- ಪ್ರಧಾನಿ ಮೋದಿ ಒಡಿಶಾ ರೈಲು ದುರಂತ ಹೊಣೆ ಹೊರಬೇಕು: ಕಾಂಗ್ರೆಸ್ ಒತ್ತಾಯ
- ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 278ಕ್ಕೆ ಏರಿಕೆ
ಒಡಿಶಾ ರೈಲು ದುರಂತ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ (ಜೂನ್ 5) ತನಿಖೆ ಆರಂಭಿಸಿದೆ.
ಸಿಬಿಐನ 10 ಸದಸ್ಯರ ತಂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದ ಬಗ್ಗೆ ಮಾಹಿತಿ ಪಡೆಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.
ಖುರ್ದಾ ರೋಡ್ ವಿಭಾಗದ ಡಿಆರ್‌ಎಂ ರಿಂತೇಶ್ ರೇ ಅವರು, “ಒಡಿಶಾ ರೈಲು ದುರಂತ ಬಗ್ಗೆ ಸಿಬಿಐ ತಂಡ ತನಿಖೆ ಆರಂಭಿಸಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ” ಎಂದು ಹೇಳಿದರು.
ರೈಲ್ವೆ ಮಂಡಳಿಯು ಭಾನುವಾರ ಅಪಘಾತದ ತನಿಖೆಯ ಹೊಣೆಯನ್ನು ಸಿಬಿಐಗೆ ಒಪ್ಪಿಸಿತ್ತು.
ಮೃತರ ಸಂಖ್ಯೆ 278ಕ್ಕೆ ಹೆಚ್ಚಳ
ಈ ಮಧ್ಯೆ ರೈಲುಗಳ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 278ಕ್ಕೆ ಏರಿದೆ. ಒಟ್ಟು 1,100 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ರಿಂತೇಶ್ ರೇ ತಿಳಿಸಿದ್ದಾರೆ.
ಮೃತರ ಪೈಕಿ 177 ಜನರ ಗುರುತು ಪತ್ತೆಯಾಗಿದ್ದು, ಇನ್ನೂ 101 ಜನರ ಗುರುತು ಪತ್ತೆಯಾಗಬೇಕಿದೆ. ಶವಗಳನ್ನು ಆರು ಆಸ್ಪತ್ರೆಗಳಲ್ಲಿ ವೈಜ್ಞಾನಿಕ ಕ್ರಮದಲ್ಲಿ ರಕ್ಷಿಸಿಡಲಾಗಿದೆ ಎಂದು ಮಾಹಿತಿ ನೀಡಿದರು.
ನಾಪತ್ತೆಯಾದವರ ವಿವರ ಸಂಗ್ರಹಿಸಲು ರೈಲ್ವೆ ಇಲಾಖೆಯು ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸಗಢ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿಗೆ ಸಿಬ್ಬಂದಿಯನ್ನು ಕಳುಹಿಸಿದೆ ಎಂದು ವರದಿಯಾಗಿದೆ.
12 ಪಕ್ಷಗಳು ಸಿಬಿಐ ತನಿಖೆ ವಿರೋಧಿಸಿ ನಿರ್ಣಯ
ಒಡಿಶಾ ರೈಲು ದುರಂತ ಸಂಬಂಧ 12 ಪಕ್ಷಗಳು ರೈಲ್ವೆ ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ನೀಡುವುದನ್ನು ವಿರೋಧಿಸಿವೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿದಂತೆ ಒಡಿಶಾದ 12 ರಾಜಕೀಯ ಪಕ್ಷಗಳು ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಆಗ್ರಹಿಸಿವೆ.
ದುರಂತದ ತನಿಖೆಗೆಯನ್ನು ಸಿಬಿಐ ಬದಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸುವಂತೆ ಸೋಮವಾರ ಬೇಡಿಕೆ ಇಟ್ಟಿವೆ. ಈ ಸಂಬಂಧ 12 ಪಕ್ಷಗಳು ಭುವನೇಶ್ವರದಲ್ಲಿ ಜಂಟಿ ಸಭೆ ನಡೆಸಿ ಸಿಬಿಐ ತನಿಖೆ ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಿದವು.
ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಪಿಎಂಎಲ್ ಲಿಬರೇಷನ್, ಸಿಪಿಎಂಎಲ್ ರೆಡ್ಸ್ಟಾರ್, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ, ಆರ್‌ಪಿಐ, ಎಎಪಿ ಮತ್ತು ಸಮತಾ ಕ್ರಾಂತಿ ದಳ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಕೇಂದ್ರದ ಬಿಜೆಪಿ ಸರ್ಕಾರ ನಿಯಂತ್ರಿಸುವ ಸಿಬಿಐನ ಬದಲಿಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕೇಂದ್ರ ಎಸ್ಐಟಿ ತನಿಖೆ ನಡೆಸಬೇಕು ಎಂಬ ನಿರ್ಣಯ ಕೈಗೊಂಡವು.
ಇನ್ನೊಂದೆಡೆ ಒಡಿಶಾದ ಆಡಳಿತಾರೂಢ ಬಿಜೆಡಿ ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ ತನಿಖೆಗೆ ವಹಿಸುವುದನ್ನು ಸ್ವಾಗತಿಸಿದೆ. “ಸಿಬಿಐ ತನಿಖೆಯಿಂದ ಯಾವ ಸಮಸ್ಯೆಯೂ ಇಲ್ಲ. ನಿಜವಾದ ತಪ್ಪಿತಸ್ಥ ಯಾರೆಂದು ತಿಳಿಯುವುದು ಅವಶ್ಯವಾಗಿದೆ” ಎಂದು ಒಡಿಶಾ ಸಚಿವೆ ಪ್ರಮೀಳಾ ಮಲ್ಲಿಕ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕರ್ತವ್ಯಕ್ಕೆ ಮರಳಿದ ಕುಸ್ತಿಪಟುಗಳು: ಪ್ರತಿಭಟನೆ ಮುಂದುವರಿಯಲಿದೆ ಎಂದ ಸಾಕ್ಷಿ, ಪುನಿಯಾ
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರತ್ ಪಟ್ಟನಾಯಕ್ ಅವರು ಸುದ್ದಿಗೋಷ್ಠಿ ನಡೆಸಿ, ಒಡಿಶಾ ರೈಲು ದುರಂತ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಶ್ವಿನಿ ವೈಷ್ಣವ್ ಅವರು ದುರಂತದ ಹೊಣೆ ಹೊರಬೇಕು ಎಂದು ಹೇಳಿದರು.