ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವುದು ಇಂದಿನ ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಕೊಪ್ಪಳದ ವಿದ್ಯಾರ್ಥಿ ಸಂಘಟನೆ ನಾಯಕ ಗಂಗರಾಜ ಅಳ್ಳಳಿ ಅಭಿಪ್ರಾಯಪಟ್ಟರು.
ಕೊಪ್ಪಳದ ಜಿಲ್ಲಾ ಕ್ರಿಡಾಂಗಣದಲ್ಲಿ ಎಐಡಿಎಸ್‌ಒ, ಎಐಎಂಎಸ್‌ಎಸ್ ಮತ್ತು ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128 ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನೇತಾಜಿಯವರ ಆದರ್ಶಗಳು ಇಂದಿಗೂ ಪ್ರಸ್ತುತ, ಇಂದಿನ ಯುವ ಸಮೂಹ ಒಟ್ಟಾಗಿ ಕೈ ಜೋಡಿಸಿ ಅವರ ಕನಸಿನ ಆದರ್ಶವಾದ ದೇಶವನ್ನು ಕಟ್ಟಬೇಕು. ಇದನ್ನು ಸಾಕಾರಗೊಳಿಸಲು ನಾವೆಲ್ಲರೂ ನೇತಾಜಿಯವರ ವಿಚಾರಗಳನ್ನು ಗಾಢವಾಗಿ ಅಭ್ಯಾಸ ಮಾಡಬೇಕು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಮಹಿಳಾ ಸಂಘಟನೆ ಜಿಲ್ಲಾ ಮುಖಂಡರಾದ ಶಾರದ ಗಡ್ಡಿ ಮಾತನಾಡಿ, “ಪ್ರಪಂಚದ ಇತಿಹಾಸದಲ್ಲಿಯೇ ವಿಶೇಷ ಎನಿಸುವ, ಮಹಿಳಾ ರೆಜಿಮೆಂಟನ್ನು ಸ್ಥಾಪನೆ ಮಾಡಿ, ಸ್ವತಂತ್ರ ಸಂಗ್ರಾಮದಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಹೋರಾಡಬಲ್ಲರು ಎಂದು ತೋರಿಸಿದ ಖ್ಯಾತಿ ನೇತಾಜಿಯವರದ್ದು. ಅವರು ಸ್ಥಾಪಿಸಿದ ಐಎನ್ಎ ನೇತೃತ್ವದಲ್ಲಿ ನಡೆದ ರಾಜಿ ರಹಿತ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಮುಖ್ಯವಾದ ಪಾತ್ರ ವಹಿಸಿತ್ತು. ಅದೇ ರೀತಿ ನಾವುಗಳೆಲ್ಲರೂ ಸೇರಿ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ಸಾಗಬೇಕು” ಎಂದು ಹುರಿದುಂಬಿಸಿದರು.
ಯುವಜನ ಸಂಘಟನೆಯ ಜಿಲ್ಲಾ ಮುಖಂಡ ದೇವರಾಜ್ ಹೊಸಮನಿ ಮಾತನಾಡಿ, “ನೇತಾಜಿ ಅವರ ಕನಸು ಶೋಷಣಾ ರಹಿತವಾದ ಸಮಾಜದ ಸ್ಥಾಪನೆ ಮಾಡುವುದಾಗಿತ್ತು. ಆದರೆ, ಇಂದು ಪ್ರಾಮಾಣಿಕವಾಗಿ ದುಡಿಯುವ ಜನರು ಬೀದಿಯಲ್ಲಿ ನಿಲ್ಲುವಂತಾಗಿದೆ. ಶಿಕ್ಷಣ, ಆರೋಗ್ಯ ಸೌಲಭ್ಯಗಳು ದುಬಾರಿಯಾಗಿವೆ. ನಿರುದ್ಯೋಗ ಹೆಚ್ಚುತ್ತಿದೆ. ಮತ್ತೊಂದೆಡೆ ಲೂಟಿಕೋರರು, ಭ್ರಷ್ಟರು, ಇನ್ನೊಬ್ಬರ ಶ್ರಮವನ್ನು ಲೂಟಿ ಹೊಡೆಯುವ ದೊಡ್ಡ ಮಾಲೀಕರು ಐಷಾರಾಮಿ ಜೀವನ ನಡೆಸುವಂತಹ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದರ ವಿರುದ್ಧ ಯುವಜನರು, ವಿದ್ಯಾರ್ಥಿಗಳು ಪ್ರಜ್ಞಾವಂತ ನಾಗರಿಕರು ಹೋರಾಟಕ್ಕೆ ಮುನ್ನಡೆಯುವುದೇ ನಾವು ನೇತಾಜಿಯವರಿಗೆ ಸಲ್ಲಿಸುವ ನಿಜವಾದ ಗೌರವ” ಎಂದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, “ನೇತಾಜಿ ಅವರ ವಿಚಾರಗಳನ್ನು ಜಿಲ್ಲೆಯಾದ್ಯಂತ ವಿದ್ಯಾರ್ಥಿ ಯುವಕರಿಗೆ ತಿಳಿಸುವ ಕೆಲಸವನ್ನು ನಮ್ಮ ಸಂಘಟನೆಗಳು ನಿರಂತರವಾಗಿ ಮಾಡುತ್ತಿವೆ. ಎಲ್ಲಾ ಕಾರ್ಯಕ್ರಮಗಳು ಜನ ಬೆಂಬಲದಿಂದ ನಡೆಯುತ್ತಿವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ರಾತ್ರೋರಾತ್ರಿ ಕೆರೆ ಮಣ್ಣು ಕಳ್ಳತನ; ಗುತ್ತಿಗೆದಾರ ವಿಶ್ವನಾಥ ಕುಂಬಾರನ ವಿರುದ್ಧ ಸೂಕ್ತ ಕ್ರಮವಾಗುವುದೇ?
ಕಾರ್ಯಕ್ರಮದಲ್ಲಿ ಸದಾಶಿವ ಮುನಿರಾಬಾದ್, ಸುಭಾನ್ ನೀರಲಗಿ, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಕೊಪ್ಪಳ ನಾಗರಿಕರು ಭಾಗವಹಿಸಿದ್ದರು.
