ಚಿತ್ರದುರ್ಗ ನಗರದ ಬಸ್ ನಿಲ್ದಾಣಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ, ಅಲ್ಲಿನ ಅವ್ಯವಸ್ಥೆ ಕಂಡು ವಿಭಾಗೀಯ ನಿಯಂತ್ರಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಮೂರು ದಿನಗಳ ಕಾಲ ಜಿಲ್ಲೆಗೆ ಲೋಕಾಯುಕ್ತರು ಭೇಟಿ ನೀಡುತ್ತಿರುವುದು ತಿಳಿದಿದ್ದರೂ ಬಸ್ ನಿಲ್ದಾಣ ಸ್ವಚ್ಛವಾಗಿಟ್ಟುಕೊಳ್ಳದವರು ಬೇರೆ ಸಮಯದಲ್ಲಿ ಹೇಗಿಟ್ಟುಕೊಳ್ಳುತ್ತೀರಿ? ಇಷ್ಟು ಅವ್ಯವಸ್ಥೆ, ಅನೈರ್ಮಲ್ಯದ ಬಸ್ ನಿಲ್ದಾಣವನ್ನು ನಾನು ಎಲ್ಲೂ ನೋಡಿಲ್ಲ, ಜಿಲ್ಲಾ ಕೇಂದ್ರದಲ್ಲೇ ಇಷ್ಟು ಅವ್ಯವಸ್ಥೆಯಿದ್ದರೆ ಇನ್ನು ಗ್ರಾಮಾಂತರ ನಿಲ್ದಾಣಗಳ ಪರಿಸ್ಥಿತಿ ಹೇಗಿದೆಯೋ” ಎಂದು ತೀವ್ರ ಅಸಮಾಧಾನಗೊಂಡರು.
ಸ್ವಚ್ಛತೆಗಾಗಿ ಏಜೆನ್ಸಿ ನೇಮಿಸಿರುವ ಬಗ್ಗೆ ಮಾಹಿತಿ ಪಡೆದ ಅವರು “ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ಇಷ್ಟು ನಿರ್ಲಕ್ಷ್ಯ ತೋರಿರುವ ಏಜೆನ್ಸಿ ವಿರುದ್ಧ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ, ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಏನು ನಿಯಂತ್ರಣ ಮಾಡಿದ್ದೀರಿ?. ಅವ್ಯವಸ್ಥೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಾಗಿದೆ ಉತ್ತರ ನೀಡಿ” ಎಂದು ತಾಕೀತು ಮಾಡಿದರು.
ಉಪಲೋಕಾಯುಕ್ತರು ಬಸ್ ನಿಲ್ದಾಣ ಪರಿಶೀಲನೆ ಮಾಡುವುದನ್ನು ನೋಡಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿಲ್ದಾಣದ ಹಾಗೂ ಬಸ್‌ಗಳ ನಿರ್ವಹಣೆಯ ಅವ್ಯವಸ್ಥೆ ಬಗ್ಗೆ ದೂರುಗಳ ಸುರಿಮಳೆಗೈದಿದ್ದು, “ಹೊಸದುರ್ಗ ಮಾರ್ಗದಲ್ಲಿ ಸಂಚರಿಸಲು ಮುಂಜಾನೆ ಯಾವುದೇ ಬಸ್ ಇಲ್ಲ. ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಬಸ್‌ಗಳು ವಿಳಂಬವಾಗುತ್ತಿವೆ. ವ್ಯವಸ್ಥಾಪಕರು ಹಾಗೂ ನಿಯಂತ್ರಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ” ಎಂದು ಶಿಕ್ಷಕರು ಸೇರಿದಂತೆ ಇತರೆ ನೌಕರರು ಅಳಲು ತೋಡಿಕೊಂಡರು.
ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಪೊಲೀಸ್ ಉಪಠಾಣೆ, ಮಹಿಳಾ ವಿಶ್ರಾಂತಿ ಗೃಹ, ಮಾತೃ ಮನೆ, ಪುರುಷರ ಶೌಚಾಲಯ, ಹೋಟೆಲ್ ಸೇರಿದಂತೆ ನಿಲ್ದಾಣದ ಆವರಣದಲ್ಲಿ ಸಂಚರಿಸಿ ನ್ಯಾ. ಕೆ ಎನ್ ಫಣೀಂದ್ರ ವೀಕ್ಷಣೆ ನಡೆಸಿದರು. ಈ ವೇಳೆ ಡ್ರೈನೇಜ್ ತುಂಬಿ ಹರಿಯುತ್ತಿರುವುದನ್ನು ಗಮನಿಸಿದರು.
“ನೀವು ಪ್ರತಿನಿತ್ಯವೂ ವೀಕ್ಷಣೆ ನಡೆಸಿ, ಕ್ರಮ ಕೈಗೊಂಡಿದ್ದರೆ, ಇಷ್ಟೊಂದು ಅವ್ಯವಸ್ಥೆ ಇರುತ್ತಿರಲಿಲ್ಲ. ಕಣ್ಣುಮುಚ್ಚಿ ಕುಳಿತ್ತಿದ್ದೀರಿ, ಕರ್ತವ್ಯಲೋಪ ಮೆಲ್ನೋಟಕ್ಕೆ ಎದ್ದು ಕಾಣುತ್ತಿದೆ. ನಾಳೆ ಸಂಜೆಯೊಳಗೆ ಮತ್ತೊಮ್ಮೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುತ್ತೇನೆ. ನಿಲ್ದಾಣದಲ್ಲಿ ವ್ಯವಸ್ಥೆ ಅಚ್ಚುಕಟ್ಟಾಗಿ ಇರದಿದ್ದರೆ, ನಿಮ್ಮನ್ನೂ ಕೆಲಸದಿಂದ ತೆಗೆಯಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ” ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ಧೀರಾ? ಹಾವೇರಿ | ಗಾಂಜಾ, ಮಟ್ಕಾ, ಇಸ್ಪೀಟ್ ಕ್ಲಬ್ ಹೆಸರಲ್ಲಿ ಯುವಕರು ಬಲಿಪಶು: ಕಡಿವಾಣ ಹಾಕುವಂತೆ ಕರವೇ ಗಜಪಡೆ ಆಗ್ರಹ
ಉಪ ಲೋಕಾಯುಕ್ತ ಭೇಟಿ ವೇಳೆ ಜಿಲ್ಲಾಧಿಕಾರಿ ಟಿ ವೆಂಕಟೇಶ್, ಜಿಪಂ ಸಿಇಓ ಎಸ್ ಜೆ ಸೋಮಶೇಕರ್, ಲೋಕಾಯುಕ್ತದ ಅಪರ ನಿಬಂಧಕ ಪೃಥ್ವಿರಾಜ್ ವರ್ಣೇಕರ್, ಜಿ ವಿ ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಕಿರಣ್ ಪಿ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ. ಎಂ ವಿಜಯ್, ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜೆ ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್ ವಾಸುದೇವರಾಮ್ ಉಪಸ್ಥಿತರಿದ್ದರು.
