ಸಮೃದ್ಧವಾದ ದೇಶವೊಂದನ್ನು ನಿರ್ಮಾಣ ಮಾಡುವಲ್ಲಿ ಆರೋಗ್ಯವಂತ ಮಕ್ಕಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಶರಾಬಿ ಅಭಿಪ್ರಾಯಪಟ್ಟರು.
ಯಾದಗಿರಿ ಜಿಲ್ಲೆಯ ಶಹಾಪುರ್ ತಾಲೂಕಿನ ಕನ್ಯಾಕೋಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಭಿವೃದ್ಧಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಅದೇ ರೀತಿ ಉತ್ತಮ ಆರೋಗ್ಯ ಹೊಂದಿರುವ ಮಕ್ಕಳು ದೇಶದ ಮುಂದಿನ ಸಂಪತ್ತಾಗಲು ಸಹಾಯವಾಗುತ್ತದೆ. ಹಾಗಾಗಿ ವರ್ಲ್ಡ್ ವಿಷನ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ವಿತರಿಸುತ್ತಿರುವ ಪೌಷ್ಟಿಕ ಆಹಾರ ಧಾನ್ಯಗಳ ಕಿಟ್‌ನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಮಕ್ಕಳ ಆರೋಗ್ಯ ವೃದ್ಧಿಸಲು ಅಡಿಪಾಯ ಹಾಕುವುದರ ಜತೆಗೆ ಸದೃಢ ದೇಶ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.
ಸಂಸ್ಥೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಅಪೌಷ್ಟಿಕ ಮಕ್ಕಳಿಗೆ ಆಹಾರ ಧಾನ್ಯಗಳ ಕಿಟ್, ಹೆಣ್ಣು ಮಕ್ಕಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು. ನಾಲ್ಕು ಫಲಾನುಭವಿಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ತಲಾ ₹30,000 ಸಹಾಯಧನ ನೀಡಲಾಯಿತು ಹಾಗೂ ಉನ್ನತ ಶಿಕ್ಷಣಕ್ಕಾಗಿ ₹80,000, ಕಿರಾಣಿ ಅಂಗಡಿ ಇಟ್ಟುಕೊಳ್ಳಲು ₹30,000 ಸಹಾಯಧನ ನೀಡಲಾಯಿತು. ಒಬ್ಬ ಫಲಾನುಭವಿಗೆ ಕುರಿ ಸಾಕಣೆ ಮಾಡಲು ₹30,000 ನೀಡಲಾಯಿತು.
ಈ ಸುದ್ದಿ ಓದಿದ್ದೀರಾ?: ಯಾದಗಿರಿ | ಅಂಬಿಗರ ಚೌಡಯ್ಯ ನಿಷ್ಠುರ ವಚನಕಾರ: ವಿಶ್ವನಾಥ ನಾಯಕ
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದಣ್ಣ ಗೌಡ ಬಿರಾದಾರ, ಆರೋಗ್ಯ ಅಧಿಕಾರಿ ಸಂಗಣ್ಣ ನುಚ್ಚಿನ್, ಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ ಹಿರೇಮಠ, ಕರದಹಳ್ಳಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜಣ್ಣ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸಾಬಣ್ಣ ಪೂಜಾರಿ, ಅಂಗನವಾಡಿಯ ಮೇಲ್ವಿಚಾರಕಿ ಮೇಲಕಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಮಕ್ಕಳು, ಪೋಷಕರು, ಸ್ವಯಂ ಸೇವಕರು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.