- ಅಧಿಕಾರಿಗಳನ್ನು ಅಮಾನತು ಮಾಡುವಂತೆ ತಾಕೀತು ಮಾಡಿದ್ದ ಡಿಕೆಶಿ
- ಸೋಮವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಡಿಸಿಎಂ
ಬೆಂಗಳೂರಿನ ಹೊಸಕೆರೆಹಳ್ಳಿ ಕೆರೆಯ ಮಧ್ಯಭಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಕೆರೆ ಮೂಲ ರಚನೆಗೆ ಚ್ಯುತಿ ಉಂಟುಮಾಡಲಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್.ಎಸ್ ಮೇಘಾ ಹಾಗೂ ಸಹಾಯಕ ಎಂಜಿನಿಯರ್ ಶಿಲ್ಪಾ ಅವರನ್ನು ಬಿಬಿಎಂಪಿ ಆಯುಕ್ತರು ಅಮಾನತುಗೊಳಿಸಿದ್ದಾರೆ.
ವಿಧಾನಸೌಧದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೋಮವಾರ ಸಭೆ ನಡೆಸಿದ್ದಾರೆ. ಈ ವೇಳೆ, ಹೊಸಕೆರೆಹಳ್ಳಿ ಕೆರೆಯಲ್ಲಿ ರಸ್ತೆ ನಿರ್ಮಾಣಕ್ಕೆ ಕಾರಣರಾದವರ ಕುರಿತು ಮಾಹಿತಿ ಕೇಳಿದ್ದರು. ಅವರ ಪ್ರಶ್ನೆಗೆ ಉತ್ತರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಅಧಿಕಾರಿಗಳ ವರ್ತನೆ ನೋಡಿದ ಡಿ.ಕೆ ಶಿವಕುಮಾರ್, ‘ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಬೇಕು’ ಎಂದು ಸೂಚನೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ?: ಜೂನ್ 12 ಅಥವಾ 14 ರಂದು ಸಿಇಟಿ ಪ್ರವೇಶ ಪರೀಕ್ಷೆಯ ಫಲಿತಾಂಶ
ಪ್ರಭಾವಿ ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಿಕೊಡುವ ಉದ್ದೇಶದಿಂದ ಕೆರೆ ಮಧ್ಯೆ ರಸ್ತೆ ನಿರ್ಮಾಣದ ಯೋಜನೆ ರೂಪಿಸಿ, ರಸ್ತೆ ನಿರ್ಮಾಣ ಮಾಡಿದ್ದಾರೆ. ಯೋಜನೆ ರೂಪಿಸಿದ ಮತ್ತು ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಡಿ.ಕೆ ಶಿವಕುಮಾರ್ ತಾಕೀತು ಮಾಡಿದ್ದರು.
ಅದರಂತೆ, ಇಬ್ಬರು ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.