ಜನವರಿ 23 ರಂದು ಮಂಗಳೂರಿನ ಬಿಜೈ ಕೆಎಸ್ಆರ್ಟಿಸಿ ಬಳಿ ಅದಿತ್ಯ ಕಾಂಪ್ಲೆಕ್ಸ್ನಲ್ಲಿರುವ ‘ಕಲರ್ಸ್’ ಎಂಬ ಯೂನಿಸೆಕ್ಸ್ ಸಲೂನ್ಗೆ ದಾಳಿ ನಡೆಸಿದ ಘಟನೆ ಸಂಬಂಧ ಪ್ರಮುಖ ಆರೋಪಿ ಪ್ರಸಾದ್ ಅತ್ತಾವರ ಸೇರಿ 14 ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಉಳಿದ 13 ಮಂದಿ ಬಂಧಿತರನ್ನು ಹರ್ಷರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇತ್, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್, ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆಎಸ್ಆರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್ನಲ್ಲಿರುವ ಯೂನಿಸೆಕ್ಸ್ ಸಲೂನ್ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲಪಂಥೀಯ ರಾಮ ಸೇನೆಯ ಮುಖಂಡ ಪ್ರಸಾದ್ ಅತ್ತಾವರ್ ಮತ್ತು ಇತರ 13 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜನವರಿ 23ರಂದು ಬೆಳಗ್ಗೆ 11.50ರ ಸುಮಾರಿಗೆ ಸಲೂನ್ಗೆ ನುಗ್ಗಿದ ಗುಂಪು, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಗುಂಪು ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಬೆದರಿಕೆ ಕೂಡ ಹಾಕಿತ್ತು. ಸಲೂನ್ ಉಪಕರಣಗಳನ್ನು ಧ್ವಂಸಗೊಳಿಸಿತ್ತಲ್ಲದೇ ನೌಕರರನೋರ್ವನ ಮೇಲೆ ಹಲ್ಲೆ ನಡೆಸಿತ್ತು.
ಇದನ್ನು ಓದಿದ್ದೀರಾ? ಮಂಗಳೂರು | ಸಂಘಪರಿವಾರದ ದಾಂಧಲೆಗೆ ಪೊಲೀಸ್ ಕಮಿಷನರ್ ಅಗರ್ವಾಲ್ ನೇರ ಹೊಣೆ: ಡಿವೈಎಫ್ಐ
ಮಂಗಳೂರಿನ ಬಿಜೈ ಆನೆಗುಂಡಿ ನಿವಾಸಿ ಮಹಾಬಲ ಶೆಟ್ಟಿ ಎಂಬವರ ಪುತ್ರ ಸುಧೀರ್ ಶೆಟ್ಟಿ ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 06/2025ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಿಎನ್ಎಸ್ನ ಸೆಕ್ಷನ್ 329 (2), 324 (5), 74, 351 (3), 115 (2), 109, 352 ಮತ್ತು 190 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಸಮಯದಲ್ಲಿ, ನಿರ್ದಿಷ್ಟ ಸಂಘಟನೆಯ ಸದಸ್ಯರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
