ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು, ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೋಗಲಾಡಿಸುವುದು, ದೇವದಾಸಿಯರ ಮರುಸಮೀಕ್ಷೆ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೂಲಿಕಾರ್ಮಿಕರ ಸಂಘಟನೆ, ಪ್ರಗತಿಪರ ಸಂಘಟನೆಗಳಿಂದ ರಾಯಚೂರು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಸಾವಿರಾರು ಸಂಖ್ಯೆಯ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
“ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಶಿಕ್ಷಕರ ನೇಮಕ ಮಾಡಲು ನಿರಂತರವಾಗಿ ಹೋರಾಟ ಮಾಡಿದ್ದರಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಲ್ಲ ವಿಷಯವಾರು ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ದೂರಿದರು.

“ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಕಡೆ ಶೇ.75ರಷ್ಟು ಅತಿಥಿ ಶಿಕ್ಷಕರಿದ್ದು, ಉಳಿದಂತೆ ಶೇ.25ರಷ್ಟು ಮಾತ್ರ ಕಾಯಂ ಶಿಕ್ಷಕರಿದ್ದಾರೆ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ದೊರೆಯಲು ಎಲ್ಲಿಂದ ಸಾಧ್ಯ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದು, ಸೌಲಭ್ಯ ಒದಗಿಸಿಕೊಡುವಲ್ಲಿ ಸರ್ಕಾರ ಎಡವಿದೆ” ಎಂದರು.
“ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಹೆಚ್ಚಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಅನುದಾನ ನೀಡುತ್ತಿದ್ದರೂ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಸಾಕ್ಷರತೆ ಮಾದರಿ ಅಭಿಯಾನವನ್ನು ನಡೆಸಲು ಸರ್ಕಾರ ಮುಂದಾಗಬೇಕಿದೆ” ಎಂದರು.

ವಿದ್ಯಾ ಪಾಟೀಲ್ ಮಾತನಾಡಿ, “ಹಿಂದೆ ಇದ್ದ ಬಿಜೆಪಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾಯಿತು. ಈ ಸರ್ಕಾರವೂ ಕೂಡ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಆಲಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ವರ್ಷ ಜನವರಿ 25ರಂದು ಕಲಬುರಗಿಯಲ್ಲಿ ಬೇಡಿಕೆಗಳ ಈಡೇರಿಕೆಗೆ ಬೃಹತ್ ಹೋರಾಟ ಹಮ್ಮಿಕೊಂಡಾಗ ಸಚಿವರು ಧರಣಿ ಸ್ಥಳಕ್ಕೆ ಬಂದು ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ನಮ್ಮ ಸರ್ಕಾರ ಆಲಿಸುವ ಸರ್ಕಾರವೆಂದು ಆಶ್ವಾಸನೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ” ಎಂದು ಗುಡುಗಿದರು.

“ರಾಜ್ಯದಲ್ಲಿ ಗರ್ಭಿಣಿ ಮಹಿಳೆಯರು ಮತ್ತು ಶಿಶುಗಳು ಸಾವನ್ನಪ್ಪುತ್ತಿರುವುದು ಖಂಡನೀಯ. ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಪಾರದರ್ಶಕ ಗುಣಮಟ್ಟದ ಔಷಧಿಗಳನ್ನು ಖರೀದಿಸುವ ನೀತಿ ಜಾರಿಗೊಳಿಸಬೇಕು. ಸರ್ಕಾರದ ವಿರುದ್ಧ ಹೋರಾಟ ನಡೆಸಿದರೂ ಕೇವಲ ಭರವಸೆ ನೀಡಿ ನುಣಚಿಕೊಂಡಿದೆ” ಎಂದರು.
ಹೋರಾಟಗಾರ್ತಿ ಮೌಕ್ಷಮ್ಮ ಮಾತನಾಡಿ, “ಸರ್ಕಾರ ತಮ್ಮ ಕಚ್ಚಾಟದಲ್ಲಿ ಕುರ್ಚಿಗಾಗಿ ನಾ ಮುಂದು ನೀ ಮುಂದು ಎನ್ನುತ್ತಿರುವಾಗ ಜನರ ಸಮಸ್ಯೆಗಳು ಇವರ ಕಣ್ಣಿಗೆ ಹೇಗೆ ಕಾಣಿಸುತ್ತವೆ. ದೇವದಾಸಿ ಮಹಿಳೆಯರಿಗೆ ಪಿಂಚಣಿ ಸೌಲಭ್ಯವಿಲ್ಲದೆ. ಅವರ ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುದಾನ ಮೀಸಲಿಟ್ಟಿದೆ. ಆದರೆ ಬಳಕೆಯಾಗುತ್ತಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ತೋಟಗಾರಿಕೆ ಬೆಳೆ ಜತೆಗೆ ಉಪಕಸಬು ಮಾಡಿ ಆದಾಯ ವೃದ್ಧಿಸಿಕೊಳ್ಳಬೇಕು: ಡಾ. ರವೀಂದ್ರ ಬೆಳ್ಳಿ
“ದೇವದಾಸಿ ಮಹಿಳೆಯರ ಕುರಿತು ಮರುಸರ್ವೇ ನಡೆಸಿ ಬಿಟ್ಟುಹೋದ ದೇವದಾಸಿಯರ ಹೆಸರು ಸೇರ್ಪಡೆ ಮಾಡಬೇಕು. ಪಿಂಚಣಿ, ಸೇರಿದಂತೆ ಸೌಲಭ್ಯ ಒದಗಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಘಟಕಗಳನ್ನು ನಿರ್ಮಾಣ ಮಾಡಿದೆ. ಆದರೆ ರಿಪೇರಿಯಿಂದಾಗಿ ಇಂದು ಬಂದ್ ಆಗಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹೋರಾಟ ನಡೆಸಿ ಸರ್ಕಾರದ ಗಮನಕ್ಕೆ ತಂದರೂ ದುರಸ್ತಿ ಮಾಡಿಸುವಲ್ಲಿ ನಿರ್ಲಕ್ಷ್ಯ ತಾಳಿದೆ” ಎಂದು ಆಪಾದಿಸಿದರು.
ಈ ವೇಳೆ ಮಾರೆಮ್ಮ, ಗುರುರಾಜ, ಬಸವರಾಜ್, ಅಕ್ಕಮ್ಮ, ಮಲ್ಲೇಶ, ಹುಚ್ಚಪ್ಪ, ಅಮರೇಶ, ಮಲ್ಲಮ್ಮ, ಗೌರಿ ಗೋನಾಳ, ವಿರುಪಮಾ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇತರೆ ರಾಜ್ಯದ ಕೂಲಿ ಕಾರ್ಮಿಕರೂ ಕೂಡ ಭಾಗವಹಿಸಿದ್ದರು.