ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆಯ ಹಂತದಲ್ಲೇ ಆಕಾಂಕ್ಷಿಗಳು ಆನ್‌ಲೈನ್ ಮೂಲಕ ಶೈಕ್ಷಣಿಕ, ಜಾತಿ ಮತ್ತು ದೈಹಿಕ ಅಂಗವೈಕಲ್ಯದ ಕುರಿತು ಪ್ರಮಾಣಪತ್ರಗಳನ್ನು ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಈ ಮೊದಲು, ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ನಂತರವೇ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಿತ್ತು. ಆದರೆ ಸಿಬ್ಬಂದಿ ಸಚಿವಾಲಯವು 2025ರ ನಾಗರಿಕ ಸೇವಾ ಪರೀಕ್ಷೆಯ ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದೆ.
ಯುಪಿಎಸ್‌ಸಿ ಕೇಂದ್ರ ನಾಗರಿಕ ಸೇವೆಗಳಿಗೆ ಪರೀಕ್ಷೆ ಮತ್ತು ಸಂದರ್ಶನಗಳ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ. ಇತ್ತೀಚೆಗೆ ಪೂಜಾ ಖೇಡ್ಕರ್ ಅವರು ನಕಲಿ ದಾಖಲೆ ನೀಡಿ ಐಎಎಸ್ ಹುದ್ದೆ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಕೇಂದ್ರ ಲೋಕ ಸೇವಾ ಆಯೋಗ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಕ್ರೋ ಫೈನಾನ್ಸ್‌ಗೆ ಬಲಿಯಾಗುತ್ತಿರುವ ಬಡವರು; ಸತ್ತಂತಿರುವ ಸರ್ಕಾರ
ಅಭ್ಯರ್ಥಿಯು ಪ್ರಾಥಮಿಕ ಪರೀಕ್ಷೆಯ ಹಂತದಲ್ಲೇ ಆನ್ ಲೈನ್ ಅರ್ಜಿ ನಮೂನೆಯೊಂದಿಗೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ವಿಫಲವಾದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನಕಲಿ ದಾಖಲೆ ಸಲ್ಲಿಸಿದ ಆರೋಪ ಕೇಳಿ ಬಂದ ಬಳಿಕ ಕೇಂದ್ರ ಸರ್ಕಾರ ಸೆಪ್ಟೆಂಬರ್ 6ರಂದು ಪೂಜಾ ಖೇಡ್ಕರ್ ಅವರನ್ನು ಭಾರತೀಯ ಆಡಳಿತ ಸೇವೆಯಿಂದ ಬಿಡುಗಡೆ ಮಾಡಿತ್ತು.
