‘ಎಲ್ಲ ಹೆಣ್ಮಕ್ಕಳೂ ಸೀತೆ -ಸಾವಿತ್ರಿಯರೇನೂ ಅಲ್ಲ, ಬೀಡಿಯನ್ನೇ ಸೇದದ ವ್ಯಕ್ತಿ (ಹರಿಯಾಣ ಬಿಜೆಪಿ ಅಧ್ಯಕ್ಷ ಮೋಹನ್ ಲಾಲ್ ಬಡೋಲಿ) ರೇಪ್ ಮಾಡುವುದು ಸಾಧ್ಯವಿಲ್ಲ’ ಎನ್ನುತ್ತಿವೆ ಹರಿಯಾಣದ ಬ್ರಾಹ್ಮಣ ಜಾತಿ ಸಂಘ ಸಂಸ್ಥೆಗಳು.
ಮೋಹನ್ ಲಾಲ್ ಬಡೋಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅತ್ಯಾಚಾರಕ್ಕೆ ಬಲಿಯಾದ ಸಂತ್ರಸ್ತೆಯನ್ನೇ ನಿಂದಿಸಿ, ತನ್ನ ಮೇಲೆ ಜರುಗಿದ ಅತ್ಯಾಚಾರಕ್ಕೆ ತಾನೇ ಜವಾಬ್ದಾರಳು ಎಂದು ದೂಷಿಸುವುದು ಮಾಮಾಲು ಪ್ರವೃತ್ತಿಯಾಗಿ ಹೋಗಿದೆ. ನ್ಯಾಯಾಲಯಗಳು ಕೂಡ ಇಂತಹ ಟೀಕೆ ಟಿಪ್ಪಣಿಗಳನ್ನು ಮಾಡಿರುವುದುಂಟು.
2022ರ ಅತ್ಯಾಚಾರ ಪ್ರಕರಣವೊಂದರಲ್ಲಿ ಅತ್ಯಾಚಾರಕ್ಕೀಡಾದ ಯುವತಿ ಪ್ರಚೋದನಕಾರಿ ಉಡುಪುಗಳನ್ನು ಧರಿಸಿದ್ದಳು ಎಂದು ಕೇರಳದ ಜಿಲ್ಲಾ ನ್ಯಾಯಾಧೀಶರೊಬ್ಬರು ಹೇಳಿದ್ದರು. 2017ರಲ್ಲಿ ಅತ್ಯಾಚಾರಕ್ಕೀಡಾದ ಯುವತಿಯು ಬಹಳ ಕ್ಷೀಣದನಿಯಲ್ಲಿ ‘ಬೇಡ’ ಎಂದಿದ್ದಳಾದ ಕಾರಣ ಆಪಾದಿತನಿಗೆ ಸಂಶಯದ ಲಾಭ ನೀಡಿ ಖುಲಾಸೆ ಮಾಡಬಹುದು ಎಂದಿತ್ತು ದೆಹಲಿ ಹೈಕೋರ್ಟು.
ಲೈಂಗಿಕ ಹಲ್ಲೆಯ ನಂತರದ ಫೋಟೋಗಳಲ್ಲಿ ಆಕೆ ಮಾಮೂಲು ನಗೆಮೊಗ ಹೊಂದಿದ್ದಳೇ ವಿನಾ ಗಾಬರಿ ಗಲಿಬಿಲಿಗೊಂಡ ಭಯವಿಹ್ವಲಳಾಗಿ ಕಂಡು ಬಂದಿಲ್ಲ ಎಂದು ಗೋವಾದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ತಮ್ಮ ತೀರ್ಪಿನಲ್ಲಿ ಬರೆದಿದ್ದರು. ಆಕೆಯ ವಾಟ್ಸಾಪ್ ಮಾತುಕತೆಗಳು, ಇಮೇಲ್ ಮೆಸೇಜುಗಳು, ಈ ಹಿಂದೆ ಆಕೆ ಹೊಂದಿದ್ದ ಸಂಬಂಧಗಳು, ಆಕೆಯ ಸಾಮಾಜಿಕ ಬದುಕು, ಹಲ್ಲೆ ನಡೆದಾಗ ಆಕೆ ಧರಿಸಿದ್ದ ಉಡುಪು, ಉಡುಪಿನ ಉದ್ದ ಮಾತ್ರವಲ್ಲದೆ ಆಕೆ ಧರಿಸಿದ್ದ ಒಳ ಉಡುಪು ಎಂತಹುದೆಂದೂ ತೀರ್ಪಿನಲ್ಲಿ ಬರೆದಿದ್ದರು.
ಬಡೋಲಿ ಮತ್ತು ಜೈ ಭಗವಾನ್ ಎಂಬ ಸಂಗೀತ ನಿರ್ದೇಶಕ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಹೋಟೆಲೊಂದರಲ್ಲಿ ಹೆಣ್ಣುಮಗಳೊಬ್ಪಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಹೊತ್ತಿದ್ದಾರೆ. 2023ರ ಜುಲೈನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಕುರಿತು ಹಿಮಾಚಲ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ಜೈ ಭಗವಾನ್ ಹರಿಯಾಣ ಬಿಜೆಪಿ ಪ್ರಚಾರ ಘಟಕದ ಮಾಜಿ ಅಧ್ಯಕ್ಷ.
ಬಡೋಲಿ ಮೇಲಿನ ಈ ಆರೋಪ ಅವರ ರಾಜಕೀಯ ಭವಿಷ್ಯವನ್ನು ಮುಗಿಸಿಬಿಡುವ ಪಿತೂರಿ. ಅವರು ಪುನಃ ಹರಿಯಾಣದ ಬಿಜೆಪಿ ಅಧ್ಯಕ್ಷರಾಗುವುದನ್ನು ತಡೆಯುವ ಸನ್ನಾಹ ಎಂದು ಬ್ರಾಹ್ಮಣ ಸಂಘಟನೆಗಳು ದೂರಿವೆ. ಬಡೋಲಿ ಮತ್ತು ನಾಯಬ್ ಸಿಂಗ್ ಸೈನಿ ಮುಂದಾಳತ್ವದಲ್ಲಿ ಹರಿಯಾಣದ ಮತದಾರರು ಮೂರನೆಯ ಸಲ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಬಡೋಲಿ ಮತ್ತು ಸೈನಿ ಅವರ ಈ ಯಶಸ್ಸನ್ನು ಕೆಲವರಿಂದ ಸಹಿಸಲಾಗುತ್ತಿಲ್ಲ ಎಂದು ಜಿಂದ್ ಬ್ರಾಹ್ಮಣ ಸಭಾದ ರಾಮ್ ಚಂದರ್ ಅತ್ರಿ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ಜಿಂದ್, ಹಿಸಾರ್ ಹಾಗೂ ಗೊಹಾನದಲ್ಲಿ ಬಡೋಲ ಅವರನ್ನು ಬೆಂಬಲಿಸಿ ಬ್ರಾಹ್ಮಣ ಸಂಘಟನೆಗಳು ಪತ್ರಿಕಾಗೋಷ್ಠಿಗಳು ಮತ್ತು ಪ್ರತಿಭಟನೆಗಳನ್ನು ನಡೆಸಿವೆ.
2024ರ ಜುಲೈನಲ್ಲಿ ಬಡೋಲಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸತ್ಪಾಲ್ ಬ್ರಹ್ಮಚಾರಿ ಅವರು ಬಡೋಲಿಯವರನ್ನು ಸೋಲಿಸಿದ್ದರು. ಬಡೋಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಸೂಕ್ತ ಎಂದು ಹರಿಯಾಣ ಬಿಜೆಪಿ ಸರ್ಕಾರದ ಸಾರಿಗೆ ಸಚಿವ ಅನಿಲ್ ವಿಜ್ ಆಗ್ರಹಿಸಿದ್ದರು.
ಬಡೋಲಿ ಮತ್ತು ಜೈಭಗವಾನ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿರುವ ಹೆಣ್ಣುಮಗಳು ತಮಗೆ ಜೀವ ಬೆದರಿಕೆಯಿದೆ ಎಂದಿದ್ದಾರೆ. ಬಡೋಲಿ ಮತ್ತು ಜೈ ಭಗವಾನ್ ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಕ್ಕೆ ತಮ್ಮಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಅವರು ವಿಡಿಯೋವೊಂದರಲ್ಲಿ ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ. ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡುವುದಾಗಿಯೂ ಆಕೆ ತಿಳಿಸಿದ್ದಾರೆ.
ಇದನ್ನೂ ಓದಿ ಬಿಜೆಪಿ ಕಚೇರಿ ಮುಂದೆ ದಲಿತರು ‘ಗೋಮಾಂಸ’ ಎಸೆದ ವಿದ್ಯಮಾನ ಮತ್ತು ಭಾಜಪದ ಬಾಡಿನ ಬೂಟಾಟಿಕೆ
ನನ್ನ ಮೇಲೆ ನಡೆದಿರುವ ಅತ್ಯಾಚಾರ ನಿಮ್ಮ ಮಗಳ ಮೇಲೆ ಆಗಿದ್ದಿದ್ದರೆ, ಆಕೆಯ ಮೇಲೆಯೇ ತಪ್ಪು ಹೊರಿಸುತ್ತಿದ್ದಿರೇನು ಎಂದು ಆಕೆ ತಮ್ಮನ್ನು ಪ್ರಶ್ನಿಸುತ್ತಿರುವವರನ್ನೇ ಪ್ರಶ್ನಿಸಿದ್ದಾರೆ. ಅಂದು ಕೋಣೆಯಲ್ಲಿ ನನ್ನೊಂದಿಗಿದ್ದ ನನ್ನ ಗೆಳತಿಯನ್ನು ಬೆದರಿಸಲಾಗಿದೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡುವಂತೆ ಒತ್ತಡ ಹೇರಲಾಗಿದೆ. ಆಕೆಯ ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದಿದ್ದಾರೆ.
ಸಂಗೀತದ ಆಲ್ಬಮ್ ಗಳಲ್ಲಿ ಪಾತ್ರ ನೀಡುವುದಾಗಿ ಜೈ ಭಗವಾನ್, ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಬಡೋಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂಬುದು ಆಕೆಯ ಆರೋಪ. ಇದೊಂದು ಸುಳ್ಳು ಆರೋಪದ ರಾಜಕೀಯ ಪಿತೂರಿ ಎಂಬುದು ಬಡೋಲ ಅವರ ಹೇಳಿಕೆ.