ಹುಲಸೂರ ತಾಲ್ಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಸಾಲಬಾಧೆಯಿಂದ ನೊಂದು ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರೇಷ್ಮಾ ಸುನಿಲ್ ಸೂರ್ಯವಂಶಿ (25) ಮೃತ ಮಹಿಳೆ. ಸ್ಥಳೀಯ 6 ಸ್ವ-ಸ್ವಹಾಯ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು. ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್ ಶಿವಾನಂದ ಮೇತ್ರೆ ಭೇಟಿ :
ಸಾಲ ತೀರಿಸಲು ಸಾಧ್ಯವಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಗಡಿಗೌಡಗಾಂವ್ ಗ್ರಾಮದ ರೇಷ್ಮಾ ಸೂರ್ಯವಂಶಿ ಅವರ ಮನೆಗೆ ಶುಕ್ರವಾರ ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆತ್ಮಹತ್ಯೆಗೆ ಕಾರಣವಾದ ವಿಷಯ ಕುರಿತು ಮಾಹಿತಿ ಪಡೆದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ʼಮೃತರು ಸ್ಥಳೀಯ 5-6 ಖಾಸಗಿ ಸ್ವ-ಸಹಾಯ ಸಂಘಗಳಲ್ಲಿ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದು, ಈ ಬಗ್ಗೆ ತಾಲ್ಲೂಕಿನ ಎಲ್ಲ ಸಂಘಗಳ ಮುಖ್ಯಸ್ಥರೊಂದಿಗೆ ಸೋಮವಾರ ಸಭೆ ನಡೆಸಿ, ಸಾಲ ಸಂಬಂಧ ಯಾರಿಗೂ ಕಿರುಕುಳ ಕೊಡದಂತೆ ನಿರ್ದೇಶನ ನೀಡಲಾಗುವುದು. ಒಂದು ವೇಳೆ ಇಂಥ ಪ್ರಕರಣಗಳು ಮರುಕಳಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದುʼ ಎಂದು ತಿಳಿಸಿದ್ದಾರೆ.
ಈ ಖಾಸಗಿ ಸಂಘಗಳ ಹಾವಳಿ ಅತಿಯಾಗಿದೆ. ಒಂದು ಕಂತು ಹಣ ಕಟ್ಟದೆ ಹೋದರೆ ಇದರ ಏಜೆಂಟ್ ಗಳು ನಿಂತ ಸ್ಥಾನ ಬಿಟ್ಟು ಕದಲುವುದೇ ಇಲ್ಲ. ಉಳಿದ ಸದಸ್ಯರೆಲ್ಲ ಹಣ ಕಟ್ಟದವರಿಗೆ ಹಣ ಕಟ್ಟು ಕಟ್ಟು ಎಂದು ಒತ್ತಡ ಹೇರುವುದು ನಾನು ಹಳ್ಳಿಗಳಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇನೆ.
ಬಡತನದಿಂದಾಗಿ ಹಣ ಕಟ್ಟಲು ಆಗದೆ ಉಳಿದ ಸದಸ್ಯರ ನಿಂದನೆಗಳು ಬೈಗುಳಗಳು ಸಹಿಸಿ ಮನಸ್ಸು ಕಲ್ಲಾಗಿಸಿಕೊಂಡು ಕಣ್ಣಲ್ಲಿ ಉದುರುವ ಕಂಬನಿ ತಡೆಯುತ್ತಾ ಅಸಹಾಯಕ ಸ್ಥಿತಿಯಲ್ಲಿ ನಿಲ್ಲುವ ಬಡವರನ್ನು ನಾನು ಕಣ್ಣಾರೆ ಕಂಡಿದ್ದೇನೆ.
—ಅಶ್ವಜೀತ ದಂಡಿನ
ಮಾಳೆಗಾಂವ, ಬೀದರ