ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಬೇಸತ್ತು ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರು ಗ್ರಾಮದ ಸರೋಜಾ ಕಿರಬಿ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ಗುರುತಿಸಲಾಗಿದೆ
ಹೊಳೆಪ್ಪ ದಡ್ಡಿ ಎಂಬಾತ ಫೈನಾನ್ಸ್ ನಲ್ಲಿ ಸಬ್ಸಿಡಿ ಅಡಿಯಲ್ಲಿ 2.30 ಲಕ್ಷ ರೂ. ಸಾಲವನ್ನು ಸರೋಜಾ ಕಿರಬಿ ಅವರಿಗೆ ಕೊಡಿಸಿದ್ದ. ಈ ವೇಳೆ ಅರ್ಧದಷ್ಟು ಹಣ ನನಗೆ ಕೊಟ್ಟರೆ ಸಾಲವನ್ನು ತಾನೇ ಪಾವತಿ ಮಾಡುವುದಾಗಿ ನಂಬಿಸಿದ್ದ. ಆತನ ನಂಬಿ ಸಾಲ ಪಡೆದು ಅರ್ಧದಷ್ಟು ಹಣವನ್ನು ಸರೋಜಾ ಪಾವತಿ ಮಾಡಿದ್ದರು. ಆದರೂ ಫೈನಾನ್ಸ್ ಕಂಪನಿಯು ಪೂರ್ತಿ ಸಾಲ ತುಂಬುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಈ ವೇಳೆ ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದು ಸರೋಜಾ ಹೇಳಿದ್ದು, ಫೈನಾನ್ಸ್ ಕಂಪನಿಯು ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಪಾವತಿಸುವಂತೆ ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗುತ್ತಿದ್ದು, ಇದರಿಂದ ಬೇಸತ್ತು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಫೈನಾನ್ಸ್ ಕಂಪನಿ ಹಾಗೂ ಹೊಳೆಪ್ಪ ದಡ್ಡಿ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.