ಇಟ್ಟಿಗೆ ಕಾರ್ಮಿಕರಿಗೆ ಮುಂಗಡ ಹಣ ಕೊಟ್ಟು 7-8 ತಿಂಗಳವರೆಗೆ ಮಾಲೀಕರು ಅವರ ಅಧೀನದಲ್ಲಿಯೇ ಇರಿಸಿಕೊಳ್ಳುತ್ತಾರೆ. ಈ ದುಡಿಮೆ ಯಾವ ಜೀತ ಪದ್ಧತಿಗಿಂತ ಕಡಿಮೆಯಿದೆ? ಅವರ ಸ್ಥಿತಿ ಪ್ರತಿವರ್ಷ ಹೀಗೆಯೇ ಮುಂದುವರಿದಿದೆ. ಸರಕಾರದ ಕೆಲಸಗಳು ಕಾರ್ಯ ಯೋಜನೆಗಳು ಕೃಷಿ ಕೂಲಿ ಕಾರ್ಮಿಕರಿಗೆ ತಲುಪಲು ವಿಫಲವಾಗಿವೆ. ಭವಿಷ್ಯದಲ್ಲಿ ಇವರಿಗೆ ಭರವಸೆ ಇಲ್ಲದಾಗಿದೆ.
ಹೊಟ್ಟೆಪಾಡಿಗಾಗಿ ಭದ್ರತೆಯಿಲ್ಲದ, ಕನಿಷ್ಠ ವೇತನವಿಲ್ಲದ, ಸಮಯದ ನಿಗದಿಯಿಲ್ಲದ ದುಡಿಮೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಸಾಮಾನ್ಯವಲ್ಲ. ಇಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ತನ್ನ ಅಧೀನದಲ್ಲಿರಿಸಿಕೊಂಡು ಶೋಷಿಸುವುದನ್ನು ಜೀತಪದ್ಧತಿ ಎನ್ನುತ್ತೇವೆ. ಇದು ಶತಮಾನಗಳಿಂದ ನಡೆದುಕೊಂಡು ಬಂದಿತ್ತು. ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ಕಾನೂನಿನ ಚೌಕಟ್ಟಿನಲ್ಲಿ ಅದನ್ನು ನಿಷೇಧಿಸಿದರೂ ಪರೋಕ್ಷವಾಗಿ ಅಲ್ಲಲ್ಲಿ ಕಾಣಸಿಗುತ್ತಿದೆ. ಅಸಂಘಟಿತ ವಲಯದ ಕೃಷಿ, ಕಟ್ಟಡ, ಕಾರ್ಖಾನೆ, ಇಟ್ಟಿಗೆ ಭಟ್ಟಿಯಂತಹ ಕೆಲಸಗಳಲ್ಲಿ ಕಾರ್ಮಿಕರು ಜೀತಪದ್ಧತಿಯಂತಹ ವ್ಯವಸ್ಥೆಯೊಳಗೆ ದುಡಿಯುತ್ತಿದ್ದಾರೆ.
ಹೀಗೆ ಹೊಟ್ಟೆಪಾಡಿಗಾಗಿ ದುಡಿಯಲು ಬಂದ ಕಾರ್ಮಿಕರನ್ನು ಅಲ್ಲಿಯ ಭಟ್ಟಿ ಮಾಲೀಕರು ಮನಬಂದಂತೆ ಬೈಯುವುದು, ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ವಿಜಯಪುರದಲ್ಲಿ ಮಾಲೀಕರು ಇಟಂಗಿ ಕಾರ್ಮಿಕರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಕಾರ್ಮಿಕರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ ತಕ್ಷಣವೇ ಪೋಲಿಸ್ ಇಲಾಖೆಯವರು ಅಪರಾಧಿಗಳನ್ನು ಬಂಧಿಸಿದ್ದಾರೆ. ಆದರೆ ಇಂತಹ ಹೀನ ಕೃತ್ಯಗಳು ಒಂದಿಲ್ಲೊಂದು ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಬೆಳಕಿಗೆ ಬಾರದೇ ಇರುವಂತಹ ಕೃತ್ಯಗಳು ಸಾಕಷ್ಟಿವೆ. ಹೊರಗಡೆ ಜಗತ್ತಿಗೆ ಕಾಣದ ಹಾಗೆ ಬಂಧಿಸಿಟ್ಟಿದ್ದಾರೆ. ಇವರ ಪರಿಸ್ಥಿತಿ ಹೇಗಿರಬಹುದೆಂದು ನೋಡಲು ಹೊರಟರೆ ಜೀತಪದ್ದತಿಗಿಂತ ಕಡಿಮೆಯಿಲ್ಲ. ಅವರು ಎದುರಿಸುತ್ತಿರುವ ದುಃಸ್ಥಿತಿಯನ್ನು ನೋಡಿದರೆ ನಾವಿನ್ನೂ ಯಾವ ಶತಮಾನದಲ್ಲಿದ್ದೇವೆ ಎನಿಸುತ್ತದೆ. ಅವರು ಪಡುವ ಪಡಿಪಾಟಲು ಹೇಳಲಿಕ್ಕೆ ಅಸಾಧ್ಯವೆನಿಸುವಷ್ಟಿದೆ. ಜಾತಿ, ಜಮೀನ್ದಾರಿ, ಬಂಡವಾಳಶಾಹಿಯಂತಹ ವ್ಯವಸ್ಥೆಗಳ ಹಿಡಿತದಲ್ಲಿ ನಲುಗುತ್ತಿದ್ದಾರೆ. ದೀಪದ ಬೆಳಕಿಲ್ಲದೇ ಕತ್ತಲೆಯ ಬಲೆಯೊಳಗೆ ಸಿಲುಕಿಕೊಂಡು ಅವಿರತ ದುಡಿತ, ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.
ಮುಂಗಡ ಹಣ ಪಡೆದು13-14 ಗಂಟೆ ಕೆಲಸ!
ಇಟ್ಟಿಗೆ ಕೆಲಸ 8 ತಿಂಗಳು ಒಂದೇ ಕಡೆ ಇದ್ದು ಮಾಡುವಂತಹ ಕೆಲಸ. ಇದು ಮೈಮೇಲಿನ ಕೆಲಸ. ಮುಂಗಡ ಹಣ ಪಡೆದು ಜೀತದಾಳಿನಂಗೆ ದುಡಿದು ಅದನ್ನು ಮುಟ್ಟಿಸುತ್ತಾರೆ. ಎಷ್ಟು ಇಟ್ಟಿಗೆ ತಯಾರಿ ಮಾಡುತ್ತಾರೆ ಅಷ್ಟು ಬೇಗ ಹಣ ಮುಟ್ಟುತ್ತವೆ. ಬೇಗ ಹಣ ಮುಟ್ಟಲಿ ಅಂತ ಸತತ ದುಡಿಯುತ್ತಾರೆ. ಕೆಸರು ತುಳಿದು ಹದನ ಮಾಡಿಕೊಂಡು ಇಡೀ ರಾತ್ರಿ ಇಟ್ಟಿಗೆ ತಯಾರಿಸುವುದು. ಮಧ್ಯಾಹ್ನ ಬಿಸಿಲಲ್ಲಿ ಇಟ್ಟಿಗೆ ಒಣಗಿಸುವುದು, ಒಣಗಿದ ಇಟ್ಟಿಗೆಯನ್ನು ತಪ್ಪಿ ಒಟ್ಟುವುದು… ಹೀಗೆ ಹಗಲು ರಾತ್ರಿಯ ಕೆಲಸ. ಒಂದು ದಿನಕ್ಕೆ ಒಂದು ಕುಟುಂಬದವರೂ ಸೇರಿ ನಿದ್ರೆಗೆಟ್ಟು 1000- 2000 ಇಟ್ಟಿಗೆಗಳನ್ನು ಬಡಿಯುತ್ತಾರೆ. ಈ ಕೆಲಸವನ್ನು ಹಗಲು ಹೊತ್ತಲ್ಲಿ ಮಾಡಲು ಆಗುವುದಿಲ್ಲ. ಬಿಸಿಲಲ್ಲಿ ತಯಾರು ಮಾಡಿದ ಇಟ್ಟಿಗೆ ಸೀಳುತ್ತವೆ. ಹಾಗಾಗಿ ರಾತ್ರಿಯೇ ಹೆಚ್ಚಾಗಿ ಬಡಿಯುತ್ತಾರೆ. ಮಾಲೀಕರು ಸೀಳಿದ ಮತ್ತು ಒಡೆದ ಇಟ್ಟಿಗೆಗಳಿಗೆ ಬೆಲೆ ಹಿಡಿಯುವುದಿಲ್ಲ. ಸಾವಿರ ಇಟ್ಟಿಗೆಗೆ 500 ರೂಪಾಯಿ ಕೂಲಿ ಸಿಗುತ್ತದೆ ಇದಕ್ಕಾಗಿ ಇಡೀ ಕುಟುಂಬ 13- 14 ಗಂಟೆ ಕೆಲಸ ಮಾಡುತ್ತಾರೆ. ಈ ಇಟ್ಟಿಗೆ ಕೆಲಸ ಸೆಪ್ಟೆಂಬರಿನಿಂದ ಪ್ರಾರಂಭವಾಗಿ ಜೂನ್ ವರೆಗೆ ನಡೆಯುತ್ತದೆ.
ಇಟ್ಟಿಗೆ ಭಟ್ಟಿಯ ಕೆಲಸದಲ್ಲಿ 8 ತಿಂಗಳು ರಜೆಯೇ ಇರುವುದಿಲ್ಲ. ಕೆಲವು ವೇಳೆ ಮಾಲಿಕರ ಅನುಮತಿ ಪಡೆದು ರಜೆ ಪಡೆಯುತ್ತಾರೆ. ಕೆಲವರು ಅಮವಾಸ್ಯೆಗೊಮ್ಮೆ ಕೆಲಸಕ್ಕೆ ರಜೆ ತೆಗೆದುಕೊಳ್ಳುತ್ತಾರೆ. ಮಾಲೀಕರು ಇದನ್ನು ಲೆಕ್ಕದ ಪುಸ್ತಕದಲ್ಲಿ ಬರೆದು ಇಡುತ್ತಾರೆ. ಕೊನೆಯಲ್ಲಿ ಎಷ್ಟು ಇಟ್ಟಿಗೆಗಳು ಆಗಿವೆ ಅಂತ ಲೆಕ್ಕ ಹಾಕಿ, ಮಧ್ಯೆ ಸಂತೆಗೆ ತೆಗೆದುಕೊಂಡ ಹಣವನ್ನು ಕಳೆದು ಉಳಿದ ಹಣವನ್ನು ಕೊಡುತ್ತಾರೆ. ರಸ್ತೆ ಬದಿಗಳಲ್ಲಿ ಇಟ್ಟಿಗೆ ಭಟ್ಟಿ ಇರುತ್ತವೆ. ರಾತ್ರಿ 2, 3, 4 ರಿಂದ ಕೆಲಸ ಮಾಡುತ್ತಾರೆ. ಯಾವುದೇ ಭದ್ರತೆ ಇರುವುದಿಲ್ಲ. ನಿಶ್ಚಿತ ವೇತನ, ಸಂದರ್ಭನುಸಾರವಾಗಿ ಭತ್ಯೆ, ವಿರಾಮ, ವೇತನ, ಕೆಲಸದಲ್ಲಿ ಎಷ್ಟೇ ಪರಿಪೂರ್ಣತೆ ಇದ್ದರೂ ಬಡ್ತಿ ಸಿಗುವುದಿಲ್ಲ. ತಮ್ಮ ದುಡಿಮೆಯ ಮೂಲಕ ಕುಟುಂಬದ ಉಳಿವಿಗಾಗಿ ಅಷ್ಟೇ ಅಲ್ಲದೇ, ಕಟ್ಟಡ -ಕೈಗಾರಿಕೆಯ ಅಭಿವೃದ್ಧಿಗೆ ಕೊಡುಗೆ ಸಲ್ಲಿಸುವುದಲ್ಲದೇ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ ತಾವು ಮಾತ್ರ ವಂಚಿತರಾಗಿ, ನಗಣ್ಯರಾಗಿ ಉಳಿದಿದ್ದಾರೆ.

ಇಟ್ಟಂಗಿ ಭಟ್ಟಿ ಮಾಲೀಕನಿಂದ ಶೋಷಣೆ
ಇಟ್ಟಿಗೆ ಭಟ್ಟಿ ಮಾಲೀಕನಿಗೂ ಕಾರ್ಮಿಕರಿಗೂ ನೇರ ಸಂಬಂಧವಿದೆ. ಮಾಲೀಕರೂ ಇವರ ಊರುಗಳಿಗೆ ಬಂದು ಮುಂಗಡ ಹಣ ಕೊಟ್ಟು ಆಳುಗಳನ್ನು ಒಗ್ಗೂಡಿಸಿ ಕೆಲಸಕ್ಕೆ ಬರಲು ಹೇಳುತ್ತಾರೆ. ಮಾಲೀಕ ಒಂದು ಕುಟುಂಬ ಅಂತ ನೇಮಕ ಮಾಡಿ ಒಂದು ಲಕ್ಷ ರೂಪಾಯಿಯವರೆಗೆ ಮುಂಗಡ ಹಣ ಕೊಡುತ್ತಾನೆ. ಇಲ್ಲಿ ಸಣ್ಣಮಕ್ಕಳು, ವಯಸ್ಸಾದವರು ಎಲ್ಲರೂ ಕೆಲಸ ಮಾಡುತ್ತಾರೆ. ವಲಸೆ ಹೋಗಿ ಸೀಜನ್ ಮುಗಿಸಿ ಹಿಂದಿರುಗಿ ಬರುವವರೆಗೂ ಕಾರ್ಮಿಕರ ಜವಾಬ್ದಾರಿ ಮಾಲೀಕನ ಮೇಲೆ ಇರುತ್ತದೆ. 8 ತಿಂಗಳಲ್ಲಿ ರೂ. 60,000ವರೆಗೆ ಮುಟ್ಟಿಸುತ್ತದೆ. ಮುಂಗಡವಾಗಿ ತೆಗೆದುಕೊಂಡ ಹಣ ಮುಟ್ಟಿಸಲಿಲ್ಲ ಅಂದರೆ ಉಳಿದ ಹಣದಲ್ಲಿ ಮರು ವರ್ಷವೂ ಇದೇ ಕೆಲಸ ಮಾಡಲು ಬರಬೇಕಾಗುತ್ತದೆ. ಇಲ್ಲವಾದರೆ ಉಳಿದ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಕೆಲಸ ಚಲೋ ಅನಿಸಿತು ಅಂದ್ರೆ 2-3 ವರ್ಷ ಅಲ್ಲೇ ಇರ್ತಾರೆ. ಮಾಲೀಕ ಬಾಯಿಗೆ ಬಂದಂಗೆ ಹೊಲಸು ಬೈಗುಳ ಬೈಯುವುದು, ಹೊಡೆಯುವುದು ಕಾಮುಕರಿದ್ದರೆ ಅಲ್ಲಿಂದ ಬಿಡಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ಒಂದು ಸಾವಿರ ಇಟ್ಟಿಗೆಗೆ 500 ರೂಪಾಯಿ ಇದೆ. ರಾತ್ರಿ ಹಗಲು ಕೂಡಿ ಕೆಲಸ ಮಾಡಿ ಹಣ ಮುಟ್ಟಿಸುತ್ತಾರೆ.
ಕೆಲಸದ ಒತ್ತಡ ಆರೋಗ್ಯದ ಕಡೆಗಣನೆ
ಇಟ್ಟಿಗೆ ಕೆಲಸ ಮಾಡುವಾಗ ಕೆಳಗಡೆ ಕೆಸರು ಇರುವುದರಿಂದ ತುದಿ ತುದಿಕಾಲಲ್ಲಿ ಕುಳಿತು ಕೆಲಸ ಮಾಡಿ, ಕೆಸರು ತುಳಿದು ಹೈರಾಣ ಆಗುತ್ತದೆ. ಇಟ್ಟಿಗೆ ಬಡಿದು-ಬಡಿದು ರೊಟ್ಟಿ ಸಹಿತ ಮಾಡಲು ಸಾಧ್ಯವಾಗುವುದಿಲ್ಲವೆಂದು ಮಹಿಳೆಯರು ಹೇಳುತ್ತಾರೆ. ಕೆಸರಲ್ಲಿನ ಕಲ್ಲು, ಗಾಜಿನ ತುಂಡುಗಳು ಕೈಗೆ ತರಚಿ ಥಂಡಿಯಲ್ಲಿ ನೋವು. ಕೈಯಿಂದ ಕೆಸರಲೆ ಇಟ್ಟಿಗೆ ಬಡಿದು ರೇಶನ್ ಕಾರ್ಡ್‍ಗೆ ಹೆಬ್ಬೆಟ್ಟು ಗುರುತು ಕೊಡುವುದಿಲ್ಲ. ಥಂಡಿಗೆ ಕೈ ಶೆಟಿ ಹಿಡಿದ್ರ, ರಾತ್ರಿ ನಿದ್ದಿ ಬಂದ್ರೆ ಹಂಗೆ ಚಹ ಮಾಡಿ ಕುಡಿದು ಕೆಲಸ ಮುಂದುವರೆಸುತ್ತಾರೆ. ನಿರಂತರವಾಗಿ ದುಡಿದು ಕುಟುಂಬವನ್ನು ಪೊರೆದರೂ, ಕೆಲಸಗಾರರು ದೈಹಿಕ ಹಾಗೂ ಮಾನಸಿಕ ಒತ್ತಡದಲ್ಲಿ ಸಿಲುಕಿಕೊಂಡು ನಲುಗುತ್ತಿದ್ದಾರೆ. ಕನಿಷ್ಠ ಘನತೆಯ ಬದುಕು ಇವರಿಗೆ ಸಾಧ್ಯವಾಗಿಲ್ಲ. ಯಾವ ಕಾಯ್ದೆಯನ್ನೂ ಲೆಕ್ಕಿಸದೇ ಅನ್ಯಾಯವಾಗಿ ದುಡಿಸಿಕೊಂಡು, ವೇತನವನ್ನು ನೀಡದ ಮಾಲೀಕರು, ದುಪ್ಪಟ್ಟು ದುಡಿದರೂ ಯಾವ ಗೌರವವನ್ನೂ ನೀಡದ ಇವರ ಬದುಕನ್ನು ದುಸ್ತರಗೊಳಿಸಿವೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಕೊಲ್ಕತ್ತಾದ ಭೀಭತ್ಸ ರೇಪ್-ಹತ್ಯೆ ತನಿಖೆಯಲ್ಲಿ ಸಿಬಿಐ ವಿಫಲವಾಯಿತೇ?
ಇಟ್ಟಿಗೆ ಕಾರ್ಮಿಕರಿಗೆ ಮುಂಗಡ ಹಣ ಕೊಟ್ಟು 7-8 ತಿಂಗಳವರೆಗೆ ಅವರ ಅಧೀನದಲ್ಲಿಯೇ ಇರಿಸಿಕೊಳ್ಳುತ್ತಾರೆ. ಈ ದುಡಿಮೆ ಯಾವ ಜೀತ ಪದ್ಧತಿಗಿಂತ ಕಡಿಮೆಯಿದೆ? ಅವರ ಸ್ಥಿತಿ ಪ್ರತಿವರ್ಷ ಹೀಗೆಯೇ ಮುಂದುವರಿದಿದೆ. ಸರಕಾರದ ಕೆಲಸಗಳು ಕಾರ್ಯ ಯೋಜನೆಗಳು ಕೃಷಿ ಕೂಲಿ ಕಾರ್ಮಿಕರಿಗೆ ತಲುಪಲು ವಿಫಲವಾಗಿವೆ. ಭವಿಷ್ಯದಲ್ಲಿ ಇವರಿಗೆ ಭರವಸೆ ಇಲ್ಲದಾಗಿದೆ. ಕೆಲಸದ ಕಾರಣದಿಂದ ಕಾಯಿಲೆಗೆ ತುತ್ತಾದರೆ, ಅಪಘಾತಕ್ಕೊಳಗಾದರೆ ಪರಿಹಾರ ದೊರಕುವುದಿಲ್ಲ. ಕೆಲಸ ಕಳೆದುಕೊಂಡು ಪರಾವಲಂಬಿಯಾಗುತ್ತಾರೆ. ನಿಯಮಿತ ವೇತನ, ಬೋನಸ್, ಪರಿಹಾರ, ರಜೆ, ಪಿಂಚಣಿ, ವೇತನ ಬಡ್ತಿ, ಎಲ್ಲವೂ ದೊರೆತರೂ ಇನ್ನೂ ಸಾಲದು ಎಂದು ಸಂಘಟಿತ ವಲಯದವರು ಕೊರಗುತ್ತಾರೆ. ಈ ಅಸಂಘಟಿತ ವಲಯದವರು ಯಾರ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಬೇಕು? ಇಷ್ಟೆಲ್ಲ ಅಭಿವೃದ್ಧಿ ಸಾಧಿಸಿದ್ದರೂ, ತಂತ್ರಜ್ಞಾನ ಮುಂದುವರೆದಿದ್ದರೂ, ಆರ್ಥಿಕವಾಗಿ ದಾಪುಗಾಲು ಇಡುತ್ತಿದ್ದರೂ ಕಾರ್ಮಿಕರ ಬದುಕು ಇನ್ನು ಅತಂತ್ರ ಸ್ಥಿತಿಯಲ್ಲಿದೆ. ಬದುಕುವುದಕ್ಕೆ ಹೋರಾಡುವುದನ್ನು ನೋಡಿದರೆ ಯಾವ ಶತಮಾನದಲ್ಲಿ ಇದ್ದೇವೆ ಎಂದಿನಿಸುತ್ತದೆ.
ಒಟ್ಟಾರೆಯಾಗಿ ನೋಡುವಾಗ ದೇಶದ ಆರ್ಥಿಕತೆಗೆ ಆಧಾರವಾಗಿರುವ ಅಸಂಘಟಿತ ವಲಯದ ಇಟ್ಟಿಗೆ ಕಾರ್ಮಿಕರನ್ನು ಮಾಲೀಕರು ನಡೆಸಿಕೊಂಡ ರೀತಿಯು ಸರ್ಕಾರ ಹಾಗೂ ಮಾಲೀಕರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಇಟ್ಟಿಗೆ ಗೂಡಿನಲ್ಲಿ ಸುಡುತ್ತಿರುವ ಇಂತಹ ಅನೇಕ ಕುಟುಂಬಗಳನ್ನು ರಕ್ಷಿಸಬೇಕಿರುವುದು ತುರ್ತು ಅಗತ್ಯವಾಗಿದೆ.
