ಇಂಡಿಯಾದ ಪತ್ರಿಕಾ ಚರಿತ್ರೆಯಲ್ಲಿ ಪತ್ರಿಕೆಯೊಂದನ್ನು ಹಲವು ಚಳವಳಿಗಳ ಬೆಂಬಲಕ್ಕೆ ನಿಲ್ಲಿಸಿದ್ದಷ್ಟೇ ಅಲ್ಲದೇ, ಆ ಪತ್ರಿಕೆಯನ್ನೂ ಒಂದು ಚಳವಳಿಯಾಗಿ ರೂಪಾಂತರಗೊಳಿಸಿದ ವಿಸ್ಮಯಕರ ಸೃಷ್ಟಿಕರ್ತರಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ನಂತರ ಇದ್ದ ಮತ್ತೊಬ್ಬರೆಂದರೆ ಲಂಕೇಶರು ಮಾತ್ರ.
ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಕನ್ನಡದ ಬದುಕು ಮತ್ತು ಪ್ರಜ್ಞೆಯನ್ನು ಬಹಳ ಗಾಢವಾಗಿ ಪ್ರಭಾವಿಸಿದವರಲ್ಲಿ ಪಿ. ಲಂಕೇಶ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ನಮ್ಮ ನೆಲದ ದೈತ್ಯ ಪ್ರತಿಭೆ ಲಂಕೇಶ್ ಈ ಲೋಕದಿಂದ ನಿರ್ಗಮಿಸಿ ಇಂದಿಗೆ 25 ವರ್ಷಗಳೇ ಕಳೆದುಹೋಗಿವೆ. ಲಂಕೇಶರಿಲ್ಲದೆ ಅನಾಮತ್ತು 25 ವರ್ಷಗಳು ಕಳೆದುಹೋದವು ಎಂಬುದು ಏಕಕಾಲಕ್ಕೆ ಸೋಜಿಗವೂ ದಿಗ್ಭ್ರಮೆಯಾಗಿಯೂ ಆಗಿ ಕಾಣುತ್ತದೆ.
ಕಾಲದ ಪ್ರವಾಹವು ಕ್ಷಣಕ್ಷಣಕ್ಕೆ ತಂದೊಡ್ಡುವ ಬದುಕಿನ ಗೋಜಲು, ಜಂಜಡಗಳ ನಡುವೆ ಸುಮ್ಮನೆ ಕಳೆದುಹೋದ ನೆನಪುಗಳು ಸೋಜಿಗವೇನೊ ಹೌದು. ಆದರೆ ಲಂಕೇಶರು ಈ ನೆಲದಲ್ಲಿ ಬಿತ್ತಿದ ಚಿಂತನೆಯ ಬೀಜಗಳು ಮೊಳೆತು, ಚಿಗುರಿ, ಗಿಡವಾಗಿ, ಮರವಾಗಿ, ಹೂವಾಗಿ, ಕಾಯಾಗಿ, ಮಾಗಿ ಹಣ್ಣೊಳಗಿನ ಮತ್ತೆ ಲಕ್ಷಾಂತರ ಬೀಜಗಳಾಗಿ ಸಿಡಿದು ನಾಡಿನಗಲಕ್ಕೆ ಎಷ್ಟರ ಮಟ್ಟಿಗೆ ಹರಡಿಕೊಂಡಿವೆ? ಎಂಬ ಪ್ರಶ್ನೆಯನ್ನೇನಾದರೂ ನಮಗೆ ನಾವು ಕೇಳಿಕೊಂಡರೆ ದಿಗ್ಭ್ರಮೆಯಾಗುವುದು ಖಚಿತ.
ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಪಿ. ಲಂಕೇಶ್ ಎಂದು ಖ್ಯಾತರಾಗಿದ್ದ ಪಾಳ್ಯದ ಲಂಕೇಶ್ ಬರೆದ ಕಾವ್ಯ, ಕಟ್ಟಿದ ಕಥನ ಲೋಕ, ರಂಗದ ಮೇಲೆ ವಿಜೃಂಭಿಸಿದ ನಾಟಕ, ಬೆಳ್ಳಿತೆರೆಯ ಮೇಲೆ ತೋರಿದ ಸಿನೆಮಾದ ಮಿಂಚು ಮತ್ತು ಇದೆಲ್ಲದರ ಆಚೆಗೆ ನಿಂತು ರೂಪಿಸಿದ ‘ಕನ್ನಡ ಜಾಣಜಾಣೆಯರ ಪತ್ರಿಕೆ’… ಹೀಗೆ ಎಲ್ಲವೂ ಕನ್ನಡದ ಸಂವೇದನಾಶೀಲ ಮನಸುಗಳಿಗೆ ಎಂದೆಂದಿಗೂ ಬೆರಗೂ ಹೌದು ಬೆಳಕೂ ಹೌದು. ಅವರು ತಮ್ಮ ಅಭಿವ್ಯಕ್ತಿಯ ಆವರಣದೊಳಗೆ ಶೋಧಿಸಿದ, ಪ್ರಯೋಗಿಸಿದ ಪ್ರಕಾರಗಳು ವಿಭಿನ್ನವಾಗಿರಬಹುದು. ಆದರೆ ಅವೆಲ್ಲವೂ ಕಡೆದುಕೊಟ್ಟ ದರ್ಶನ ಮಾತ್ರ ಅಪ್ಪಟ ಮನುಷ್ಯತ್ವ ಮತ್ತು ಗಡಿಗಳ ಹಂಗು ಮೀರಿದ ಜೀವಪರ ಪ್ರೇಮ. ನಿಜವಾದ ಮನುಷ್ಯತ್ವ ಮತ್ತು ಜೀವಪರತೆಯ ಶೋಧದಲ್ಲಿ ಅವುಗಳಿಗೆ ವಿರುದ್ಧವಾದದ್ದೆಲ್ಲವನ್ನೂ ಮುಲಾಜಿಲ್ಲದೆ ಛಿದ್ರಗೊಳಿಸಿದ ಚಿಂತಕ.
ಲಂಕೇಶರು ಬರೆದ ಲೇಖನಿಯಿಂದ ಬರೀ ಇಂಕು ಮಾತ್ರವೇ ಹರಿಯಲಿಲ್ಲ, ಅವರು ಬರೆದ ಒಂದೊಂದು ಪದಕ್ಕೂ ಒಂದಿಡೀ ಪದ್ಯದ ಲಯವಿದೆ, ಗದ್ಯದ ನಿಶಿತಮತಿಯಿದೆ. ಬಹುಶಃ ತಾನು ಗೀಚಿಕೊಟ್ಟ ಚಿಕ್ಕದೊಂದು ಟಿಪ್ಪಣಿಗಾಗಲಿ, ನೀಲುವಿನಂತ ಒಂದೆಳೆಯ ಬರಹಕ್ಕಾಗಲಿ ಹೊಣೆಗಾರಿಕೆಯಿರಬೇಕೆಂಬ ದಿಟ್ಟತನದಿಂದ ಬರೆದ ಬರಹಗಾರ ಲಂಕೇಶ್. ತನ್ನ ಬರಹಗಳೆಲ್ಲವೂ ನಿಷ್ಠುರ ಮತ್ತು ಕಠೋರ ಸತ್ಯದ ಅಗ್ನಿದಿವ್ಯದಲ್ಲೇ ಅರಳಬೇಕೆಂದು ಹಠಕ್ಕೆ ಬಿದ್ದು ಬರೆದವರು ಲಂಕೇಶ್. ಏಕಕಾಲಕ್ಕೆ ಒಳಹೊರಗನ್ನೂ ಕುಲುಮೆಯಾಗಿಸಿಕೊಂಡು ಅದರ ಬೆಂಕಿಯ ಕಾವಿನಲ್ಲಿ ತನ್ನೆಲ್ಲ ಚಿಂತನೆಗಳನ್ನು ಹದಗೊಳಿಸಿ ಮೊನಚಾಗಿಸಿದರು. ಅವರ ಯಾವ ಬರಹದಲ್ಲೂ ತೋರಿಕೆಯ ನಯವಂಚಕತೆಯಿರಲಿಲ್ಲ ಎಂಬುದು ಅವರ ಬರೆಹಗಳ ಜತೆ ಪ್ರಯಾಣಿಸಿದ ಯಾರಿಗಾದರೂ ಅನ್ನಿಸದೇ ಇರಲಾರದು. ಅಷ್ಟರಮಟ್ಟಿಗೆ ಅವರ ಅಕ್ಷರಗಳಿಗೆ ಜೀವಂತಿಕೆ ಮತ್ತು ಮಾಂತ್ರಿಕತೆಗಳೂ ಇವೆ.
ಇದನ್ನು ಓದಿದ್ದೀರಾ?: ನೆನಪು | ಕರ್ನಾಟಕದ ಹೋರಾಟಗಳ ಮನಸ್ಸನ್ನು ಹದಗೊಳಿಸಿದ ಲಂಕೇಶ್
ಇಪ್ಪತ್ತನೆಯ ಶತಮಾನದ ಕೊನೆಯ ಅರ್ಧದಲ್ಲಿ ಕ್ರಿಯಾಶೀಲವಾಗಿದ್ದ ಲಂಕೇಶರು ತನಗೆ ಅನ್ನಿಸಿದಷ್ಟನ್ನು ಬರೆದು ದಫ್ತರವನ್ನು ಕಟ್ಟಿಟ್ಟು ಹೋದ ಲೇಖಕನೂ ಅಲ್ಲ ಅಥವಾ ಐವತ್ತು ವರ್ಷಗಳಲ್ಲಿ ಕೇವಲ ಬರದೇ ಜೀವಿಸಲಿಲ್ಲ. ಕೊನೆಯ ಮೂರು ದಶಕಗಳ ಕಾಲ ಕನ್ನಡ ಸಾಂಸ್ಕೃತಿಕ ಲೋಕದ ಅತಿದೊಡ್ಡ ವಿದ್ಯಮಾನವಾಗಿ ಪ್ರತಿಕ್ಷಣವೂ ಸಂಭವಿಸುತ್ತಲೇ ಇದ್ದರು. ಅಷ್ಟೇ ಎಂದಾದರೆ ಖಂಡಿತವಾಗಿ ತಪ್ಪಾಗುತ್ತದೆ. ಈ ನೆಲದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾರಂತವರನ್ನು ಎದೆಯಲ್ಲಿಟ್ಟುಕೊಂಡೇ ಪಶ್ಚಿಮದ ಸಾಕ್ರಟೀಸ್, ದಾಸ್ತೊವಸ್ಕಿ, ಟಾಲ್ ಸ್ಟಾಯ್, ಬೋದಿಲೇರರನ್ನೊಳಗೊಂಡ ಎರಡೂವರೆ ಸಾವಿರ ವರ್ಷಗಳ ಶ್ರೇಷ್ಠ ತತ್ವಜ್ಞಾನವನ್ನೆಲ್ಲ ಅಖಂಡವಾಗಿ ಧ್ಯಾನಿಸಿ, ಬಸಿದು, ಬರೆದ ಬರಹಗಾರ ಕನ್ನಡದಲ್ಲಿದ್ದರೆ ಅದು ಲಂಕೇಶರು ಮಾತ್ರ.
ಲಂಕೇಶರ ಮೆಚ್ಚಿನ ಬರಹಗಾರರಲ್ಲಿ ಇಂಗ್ಲಿಷ್ ಸಾಹಿತ್ಯದ ಚಿಂತಕ ಅಲ್ಬರ್ಟ್ ಕಮೂ ಕೂಡಾ ಒಬ್ಬ. ಕಮೂ ಒಂದೆಡೆ ‘The only way to deal with this unjust world is to rebel against it’ ಅಂದರೆ ‘ಅಸಮಾನತೆಯ ಜಗತ್ತಿನ ಜತೆ ವ್ಯವಹರಿಸುವುದೆಂದರೆ ಅದರ ವಿರುದ್ಧ ಬಂಡೇಳುವುದು ಆಗಿದೆ’ ಅನ್ನುತ್ತಾನೆ. ಲಂಕೇಶರು ಈ ಬಂಡೇಳುವುದನ್ನೇ ಬದುಕಿ ತೋರುತ್ತಾರೆ. ಇಲ್ಲಿಯ ಅತಿಕ್ರೂರವಾದ ಜಾತಿವ್ಯವಸ್ಥೆಯ ವಿರುದ್ಧ, ಧರ್ಮಗಳ ಮುಖವಾಡದ ಹಿಂದೆ ಅಡಗಿದ್ದ ಕೇಡಿ ಜಗದ್ಗುರುಗಳ ವಿರುದ್ಧ, ಭ್ರಷ್ಟರಾಜಕಾರಣಿಗಳ ವಿರುದ್ಧ, ಬೌದ್ಧಿಕ ಜಗತ್ತನ್ನು ಆವರಿಸಿಕೊಂಡ ಸೋಗಲಾಡಿಗಳ ವಿರುದ್ಧ ಹೀಗೆ ಹತ್ತಾರು ಸಾಮಾಜಿಕ ರಾಜಕೀಯ ವಿಕಾರಗಳ ವಿರುದ್ಧ ತನ್ನ ಬರಹಗಳಲ್ಲಿ ಬಂಡೇಳುತ್ತಲೇ ಇದ್ದರು. ಆದರೆ ಹಾಗೆ ಬಂಡೇಳುವವನು ನಿಷ್ಠುರತೆ ಮತ್ತು ಕಠೋರ ಪ್ರಾಮಾಣಿಕತೆಯ ತಳಹದಿಯ ಮೇಲೆ ನಿಂತಿದ್ದಾಗ ಮಾತ್ರ ಅದು ಸಾಧ್ಯವೆಂಬುದಕ್ಕೆ ತಾನೇ ಸಾಕ್ಷಿಯಾಗಿದ್ದರು. ಘೋಷಿತ ಸರ್ವಾಧಿಕಾರಗಳ ಕ್ರೌರ್ಯದ ಎದುರಿಗೆ ವರ್ತಮಾನದ ಪ್ರಜಾಪ್ರಭುತ್ವದೊಳಗೂ ನುಸುಳಿದ್ದ ಅಘೋಷಿತ ಕೇಡಿಗರನ್ನು ಮುಖಾಮುಖಿಯಾಗಿ ನಿಲ್ಲಿಸಿ ಜಾಡಿಸಿದರು.
ತನ್ನ ಲೇಖನಿಯ ಪಾತಾಳ ಗರಡಿಯನ್ನು ಬಿಟ್ಟು ಜಾಲಾಡಿಸಿ ಇಲ್ಲಿಯ ಭೂಮಾಲೀಕರು ಮತ್ತು ಪುರೋಹಿತಶಾಹಿಗಳ ಮನಸಿನಾಳದಲ್ಲಿ ಹೆಪ್ಪುಗಟ್ಟಿದ ನೀಚತನವನ್ನು ಬಗೆದು ತೋರಿದರು.
‘ಸಂಕ್ರಾಂತಿ’ಯಲ್ಲಿ ಬಸವಣ್ಣನ ಮೂಲಕ ‘ಹುಲಿಗಳ ಜಗತ್ತಿನಲ್ಲಿ ಬಡಹುಲಿ, ಶ್ರೀಮಂತ ಹುಲಿ, ಪುರೋಹಿತಹುಲಿ, ಹೊಲೆಯ ಹುಲಿ ಇರುವುದಿಲ್ಲ. ಇದೆಲ್ಲ ಮನುಷ್ಯರಲ್ಲಿ ಮಾತ್ರ. ಸಮುದ್ರಕ್ಕೆ ಕೂಡಾ ಮೇಲುಕೀಳಿನ ಪರಿವೆ ಇಲ್ಲ. ಸೂರ್ಯ ಅರಮನೆ, ದೇವಸ್ಥಾನಗಳ ಮೇಲೆ ಬೆಳಗುವುದಿಲ್ಲ. ಆದರೆ ಅದು ಮನುಷ್ಯನ ಕೈಯ್ಯಲ್ಲಿದ್ದಿದ್ದರೆ ಅದನ್ನೂ ಮಾಡಿಸುತ್ತಿದ್ದ’ ಎಂದು ಬಿಜ್ಜಳನಿಗೆ ಹೇಳಿಸಿದ ಲಂಕೇಶರು ಮನುಷ್ಯನೊಳಗಿನ ಜಾತಿವಂತರ evil (ಕೇಡು)ನ ಅನಾವರಣ ಮಾಡಿಸುತ್ತಾರೆ. ಅದೇ ಹೊತ್ತಿಗೆ ಉಷಾಳಿಂದ ಬಸವಣ್ಣನಿಗೆ ‘ನನಗೆ ಹೊಲೆಯ ರುದ್ರ ಬೇಕೇ ಹೊರತು ನಿಮ್ಮ ಶರಣ ರುದ್ರ ಬೇಡ’ ಎಂದು ಹೇಳಿಸುವ ಮೂಲಕ ಧರ್ಮದ ನಿರರ್ಥಕತೆಯನ್ನು ಎತ್ತಿತೋರಿಸಿ ಬಿಡುತ್ತಾರೆ.
ತನ್ನೆದುರುಗಿನ ಸಾಮಾಜಿಕ ರಾಜಕೀಯ ಬದುಕನ್ನು ಸ್ವಚ್ಛಗೊಳಿಸುವುದರಲ್ಲಷ್ಟೇ ಲಂಕೇಶರು ಕಳೆದು ಹೋಗಲಿಲ್ಲ. ನೊಂದವರ, ಶೋಷಿತರ ಬಗೆಗೆ ಅಪಾರವಾದ ಜೀವಕಾರುಣ್ಯದ ಸೆಲೆಯನ್ನು ತಮ್ಮ ಜೀವಿತಾವಧಿಯುದ್ಧಕ್ಕೂ ಜತನವಾಗಿ ಕಾಪಿಟ್ಟುಕೊಂಡಿದ್ದರು. ಇಲ್ಲಿಯ ಅಸಹಾಯಕರ ಬಗೆಗೆ, ತಬ್ಬಲಿ ಸಮುದಾಯಗಳ ಕುರಿತು ಸಂವಾದಿಸುವಾಗಲೆಲ್ಲ ಬುದ್ಧನ ಕರುಣೆ ಮತ್ತು ಅಂಬೇಡ್ಕರರ ಪ್ರಜ್ಞೆಗಳ ಪ್ರಮಾಣಗಳನ್ನಾಗಿಸಿಕೊಂಡೇ ಮಾತು ಮತ್ತು ಕೃತಿಗಳಿಗೆ ಇಳಿಯುತ್ತಿದ್ದರು. ಆದ್ದರಿಂದಲೇ ಮುಳ್ಳಿನ ತೋಟದಲ್ಲಿ ನಿಂತ ಅವರೊಳಗೊಬ್ಬ ಹೂವಿನ ಕನಸುಗಾರ ಇದ್ದ.

ಲಂಕೇಶರು ಪರಿಪೂರ್ಣತೆಯನ್ನು ಹಂಬಲಿಸಲಿಲ್ಲ. ಯಾಕೆಂದರೆ ಅದು ಎಂದಿಗೂ ಸಾಧ್ಯವಾಗದು ಎಂಬ ಎಚ್ಚರವಂತೂ ಅವರಲ್ಲಿ ಎಚ್ಚರವಾಗೇ ಇತ್ತು. ಹಾಗಾಗಿಯೆ ಅವರಲ್ಲಿ ಅದಮ್ಯ ಜ್ಞಾನ ಜಿಜ್ಞಾಸೆಯ ಜತೆಜತೆಗೆ ಒಂದರೆಗಳಿಗೆ ಜೂಜಾಡಿಬಿಡಬೇಕೆನ್ನುವ ವಿಕ್ಷಿಪ್ತತೆಯಿತ್ತು. ತತ್ವಶಾಸ್ತ್ರದ ತೀವ್ರಹಂಬಲದ ಜತೆಜತೆಗೆ ಗೆಳೆಯರ ಜತೆಗೆ ಒಂದು ಪೆಗ್ ವ್ಹಿಸ್ಕಿ ಕುಡಿಯಬೇಕೆನ್ನುವ ತುಡಿತವಿತ್ತು. ಆಷಾಢಭೂತಿಗಳ ಕಂಡಾಗಲೆಲ್ಲ ವ್ಯಗ್ರಗೊಳ್ಳುತ್ತಿದ್ದ ಲಂಕೇಶರು ‘ನೀಲು’ವಿನ ಕಣ್ಣಂಚಿನ ಮಿಂಚಿಗೆ ಒಳಗೊಳಗೆ ರೋಮಾಂಚಿತರಾಗುತ್ತಿದ್ದರು. ಅದಕ್ಕಾಗಿಯೆ ‘ಸುಖಕ್ಕಾಗಿ ಕಾತರಿಸುವ, ಕೋಟ್ಯಂತರ ಜನಕ್ಕೆ ಹಣ, ನೆಲ, ಹೊನ್ನು ಬೇಕು. ಕೆಲವರಿಗೆ ಪ್ರೀತಿ. ಎಲ್ಲೊ ಕೆಲವರಿಗೆ ಕುಗ್ರಾಮದ ಹಿತ್ತಿಲೊಂದರ ಹೂವು, ಬಡಜೋಗಿಯ ಹಾಡು’ ಎಂದು ನೀಲು ಮಿಂಚಲ್ಲಿ ಇಡೀ ಮನುಷ್ಯಕುಲದ ಹುಡುಕಾಟದ ಅರ್ಥವಿದೆ.
‘ಪ್ರತ್ರಿಕೆ’ಯ ಮೂಲಕ ಬರಹದ ರಂಜನೆ ಮತ್ತ ಓದಿನ ಪ್ರಚೋದನೆಗಳನ್ನು ಒಟ್ಟೊಟ್ಟಿಗೆ ಒಂದು ಪ್ರಕ್ರಿಯಾ ಮೀಮಾಂಸೆಯಾಗಿ ಕಟ್ಟಿಕೊಟ್ಟವರು ಲಂಕೇಶರು. ಲಂಕೇಶರನ್ನು ಓದಿದ ಬಹುಪಾಲ ಜನ ಬರಹಗಾರರೂ ಆದರು. ಲಂಕೇಶರಲ್ಲಿ ಬರಹ ಮತ್ತು ಓದು ಎರಡೂ ಒಟ್ಟೊಟ್ಟಿಗೆ ಸಾಗುತ್ತವೆ. ಬರಹಗಾರ ಮತ್ತು ಓದುಗ ಮಾತಿಗಿಳಿಯುತ್ತಾರೆ. ಆ ಮೂಲಕ ಮಾತಿಗೆ ಅರ್ಥಕಟ್ಟುತ್ತಾರೆ. ಇಂಡಿಯಾದ ಪತ್ರಿಕಾ ಚರಿತ್ರೆಯಲ್ಲಿ ಪತ್ರಿಕೆಯೊಂದನ್ನು ಹಲವು ಚಳವಳಿಗಳ ಬೆಂಬಲಕ್ಕೆ ನಿಲ್ಲಿಸಿದ್ದಷ್ಟೇ ಅಲ್ಲದೇ, ಆ ಪತ್ರಿಕೆಯನ್ನೂ ಒಂದು ಚಳವಳಿಯಾಗಿ ರೂಪಾಂತರಗೊಳಿಸಿದ ವಿಸ್ಮಯಕರ ಸೃಷ್ಟಿಕರ್ತರಲ್ಲಿ ಬಾಬಾಸಾಹೇಬ್ ಅಂಬೇಡ್ಕರರ ನಂತರ ಇದ್ದ ಮತ್ತೊಬ್ಬರೆಂದರೆ ಲಂಕೇಶರು ಮಾತ್ರ.

ಬಿ.ಎಲ್. ರಾಜು
ಲೇಖಕ, ಪ್ರಾಧ್ಯಾಪಕ