ದೇಶದ ಅಭಿವೃದ್ಧಿಯಲ್ಲಿ ತ್ಯಾಗ, ಸೇವೆ ಮಹತ್ವದ ಪಾತ್ರ ವಹಿಸುತ್ತವೆ. ಯುವಜನತೆ ಇವುಗಳನ್ನು ಸರಿಯಾಗಿ ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ಅರವಿಂದ ಕೊಪ್ಪ ಹೇಳಿದರು.
ವಿಜಯಪುರ ಪಟ್ಟಣದ ಹೊರವಲಯದ ನಾಲತವಾಡ ರಸ್ತೆಯಲ್ಲಿರುವ ಬಿಬಿಆರ್ ಹವಾಾರ್ಡ್ ಪಿಯು ಸೈನ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ, ಪ್ರೌಢಶಾಲೆ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ ಉದ್ವಾಟಿಸಿ ಮಾತನಾಡಿದರು.
“ಸ್ವಾಮಿ ವಿವೇಕಾನಂದರ ಆಶಯದಂತೆ ಸ್ವಾತಂತ್ರ್ಯ ನಂತರದಲ್ಲಿ ಶಿಕ್ಷಣ ತಜ್ಞರ ತ್ಯಾಗ, ಸೇವೆಯ ಮಹತ್ವವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಿದ್ದರೆ ಇಂದು ಮೌಲ್ಯಗಳು ಕುಸಿಯುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದರು.
ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ರವೀಂದ್ರ ನಂದಪ್ಪನವರ್ ಮಾತನಾಡಿ, “ಭಾರತೀಯರೆಲ್ಲರೂ ಒಂದೇ, ಯಾರೂ ಜಾತಿ, ಧರ್ಮಗಳ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬಾರದೆಂದು ಹೇಳಿದ್ದರು. ಹಲವು ಬಗೆಯ ವಿಭಿನ್ನ ಧಾರ್ಮಿಕ ಆಚಾರ, ವಿಚಾರ ಬಂದಿದ್ದರೂ ಭಾರತೀಯರಾದ ನಾವು ಎಲ್ಲರೂ ಒಂದೇ ಎನ್ನುವ ಮೂಲಕ ಏಕತ್ವವಾದವನ್ನು ಪ್ರತಿಪಾದಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಸಂಕಷ್ಟಕೀಡಾಗಿದ್ದ ಕುಟುಂಬ: ಲಕ್ಷ್ಮೀ ಹೆಬ್ಬಾಳ್ಕರ್ ಸಹಾಯ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್ ಎಂ ನೆರಬಂಚಿ ಮಾತನಾಡಿ, “ವಿವೇಕಾನಂದರು ಯುವ ಜನತೆಗಾಗಿ ಸಮಯದ ಸದ್ಬಳಕೆ ಹಾಗೂ ಧನಾತ್ಮಕ ಚಿಂತನೆ ಕುರಿತು ಸಾಕಷ್ಟು ಕಿವಿ ಮಾತುಗಳನ್ನು ಹೇಳಿದ್ದು, ಅವುಗಳ ಮಹತ್ವ ಅರಿತು ಪ್ರಯತ್ನಶಾಲಿಯಾದರೆ ಯಶಸ್ಸು ಖಂಡಿತ ದೊರೆಯುತ್ತದೆ” ಎಂದರು.
ಪ್ರಾಂಶುಪಾಲೆ ಆರ್ ಬಿ ರೋಡಗಿ, ಕಾಲೇಜಿನ ಉಪನ್ಯಾಸಕರು ವೇದಿಕೆಯಲ್ಲಿದ್ದರು. ತಾಲೂಕಿನ ಪ್ರೌಢಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ರಸಪ್ರಶ್ನೆಯಲ್ಲಿ ವಿಜೇತರಿಗೆ ನಗದು ಪುರಸ್ಕಾರ, ಪ್ರಮಾಣ ಪತ್ರ ಸಮೇತ ಸತ್ಕರಿಸಲಾಯಿತು. ಶಿಕ್ಷಕ ಗುರುರಾಜ ಶೆಟ್ಟರ್ ವಿವೇಕಾನಂದರ ಕುರಿತು ಪ್ರಾರ್ಥನೆ ನಡೆಸಿಕೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಬಿ ಆರ್ ಬೆಳ್ಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿ ಎಂ ಕುರಿ ವಂದಿಸಿದರು.