ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಹೋರಾಟಕ್ಕೆ ಸಿದ್ಧ ಎಂದಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, “ಬೆಂಗಳೂರು ಅರಮನೆ ಮೈದಾನ ಜಾಗಕ್ಕೆ ಈಗಾಗಲೇ ನ್ಯಾಯಾಲಯದ ತಡೆಯಾಜ್ಞೆ ಇದೆ. ಅಲ್ಲದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಸಹ ಹೇಳಲಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ” ಎಂದು ತಿಳಿಸಿದರು.
2014ರ ತೀರ್ಪಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಐದು ಜನ ಅಕ್ಕ ತಂಗಿಯರು ಬೆಂಗಳೂರು ಅರಮನೆ ಪ್ರದೇಶದ ಮಾಲೀಕರು ಎಂದು ಹೇಳಿದೆ. ಅರಮನೆ ಜಾಗದ ವಿಚಾರವಾಗಿ ಕಾನೂನು ಹೋರಾಟ ಮಾಡಲು ನಾನು ಸಿದ್ದ. 40 ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಒಂದು ಕಲ್ಲು ಎಸೆದರೂ ಕೂಡಾ ನಾವು ಅದಕ್ಕೆ ಹೋರಾಟ ಮಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರೀವಾಜ್ಞೆ : ಸರ್ಕಾರ ತೀರ್ಮಾನ
“ರಾಜ್ಯ ಸರಕಾರದ ಸಂಪುಟ ಸಭೆಯ ತೀರ್ಮಾನವನ್ನು ನೋಡಿದ್ದೇನೆ. ಅರಮನೆ ಮೈದಾನದಲ್ಲಿ ಇಷ್ಟು ವರ್ಷ ನಡೆದ ಚಟುವಟಿಕೆಗಳು ಸರ್ಕಾರಕ್ಕೆ ಗೊತ್ತಿಲ್ಲದೇ ನಡೆದಿಲ್ಲ. ಯಾವುದೇ ಕಾರ್ಯಕ್ರಮವಾದರೂ ಸರ್ಕಾರಕ್ಕೆ ಗೊತ್ತಿರುತ್ತದೆ. ರಸ್ತೆ ವಿಸ್ತರಣೆಗೂ ನಮ್ಮ ಜಾಗ ಬಳಸಿಕೊಂಡಿದ್ದಾರೆ. ಅರಮನೆಯನ್ನು ಯಾರೂ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತಿದೆ. ನಮ್ಮ ಜಾಗದ ಮೇಲೆ ಯಾಕೆ ಸರ್ಕಾರದ ಕಣ್ಣು? ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೆ ಈ ಸರ್ಕಾರ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ. ಕಾರಣ ಮಾತ್ರ ಗೊತ್ತಿಲ್ಲ” ಎಂದು ಮಾರ್ಮಿಕವಾಗಿ ಮಾತನಾಡಿದರು.
“ಕಾನೂನು ಸಚಿವರಿಗೆ ಮಾಹಿತಿ ಕೊರತೆ ಇಲ್ಲ ಎಂದು ನಾನು ಹೇಳುವುದಿಲ್ಲ. ಮೆಟ್ರೋ ಕಾಮಗಾರಿಗೆ ಜಾಗ ಬಳಸಿಕೊಂಡರೆ ಒಂದೂವರೆಯಷ್ಟು ಪರಿಹಾರ ಕೊಡುತ್ತಾರೆ. ನಮ್ಮ ಜಾಗಕ್ಕೆ ಪರಿಹಾರ ಕೊಡುವಾಗ ಮಾತ್ರ ಅಭಿವೃದ್ಧಿ ವಿಚಾರ ನೆನಪಿಗೆ ಬರುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂದಿನ ರಾಜರು ಎಲ್ಲಾ ಪ್ರಜೆಗಳಿಗೆ ಅಂತಿದದರಲ್ಲವೇ