ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಮತ್ತು ಅಗತ್ಯ ಸಿಬ್ಬಂದಿಯನ್ನು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು, ಪ್ರಾಯೋಗಾಲಯ ಸಿಬ್ಬಂದಿ, ತಂತ್ರಜ್ಞರು ಹಾಗೂ ಗ್ರೂಪ್ ‘ಡಿ’ ನೌಕರರನ್ನು ಭರ್ತಿ ಮಾಡಲು ಕ್ರಮವಹಿಸಲಾಗಿದೆ” ಎಂದು ಹೇಳಿದರು.
“ಜಿಲ್ಲಾಸ್ಪತ್ರೆಯಲ್ಲಿ ಕೆಲವು ಪರೀಕ್ಷೆ ಮಾಡಿಸಲು ಹೊರಗಡೆಗೆ ಚೀಟಿ ಬರೆದು ನೀಡುತ್ತಿರುವುದಾಗಿ ದೂರುಗಳು ಬಂದಿವೆ. ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳಿಗೆ ಹೊರಗಡೆ ಪರೀಕ್ಷೆ ಮಾಡಿಸಿಕೊಂಡು ಬರಲು ಸೂಚಿಸಬಾರದು. ಆಸ್ಪತ್ರೆಗೆ ಅಗತ್ಯವಿರುವ ಹೊಸ ಯಂತ್ರೋಪಕರಣ ತುರ್ತಾಗಿ ಪೂರೈಸಲಾಗುವುದು. ಯಂತ್ರೋಪಕರಣಗಳ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು” ಎಂದು ಸೂಚಿಸಿದರು.
“ತಾಲೂಕು ಆಸ್ಪತ್ರೆ ಹಳೆಯದಾಗಿದೆ. ಅದನ್ನು ದುರಸ್ತಿ ಮಾಡಿಸಲು ಸಾಧ್ಯವಿಲ್ಲ. ಹೊಸ ಆಸ್ಪತ್ರೆ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಪ್ರಸ್ತುತ ಆಸ್ಪತ್ರೆಯಲ್ಲಿ 8 ಐಸಿಯು, 7 ಡಯಾಲಿಸಿಸ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನು ಹೆಚ್ಚು ಮಾಡಲು ಕ್ರಮವಹಿಸಬೇಕು” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | 97 ಎಕರೆ ಭೂಮಿ ಕಬಳಿಕೆಗೆ ಯತ್ನ; ಪ್ರಭಾವಿ ರಾಜಕಾರಣಿಗಳ ಹುನ್ನಾರವೆಂದ ಎಚ್ ಡಿ ರೇವಣ್ಣ
ಆಸ್ಪತ್ರೆಯ ಹಲವು ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.
ಶಾಸಕರಾದ ಎಚ್ ಎ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಶೇಷಾದ್ರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಚಂದ್ರಯ್ಯ , ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನಿರಂಜನ್, ಜಿಲ್ಲಾ ಶಸ್ತಚಿಕಿತ್ಸಾಧಿಕಾರಿ ಡಾ. ಮಂಜುನಾಥ್, ಡಾ ಕುಮಾರ್, ಡಾ ರಾಜು, ಜಿಲ್ಲಾ ಆಸ್ಪತ್ರೆಯ ವೈದ್ಯರು ಸೇರಿದಂತೆ ಇತರರು ಇದ್ದರು.