ಸಮಾಜದಲ್ಲಿ ಲಿಂಗ ತಾರತಮ್ಯ ನಿರ್ಮೂಲನೆ ಮಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಜತೆಗೆ ಸರ್ಕಾರಿ ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಅಭಿವೃದ್ದಿಯಾಗಬೇಕು ಎಂದು ಕುಟುಂಬ ಕಲ್ಯಾಣ ಅಧಿಕಾರಿ ಡಾ ಪೂರ್ಣಿಮಾ ಕಟ್ಟಿಮನಿ ತಿಳಿಸಿದರು.
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ರಾಷ್ಟೀಯ ಹೆಣ್ಣುಮಕ್ಕಳ ದಿನಾಚರಣೆಯ ಮಾಡಲಾಯಿತು.
ಹೃದಯ ತಜ್ಞ ಡಾ ನಾಗರಾಜ್ ಮಾತನಾಡಿ, “ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಪ್ರತಿಯೊಂದು ನದಿಗಳು ಹಾಗೂ ಭೂಮಿಯನ್ನೂ ಕೂಡಾ ಭೂದೇವಿ ಎನ್ನಲಾಗುತ್ತದೆ. ಆದ್ದರಿಂದ ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡಿ ಗೌರವದಿಂದ ನಡೆದುಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಖಾಸಿಮ್ ವಲಿ ಹಳೇಕೋಟೆ ಮಾತನಾಡಿ, “ಸಂವಹನ, ಲಿಂಗ ತಾರತಮ್ಯ, ಜೀವನ ಶೈಲಿ, ಅರೋಗ್ಯ, ಬೆಳವಣಿಗೆ ಸಂಬಂಧಗಳು, ಶಿಕ್ಷಣ ಹಾಗೂ ಇತರೆ ಯುವಕ ಯುವತಿಯರಿಗೆ ಸಂಬಂದಿಸಿದ ದೈಹಿಕ, ಮಾನಸಿಕ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡಲಾಗುವುದು. ಯುವ ಕಣಜ ಪೋರ್ಟಲ್‌ನಲ್ಲಿ ದೊರೆಯುವ ಸರ್ಕಾರಿ ಸೇವಗಳ ಬಗ್ಗೆ ತಿಳಿಸುವುದರ ಜತೆಗೆ ರಾಷ್ಟೀಯ ಹೆಣ್ಣುಮಗುವಿನ ದಿನಾಚರಣೆಯನ್ನು ಕುಟುಂಬ ಕಲ್ಯಾಣ ಸಚಿವಾಲಯ 2008ರ ಜನವರಿ 24ರಂದು ಜಾರಿಗೆ ತಂದಿದೆ” ಎಂದು ತಿಳಿಸಿದರು.
“2008ರಿಂದ ಈವರೆಗೆ ಪ್ರತಿವರ್ಷ ಜನವರಿ 24ರಂದು ಈ ಕಾರ್ಯಕ್ರಮವನ್ನು ಸರ್ಕಾರಗಳು ಮಾಡುತ್ತ ಬಂದಿವೆ. ಯಾಕೆ ಈ ಜನವರಿ 24ರಂದೇ ರಾಷ್ಟೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಾರೆಂದರೆ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1966ನೇ ಜನವರಿ 24ರಂದು ಪ್ರಮಾಣ ವಚನ ಸ್ವೀಕರಿಸಿ ದೇಶದ ಪ್ರಪ್ರಥಮ ಮಹಿಳಾ ಪ್ರಧಾನ ಮತ್ರಿಯಾಗಿ ಸ್ವೀಕರಿಸಿದ ಸವಿ ನೆನಪಿಗಾಗಿ ಈ ರಾಷ್ಟೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ಆಚರಣೆಗೆ ತರಲಾಯಿತು. ಕಾರ್ಯಕ್ರಮದ ಉದ್ದೇಶ, ಹೆಣ್ಣು ಮಕ್ಕಳು ಎದುರಿಸುತ್ತಿರುವ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಲಿಂಗ ತಾರತಮ್ಯ, ವರದಕ್ಷಿಣೆ ಪಿಡುಗು, ಹೀಗೆ ಅಸಮಾನತೆ ಹೋಗಲಾಡಿಸುವುದರ ಜೊತೆಗೆ, ವಿವಿಧ ಸರ್ಕಾರಿ ಯೋಜನೆಗಳಿಂದ ಮಗುವಿನ ಅಭಿವೃದ್ಧಿ ಮತ್ತು ಸಬಲೀಕರಣ ಜಾಗೃತಿ ಮೂಡಿಸುವುದು” ಎಂದು ತಿಳಿಸಿದರು,
ತಾಲೂಕು ಆರೋಗ್ಯ ಶಿಕ್ಷಣಧಿಕಾರಿ ಎಂ ಡಿ ಖಾಸಿಮ್ ಮಾತನಾಡಿ, “ಹೆಣ್ಣುಮಕ್ಕಳು ದೇವರಿಗೆ ಸಮಾನರು ಹಾಗೂ ಒಂದು ಹೆಣ್ಣುಮಗು ಹತ್ತು ಮಂದಿ ಗಂಡುಮಕ್ಕಳಿಗೆ ಸಮಾನ, ಮನೆಯಲ್ಲಿ ಹೆಣ್ಣುಮಗು ಇದ್ದರೇನೇ ಹಬ್ಬ, ಹರಿದಿನಗಳಿಗೆ ಒಂದು ಮೆರೆಗು ಬರುತ್ತದೆ” ಎಂದು ಹೆಣ್ಣುಮಕ್ಕಳ ಮಹತ್ವದ ಬಗ್ಗೆ ತಿಳಿಸಿದರು. ಜತೆಗೆ ಜನವರಿ 24ರಂದು ಜನಿಸಿದ ಹೆಣ್ಣುಮಗುವಿನ ತಾಯಂದಿರಿಗೆ ಬೇಬಿ ಕಿಟ್ ವಿತರಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ನಂಜನಗೂಡು | ಬಸ್-ಟಿಪ್ಪರ್ ನಡುವೆ ಓವರ್ಟೇಕ್, ಮಹಿಳೆಯೊಬ್ಬರ ಕುತ್ತಿಗೆ ಕತ್ತರಿಸಿ ದಾರುಣ ಸಾವು
ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮಾತನಾಡಿ, “ಹೆಣ್ಣುಮಕ್ಕಳೆಂದರೆ ಇತ್ತೀಚಿಗೆ ಪ್ರತಿ ತಂದೆಗೆ ಬಹಳ ಪ್ರೀತಿ. ಏಕೆಂದರೆ ಸ್ವತಃ ನನ್ನ ಮಗಳೆಂದರೆ ನನಗೆ ಅಷ್ಟೇ ಪ್ರೀತಿ, ಹೆಣ್ಣು ಮಕ್ಕಳು ಪಡೆದವರೇ ಧನ್ಯರು. ಹೆಣ್ಣು ಹುಟ್ಟಿದ ಮನೆ, ದೇವರೇ ವಾಸವಿದ್ದಂತೆ. ಆದ್ದರಿಂದ ಹೆಣ್ಣನ್ನು ಗೌರವದಿಂದ ಕಾಣಬೇಕು. ಅವರಿಗೂ ಉತ್ತಮ ಹಾಗೂ ಸಮಾನತೆಯ ಜೀವನ ಕಲ್ಪಿಸಬೇಕು” ಎಂದು ತಿಳಿಸಿದರು.
ಡಾ. ದಮ್ಮೂರು ಬಸವರಾಜ, ಡಾ. ವಿವೇಕಾನಂದ, ಡಾ. ವಿವೇಕಾನಂದ, ಡಾ. ಪ್ರಶಾಂತ್, ಡಾ. ನಾಗರಾಜ ಸರ್ಜನ್, ಡಾ. ಆನಂದ್ ದಿವಾಟಿಗಾರ, ಡಾ. ಸತೀಶ್, ಇಎನ್‌ಟಿ ಡಾ. ತಿ ಪಲ್ಲೆದ್, ಖಾಸಿಮ್ ಹಳೇಕೋಟೆ, ಈಶ್ವರ್ ದಾಸಪ್ಪನವರ, ಎಂ ಡಿ ಖಾಸಿಮ್, ಮಲ್ಲೇಶಪ್ಪ, ಲೋಕೇಶ್, ಲಕ್ಷ್ಮಣ, ಆಸ್ಪತ್ರೆ ಶುಶ್ರುಕಿಯರು ಸಿಬ್ಬಂದಿಗಳು, ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.