ಹೆಣ್ಣು ಮಗುವಿಗೆ ಶಿಕ್ಷಣ, ಆರೋಗ್ಯ, ಸಮಾನತೆ ಹಾಗೂ ಜಾಗೃತಿ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆಣ್ಣುಮಗುವಿನ ದಿನಾಚರಣೆ
ಹೆಣ್ಣು ಮಗುವಿಗೆ ಶಿಕ್ಷಣ, ಆರೋಗ್ಯ, ಸಮಾನತೆ ಹಾಗೂ ಜಾಗೃತಿ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಘೋಷಣೆ ಮಾಡಿ ಅನುಷ್ಠಾನಕ್ಕೆ ತರಲಾಗಿದೆ ಎಂದು ಚಿತ್ರದುರ್ಗದ ಬಿಆರ್‌ಸಿ ಅಧಿಕಾರಿ ಸಂಪತ್ ಕುಮಾರ್ ಹೇಳಿದರು.
ಚಿತ್ರದುರ್ಗದ ವಿಮುಕ್ತಿ ವಿದ್ಯಾಸಂಸ್ಥೆ, ನಕ್ಷತ್ರ ಬಾಲಕಿಯರ ಪಾರ್ಲಿಮೆಂಟ್ ಸಂಘಟನೆಗಳ ನೇತೃತ್ವದಲ್ಲಿ ಬಿಆರ್‌ಸಿ ಕಚೇರಿ ಮುಂಭಾಗ ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
“ಮಹಿಳೆಯರಿಗೆ ವಿಶೇಷವಾಗಿ ಹೆಣ್ಣು ಮಗುವಿಗೆ ಕಾನೂನಾತ್ಮಕವಾದ ರಕ್ಷಣೆ, ಸಮಾನ ನ್ಯಾಯವನ್ನು ಕಲ್ಪಿಸುವುದಾಗಿದೆ. ಸರ್ಕಾರದಿಂದ ಶಾಲಾ ಮಟ್ಟದಲ್ಲಿ ಮಕ್ಕಳ ಪಾರ್ಲಿಮೆಂಟ್‌ಗಳಂತಹ ಮಕ್ಕಳ ಸಭೆಗಳನ್ನು ನಡೆಸಿ ಅವರ ಸಮಸ್ಯೆಗಳನ್ನು ಆಲಿಸುವಂತಹ ಕಾರ್ಯವನ್ನು ನಡೆಸಲಾಗುತ್ತದೆ” ಎಂದು ನುಡಿದರು.
ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ವಿಶ್ವಸಾಗರ್ ಮಾತನಾಡಿ, “ಬಾಲಕಿಯರ ಹಕ್ಕುಗಳನ್ನು ಜಾಗೃತಿ ಮೂಡಿಸಲು ಮತ್ತು ಅರಿವು ಉಂಟುಮಾಡಲು ಜಾಗೃತಿ ಜಾಥಾ ಮಾಡಲಾಗುತ್ತಿದೆ” ಎಂದು ಹೇಳಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, “2009ರ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಘೋಷಣೆ ಮಾಡುವ ಮುಖಾಂತರ ಹೆಣ್ಣು ಮಕ್ಕಳಿಗೆ ಶಾಲಾ, ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ, ಆರೋಗ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು ದಿನಾಚರಣೆಯ ಉದ್ದೇಶವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಸುನೀಲ್ ಅಪಹರಣ, 3 ಕೋಟಿ ರೂ.ಗೆ ಬೇಡಿಕೆ
ಕಾರ್ಯಕ್ರಮಕ್ಕೂ ಮುನ್ನ ಹಳೇ ಮಾಧ್ಯಮಿಕ ಶಾಲಾ ಮೃೆದಾನದಿಂದ ಜನಜಾಗೃತಿ ಜಾಥಾ ಮೂಲಕ ತೆರಳಿದ ವಿದ್ಯಾರ್ಥಿಗಳು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಹೂಮಾಲೆ ಹಾಕಿದ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, “ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪ್ಯಾಡ್‌ಗಳನ್ನು ವಿತರಣೆ ಮಾಡಬೇಕು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು” ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜನಜಾಗೃತಿ ಜಾಥಾದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್ ವಿಶ್ವ ಸಾಗರ್, ಬೀಬಿಜಾನ್, ನಾಗರತ್ನಮ್ಮ ಅರಣ್ಯ ಸಾಗರ್, ಪೃಥ್ವಿರಾಜ್ ಮತ್ತು ವಿವಿಧ ಶಾಲೆಗಳ ಹೆಣ್ಣು ಮಕ್ಕಳು ಇದ್ದರು.