ಲಾಸ್ ಏಂಜಲೀಸ್‌ನಲ್ಲಿ ಬುಧವಾರ ಹೊಸ ಕಾಡ್ಗಿಚ್ಚು ಭುಗಿಲೆದ್ದಿದ್ದು, ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಎರಡು ಮಾರಕ ಕಾಡ್ಗಿಚ್ಚಿನಿಂದ ಜರ್ಜರಿತವಾಗಿರುವ ಪ್ರದೇಶದಲ್ಲಿ ಮತ್ತೆ 50 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಕಾಸ್ಟಾಯಿಕ್ ಸರೋವರದ ಪಕ್ಕದ ಬೆಟ್ಟದಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು, ಕೆಲವೇ ಗಂಟೆಗಳಲ್ಲಿ 8000 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ.
ಒಣ ಹಾಗೂ ಪ್ರಬಲ ಸ್ಯಾಂಟಾ ಅನಾ ಗಾಳಿಯಿಂದಾಗಿ ಕಾಡ್ಗಿಚ್ಚು ಕ್ಷಿಪ್ರವಾಗಿ ಹರಡುತ್ತಿದೆ. ದಟ್ಟ ಹೊಗೆ ಇಡೀ ಪ್ರದೇಶದಲ್ಲಿ ಮುಸುಕಿದ್ದು, ಅಪಾಯಕಾರಿ ಬೆಂಕಿಯ ಕೆನ್ನಾಲಿಗೆ ಆತಂಕಕಾರಿಯಾಗಿ ವ್ಯಾಪಿಸುತ್ತಿದೆ. ಉತ್ತರ ಲಾಸ್ ಏಂಜಲೀಸ್‌ನ 56 ಕಿಲೋಮೀಟರ್ ಸರಹದ್ದಿನಲ್ಲಿ ಬೆಂಕಿ ವ್ಯಾಪಿಸುವ ಭೀತಿಯ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಲ್ಕತ್ತಾದ ಭೀಭತ್ಸ ರೇಪ್-ಹತ್ಯೆ ತನಿಖೆಯಲ್ಲಿ ವಿಫಲವಾಯಿತೇ ಸಿಬಿಐ?
ಕಾಡ್ಗಿಚ್ಚು ಪುನಃ ಹೆಚ್ಚಾದ ನಂತರ ಲಾಸ್ ಏಂಜಲಿಸ್‌ನ ಅರಣ್ಯ ಪ್ರದೇಶದ ಸನಿಹದ ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುರ್ತು ಸಂದೇಶಗಳನ್ನು ಸ್ಥಳೀಯ ಆಡಳಿತದಿಂದ ರವಾನಿಸಲಾಗಿದೆ.ಇತ್ತೀಚೆಗೆ ಸಂಭವಿಸಿದ ಎರಡು ಭೀಕರ ಕಾಡ್ಗಿಚ್ಚಿನಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಸಾವಿರಾರು ಕಟ್ಟಡಗಳು ಭಸ್ಮವಾಗಿದ್ದವು.
ಹೆಲಿಕಾಪ್ಟರ್ ಹಾಗೂ ವಿಮಾನಗಳ ಮೂಲಕ ಬೆಂಕಿ ನಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.
