಯನ್ನೂ ಮೂಡಿಸಿದೆ‘ ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ

ರೈಲ್ವೆ ಅಪಘಾತಕ್ಕೆ ಕೇಂದ್ರ ನಿರ್ಲಕ್ಷ

’ಮಹಾಲೇಖಪಾಲರ ವರದಿಯಂತೆ  2017ರಿಂದ 2021ರವರೆಗೆ ಸಂಭವಿಸಿದ 10 ಪ್ರಮುಖ ಅಪಘಾತಗಳಲ್ಲಿ ಏಳು ಹಳಿ ತಪ್ಪಿದ್ದರಿಂದಲೇ ಆಗಿವೆ ಎಂದು ಹೇಳಲಾಗಿದೆ. ಆದರೆ ಸರ್ಕಾರ ಪ್ರಕರಣಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪೂರ್ವ ಕರಾವಳಿ ರೈಲ್ವೆಯಲ್ಲಿ ಹಳಿಗಳ ಪರಿಶೀಲನೆ ನಡೆದೇ ಇಲ್ಲ. ರಾಷ್ಟ್ರೀಯ ರೈಲ್ವೆ ಸಂರಕ್ಷಣಾ ಕೋಶ ಇಲಾಖೆಗೆ ಶೇ. 79ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ₹20 ಸಾವಿರ ಕೋಟಿ ರೈಲ್ವೆಗೆ ಸಿಗುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“ಇಲಾಖೆಯಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ರೈಲ್ವೆ ಮಂಡಳಿಯೇ ಇತ್ತೀಚೆಗೆ ಹೇಳಿಕೊಂಡಂತೆ, ಸಿಬ್ಬಂದಿ ಕೊರತೆಯಿಂದಾಗಿ ಲೊಕೊ ಪೈಲೆಟ್‌ಗಳು ಹೆಚ್ಚಿನ ಅವಧಿಗೆ ದುಡಿಯಬೇಕಾಗಿದೆ. ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿರುವುದರಿಂದ ಅಪಘಾತ ಸಂಭವಿಸಿರುವ ಸಾಧ್ಯತೆಗಳಿವೆ. ರೈಲುಗಳ ನಡುವೆ ಘರ್ಷಣೆ ತಡೆಗಟ್ಟಲು ಜಾರಿಗೆ ತಂದ ’ರಕ್ಷಾ ಕವಚ‘ ವ್ಯವಸ್ಥೆಯನ್ನು ಶೇ. 4ರಷ್ಟು ಮಾರ್ಗದಲ್ಲಿ ಮಾತ್ರ ಅಳವಡಿಸಲಾಗಿದೆ. ಇತರೆಡೆ ಈವರೆಗೂ ಏಕೆ ಜಾರಿಗೊಳಿಸಿಲ್ಲ” ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X