ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ರೈತನಿಂದ ಹಣ ವಸೂಲಿ ಮಾಡಲು ತೊಡಗಿದ್ದ ಆರೋಪದ ಮೇಲೆ ರಾಯಚೂರು ಗ್ರಾಮೀಣ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿಸಿದ ಆರೋಪಿಗಳನ್ನು ಫಯಾಜ್, ಶೇಖ್ ಎಂ ಡಿ ಆಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಶೀದ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಓರ್ವ ಬಜಾಜ್ ಫೈನಾನ್ಸ್ ರಿಕವರಿ ಸಿಬ್ಬಂದಿಯಾಗಿರುವ ಶೇಕ್ ಎಂ ಡಿ ಅಯುಬ್ ಮೂರು ಜನರೊಂದಿಗೆ ಸೇರಿ ಮೊಬೈಲ್ ಆ್ಯಪ್‌ನಲ್ಲಿ ಫೈನಾನ್ಸ್‌ಗಳ ಸಾಲ ಬಾಕಿ ಇರುವವರನ್ನು ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನು ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುಂಡ್ಲೂರು ಗ್ರಾಮದ ಫಯಾಜ್ ಜನವರಿ 17ರಂದು ರಾಯಚೂರಿನ ಮಾರುಕಟ್ಟೆಯಲ್ಲಿ ಹತ್ತಿ ಮಾರಾಟ ಮಾಡಿ ಊರಿಗೆ ಹೋಗುವಾಗ ಯರಮರಸ್ ಸಮೀಪ ಮಹೇಂದ್ರ ಪಿಕಪ್ ಗಾಡಿಯನ್ನು ಅಡ್ಡಗಟ್ಟಿದ ಆರೋಪಿಗಳು, ʼನಿಮ್ಮ ಫೈನಾನ್ಸ್ ಹಣ ಬಾಕಿ ಇದೆ ಕಟ್ಟಿ ಗಾಡಿ ವಾಪಸ್ ತಗೊಂಡು ಹೋಗಿʼ ಎಂದು ಮಹೇಂದ್ರ ಪಿಕಪ್ ತೆಗೆದುಕೊಂಡು ಹೋಗಿದ್ದಾರೆ.

ಫಯಾಜ್ ಅವರು ತಮ್ಮ ಊರಿಗೆ ಹೋಗಿ ಶಹಪುರದಲ್ಲಿನ ಕನಕದುರ್ಗ ಫೈನಾನ್ಸ್ ಕಂಪನಿಗೆ ಜನವರಿ 21ರಂದು ತಮ್ಮ ಲೋನ್ ಬಾಕಿ ಹಣ ₹56,750 ಕಟ್ಟಿ ಮರಳಿ ರಾಯಚೂರಿಗೆ ಬಂದಿದ್ದಾರೆ. ರಾಯಚೂರಿನ ಚಂದ್ರಬಂಡಾ ರಸ್ತೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ನಿಂತ ಆರೋಪಿಗಳು ಮಹೇಂದ್ರ ಪಿಕಪ್ ನೀಡದೆ ಫಯಾಜ್ ಅವರಿಗೆ ಜೀವಬೆದರಿಕೆ ಹಾಕಿ ₹12,000 ಕೇಳಿ ಬೆದರಿಕೆ ಹಾಕಿದ್ದಾರೆ. ಜನವರಿ 22ರಂದು ಫಯಾಜ್ ಅವರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ಪ್ರಕಾಶ ಡಂಬಲ ನೇತೃತ್ವದ ತಂಡ ತನಿಖೆ ನಡೆಸಿ ಜನವರಿ 23ರಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಒಂದೆಡೆಯಾದರೆ, ಇನ್ನೊಂದು ಕಡೆ ನಕಲಿ ಸಾಲ ರಿಕವರಿ ತಂಡ ವಸೂಲಿ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಫೈನಾನ್ಸ್ ಸಾಲ ರಿಕವರಿ ತಂಡದ ಹೆಸರಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನು ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

