ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?

Date:

Advertisements
ತ್ರಿಶೂಲಗಳನ್ನು ವಿತರಿಸಿ ಹಿಂದುತ್ವ ರಕ್ಷಣೆಗೆ ಪ್ರತಿಜ್ಞೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಅಥವಾ ಧಾರ್ಮಿಕ ರಕ್ಷಣೆಯ ಸೋಗಿನಲ್ಲಿ ಸಾಮಾಜಿಕ ವಿಭಜನೆಗಳನ್ನು ಪ್ರಚೋದಿಸುವ ಮತ್ತು ಹಿಂಸಾಚಾರವನ್ನು ಸಾಮಾನ್ಯಗೊಳಿಸುವ ಸಂಚು ನಡೆಯುತ್ತಿದೆ.

ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5ರಂದು ನಡೆಯಲಿದೆ. ಪಕ್ಷಗಳು ತಯಾರಿ ನಡೆಸುತ್ತಿವೆ. ಬಿಜೆಪಿ ಯಥಾಪ್ರಕಾರ ದ್ವೇಷ ಭಾಷಣದ ಮೊರೆಹೋಗಿದೆ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಮತಹಾಕುವಂತೆ ಜನರನ್ನು ಪ್ರಚೋದಿಸಲು ಆರ್‌ಎಸ್‌ಎಸ್‌-ವಿಎಚ್‌ಪಿ ನಾಯಕರು ಕೋಮುವಾದಿ ಭಾಷಣಗಳನ್ನು ಹೆಣೆಯುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಓರ್ವ ವಿಎಚ್‌ಪಿ ನಾಯಕ, ʼದೆಹಲಿಯಿಂದ ಹಿಂದುಯೇತರ ಪಾಪಿಗಳನ್ನು ಹೊರದಬ್ಬಲು ನಾವು ಬದ್ಧರಾಗಿದ್ದೇವೆʼ ಎಂದಿದ್ದಾರೆ. ಮತ್ತೋರ್ವ, ʼಆಹಾರವನ್ನು ಕಡಿಮೆ ತಿನ್ನಿ, ಮೊಬೈಲ್ ಅಥವಾ ಬೇರೆ ಏನೇ ಬೇಕಿದ್ದರೂ ಅಗ್ಗದ ಬೆಲೆಗೆ ಖರೀದಿಸಿ. ಆದರೆ, ಮನೆಯಲ್ಲಿ ಐದು ತ್ರಿಶೂಲ ಇಟ್ಟುಕೊಳ್ಳಿʼ ಎಂದಿದ್ದಾರೆ.

ಇಂತಹ ಹೇಳಿಕೆಗಳು ಏನನ್ನು ಸೂಚಿಸುತ್ತಿವೆ? ರಾಷ್ಟ್ರ ರಾಜಧಾನಿ, ಅದರಲ್ಲೂ ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿರುವ ದೆಹಲಿಯಲ್ಲಿ ಪ್ರಚೋದನಾಕಾರಿ ಭಾಷಣಗಳು ಮತ್ತು ಮಾರಕಾಸ್ತ್ರ ವಿತರಣೆಯನ್ನು ಕಾನೂನುಬದ್ಧವಾಗಿ ಅನುಮತಿಸಲಾಗಿದೆಯೇ? ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳು ಮೌನವಾಗಿರುವುದೇಕೆ? ನಿರ್ಲಕ್ಷ್ಯ ಧೋರಣೆ ತಳೆದಿರುವುದೇಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಿಸ್ಸಂದೇಹವಾಗಿ ಅಮಿತ್ ಶಾ ಅಡಿಯಲ್ಲಿರುವ ಗೃಹ ಸಚಿವಾಲಯ ಕೋಮುದ್ವೇಷವನ್ನು ಅನುಮತಿಸುತ್ತಿದೆ. ದೆಹಲಿ ಪೊಲೀಸರು ಅದಕ್ಕೆ ಪೂರಕವಾಗಿಯೇ ಕೆಲಸ ಮಾಡುತ್ತಿದ್ದಾರೆ.

Advertisements

ಈಗ, ಹಿಂದುಗಳಲ್ಲಿ ಮೂಲಭೂತವಾದ, ಕೋಮುದ್ವೇಷ ತುಂಬಿ, ಅವರನ್ನು ಶಸ್ತ್ರಸಜ್ಜಿತಗೊಳಿಸುವ ಅಭಿಯಾನವು ಮಹಿಳೆಯರಿಗೂ ಹರಡಿದೆ ಎಂದು ವರದಿಗಳು ಹೇಳುತ್ತಿವೆ. ದೆಹಲಿಯಲ್ಲಿ ‘ಶಾಸ್ತ್ರ ದೀಕ್ಷಾ ಸಮರೋಹ್’ ಎಂಬ ಹೆಸರಿನಲ್ಲಿ ಹಿಂದು ಮಹಿಳೆಯರಿಗೆ 20,000 ಕಠಾರಿಗಳನ್ನು ವಿತರಿಸಲು ಸಂಘಪರಿವಾರ ಮುಂದಾಗಿದೆ. ಜನವರಿ ಎರಡನೇ ವಾರದಿಂದಲೇ ಹಿಂದು ಮಹಿಳೆಯರಿಗೆ ಕಠಾರಿಗಳನ್ನು ವಿತರಿಸಲಾಗುತ್ತಿದೆ. ಅವುಗಳ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ.

ಐದು ವರ್ಷಗಳ ಹಿಂದೆ, ಅಂದಿನ ಚುನಾವಣೆಗೂ ಮುನ್ನ ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆ ನಡೆದಿತ್ತು. ಆ ಘಟನೆಯಲ್ಲಿ ಎರಡೂ ಸಮುದಾಯಗಳ ಅಮಾಯಕರು ಸಾವನ್ನಪ್ಪಿದರು. ಅಪಾರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. ಆದರೆ, ಆ ಪ್ರಕರಣದಲ್ಲಿ ದೆಹಲಿ ಪೊಲೀಸರು ಒಂದು ಸಮುದಾಯದ ಪಾತ್ರವನ್ನು ಮಾತ್ರವೇ ಗುರುತಿಸಲು ಯತ್ನಿಸಿದರು. ಉಮರ್ ಖಾಲಿದ್ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟಿದರು. ಆದರೆ, ಈವರೆಗೂ ಅವರ ವಿರುದ್ಧದ ಆರೋಪವನ್ನು ಸಾಬೀತು ಮಾಡಲಾಗಿಲ್ಲ. ವಿದ್ಯಾರ್ಥಿ ನಾಯಕರು ಜೈಲಿನಿಂದ ಹೊರಬರಲೂ ಸಾಧ್ಯವಾಗಿಲ್ಲ.

2020ರ ಗಲಭೆಯಿಂದ ದೆಹಲಿ ಇನ್ನೂ ಚೇತರಿಸಿಕೊಳ್ಳುತ್ತಿದೆ. ಇದೀಗ, ಮತ್ತೆ ಪ್ರಚೋದನಾಕಾರಿ ಹೇಳಿಕೆಗಳು, ಮಾರಕಾಸ್ತ್ರ ಹಂಚಿಕೆಗಳು ನಡೆಯುತ್ತಿವೆ. ಇದು ಮತ್ತೊಂದು ಗಲಭೆಗೆ ದೆಹಲಿಯನ್ನು ಸಜ್ಜುಗೊಳಿಸುತ್ತಿರುವಂತೆ ತೋರುತ್ತಿದೆ. ದೆಹಲಿಯಲ್ಲಿ 50,000 ಹಿಂದು ಪುರುಷರಿಗೆ ತ್ರಿಶೂಲಗಳು ಮತ್ತು 20,000 ಮಹಿಳೆಯರಿಗೆ ಕಠಾರಿಗಳನ್ನು ವಿತರಿಸಲಾಗುತ್ತದೆ ಎಂಬ ಮಾತುಗಳಿವೆ. ಇದು, ಗಣರಾಜ್ಯೋತ್ಸವದ ಬಳಿಕ ಹಿಂದು ಕೋಮುವಾದಿ ಭಯೋತ್ಪಾದಕರು ತಮ್ಮ ಕೊಳಕು ಕೃತ್ಯಗಳಲ್ಲಿ ತೊಡಗಬಹುದು. ದೆಹಲಿಯಲ್ಲಿ ಶಾಂತಿ ಮತ್ತು ಸಾಮರಸ್ಯ ಕದಡುವ ಯತ್ನಗಳು ನಡೆಯಬಹುದೆಂದು ಊಹಿಸಲಾಗುತ್ತಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಿಂದುತ್ವ ಬಲಪಂಥೀಯ ಸರಣಿ ಕಾರ್ಯಕ್ರಮ/ಸಭೆಗಳು ನಡೆದಿವೆ. ಈ ಎಲ್ಲ ಸಭೆಯಲ್ಲಿಯೂ ತ್ರಿಶೂಲಗಳನ್ನು ವಿತರಿಸುವುದು ಮತ್ತು ಹಿಂದುತ್ವ ರಕ್ಷಣೆಗೆ ಪ್ರತಿಜ್ಞೆ ಮಾಡುವುದರ ಜೊತೆಗೆ ಕೋಮುದ್ವೇಷವನ್ನು ಪ್ರಚೋದಿಸುವುದು ಸಾಮಾನ್ಯವಾಗಿ ಕಂಡುಬಂದಿದೆ. ಈ ಎಲ್ಲ ಸಭೆಗಳು ಸಾಂಸ್ಕೃತಿಕ ಅಥವಾ ಧಾರ್ಮಿಕ ರಕ್ಷಣೆಯ ಸೋಗಿನಲ್ಲಿ ಸಾಮಾಜಿಕ ವಿಭಜನೆಗಳನ್ನು ಪ್ರಚೋದಿಸುವ ಮತ್ತು ಹಿಂಸಾಚಾರವನ್ನು ಸಾಮಾನ್ಯಗೊಳಿಸುವ ಸಂಚುಹೊಂದಿವೆ ಎಂದು ʼನ್ಯಾಯ ಮತ್ತು ಶಾಂತಿಗಾಗಿ ನಾಗರಿಕರುʼ (CJP) ವೇದಿಕೆ ಹೇಳಿದೆ.

ದೇಶದಲ್ಲಿನ ಕೋಮು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಘಪರಿವಾರದ ‘ತ್ರಿಶೂಲ ದೀಕ್ಷಾ ಸಮರೋಹ್’ ಕಲ್ಪನೆಯು ಇತ್ತೀಚಿನದಲ್ಲ. ಇದು, 20 ವರ್ಷಗಳಿಗೂ ಹಿಂದಿನದು. ಕೋಮು ಸಾಮರಸ್ಯವನ್ನು ಹಾಳುಮಾಡಲು 1998ರಿಂದಲೇ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಆರಂಭವಾಗಿತ್ತು. ಆದರೆ, ಅದನ್ನು ಜನರನ್ನು ಜಾಗೃತಗೊಳಿಸುವ ಸಾಂಕೇತಿಕ ಧಾರ್ಮಿಕ ಚಟುವಟಿಕೆಯೆಂದು ಕರೆಯಲಾಗಿತ್ತು. ಆದಾಗ್ಯೂ, ಇದು, 2002ರಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ಬಳಿಕ ವೇಗ ಪಡೆದುಕೊಂಡಿತು. ಈಗ, ಮೋದಿ ಆಳ್ವಿಕೆಯ 10 ವರ್ಷಗಳ ಬಳಿಕ, ತ್ರಿಶೂಲ ದೀಕ್ಷೆಯು ರಾಜಾರೋಷವಾಗಿ, ಬಹಿರಂಗವಾಗಿ ನಡೆಯುತ್ತಿದೆ.

ಈ ವರದಿ ಓದಿದ್ದೀರಾ?: ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ

ಈ ಕಾರ್ಯಕ್ರಮಗಳ ವಿರುದ್ಧ ಸಿಜೆಪಿ ಮುಖಂಡರು 2024ರ ಮೇ 2 ಮತ್ತು ಮೇ 9ರಂದು ನಾಗ್ಪುರ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೂ ದೂರು ನೀಡಿದ್ದರು. ಕಾರ್ಯಕ್ರಮಗಳಲ್ಲಿ ಪುರುಷರಿಗೆ ತ್ರಿಶೂಲ ವಿತರಿಸಲಾಗುತ್ತಿದೆ. ಹಿಂದುಗಳನ್ನು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆಯಾಗಿದೆ ಎಂಬುದನ್ನು ಎತ್ತಿತೋರಿಸಿದ್ದರು.

ಆದರೂ, ತ್ರಿಶೂಲ ದೀಕ್ಷಾ ಕಾರ್ಯಕ್ರಮಗಳು ಮುಂದುವರೆದಿವೆ. ಸಾಮಾಜಿಕ ಉದ್ವಿಗ್ನತೆ ಮತ್ತು ಸಂಘರ್ಷಗಳಿಗೆ ಕಾರಣವಾಗುವ ಭಾಷಣಗಳನ್ನು ಹಿಂದುತ್ವವಾದಿಗಳು ಹರಡುತ್ತಲೇ ಇದ್ದಾರೆ. ತ್ರಿಶೂಲ-ಕಠಾರಿಗಳನ್ನು ಹಂಚುತ್ತಿದ್ದಾರೆ.

ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ ದೆಹಲಿ ಕಾನೂನು ಸುವ್ಯವಸ್ಥೆಯ ಅಧಿಕಾರಿಗಳು ಮತಾಂಧ ಶಕ್ತಿಗಳನ್ನು, ಅವರ ದ್ವೇಷ ಭಾಷಣಗಳನ್ನು ನಿಯಂತ್ರಿಸಲು ಹೇಗೆ ಕೆಲಸ ಮಾಡುತ್ತಾರೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಬಿಜೆಪಿ ನಡೆಸುತ್ತಿರುವ ಧ್ರುವೀಕರಣದ ರಾಜಕೀಯದ ಬಗ್ಗೆ ಎಎಪಿ ಕೂಡ ಬಹಿರಂಗವಾಗಿ ಮಾತನಾಡದೇ ಇರುವುದು ಮತ್ತೊಂದು ಜಟಿಲತೆಯನ್ನು ಸೃಷ್ಟಿಸಿದೆ. ಮೋದಿ-ಶಾ ಆಳ್ವಿಕೆಯಲ್ಲಿ ಪ್ರಚೋದನಕಾರಿ ಭಾಷಣಗಳು – ಆಯುಧ ಹಂಚಿಕೆ ಕಾನೂನುಬದ್ಧವಾಗುತ್ತಿವೆ ಎಂಬಂತೆ ಕಾಣಿಸಿಕೊಳ್ಳುತ್ತಿದೆ. ಇಂತಹ ಪ್ರಚೋದನಕಾರಿ ದ್ವೇಷ ಭಾಷಣ, ಮಾರಕಾಸ್ತ್ರ ಹಂಚಿಕೆಗಳಿಗೆ ಕಡಿವಾಣ ಹಾಕದಿದ್ದರೆ, ಭಾರತದ ಪರಿಸ್ಥಿತಿ ಉದ್ವಿಗ್ನಗೊಳ್ಳುವ ಅಪಾಯವಿದೆ. ದೇಶದ ಜನರು ಸಂಘಪರಿವಾರದ ಹುನ್ನಾರವನ್ನು ಅರಿತುಕೊಳ್ಳಬೇಕಿದೆ. ಎಚ್ಚರಗೊಳ್ಳಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X