- ಬೆಂಗಳೂರು ನಗರ ಸಂಚಾರ ದಟ್ಟಣೆ ಪರಿಹಾರಕ್ಕೆ ಉಪನಗರ ರೈಲು ಪರಿಹಾರವಾಗಲಿದೆ
- ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೈಗಾರಿಕಾ ಸಚಿವರು
ಬೆಂಗಳೂರಿನ ಸುತ್ತಲಿನ ನಗರದ ಜೊತೆಗೆ ಹೊರಗಿರುವ ನಗರಗಳಿಗೂ ಉಪನಗರ ರೈಲು ಯೋಜನೆ ವಿಸ್ತರಿದಾಗ ಮಾತ್ರ ರಾಜಧಾನಿಯ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಬೆಂಗಳೂರಿನ ಖನಿಜಭವನದಲ್ಲಿ ಮೂಲಸೌಕರ್ಯ ಇಲಾಖೆಯ ಅಧಿಕಾರಿಗಳ ಜತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ನಿರ್ದೇಶನ ನೀಡಿದ್ದಾರೆ.
ಕೇವಲ ಬೆಂಗಳೂರು ನೆರೆಹೊರೆಯ ಪ್ರದೇಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವ ಉಪನಗರ ರೈಲು ಯೋಜನೆಯನ್ನು ಸುತ್ತಲಿನ ದೂರದ ನಗರಗಳಿಗೂ ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಯೋಜನೆಯನ್ನು ಪರಿಷ್ಕರಿಸಿ, ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಉಪನಗರ ರೈಲು ಯೋಜನೆಯ ಮೊದಲನೇ ಹಂತದದಲ್ಲಿ ಈಗ 148 ಕಿ.ಮೀ. ಉದ್ದದ ಕಾಮಗಾರಿಯಾಗಿ ನಡೆಯುತ್ತಿದ್ದು, ಉದ್ದೇಶಿತ ಯೋಜನೆಗೆ ಒಟ್ಟಾರೆ 15,767 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಆದರೆ ಇದರ ಹಾಲಿ ಸ್ವರೂಪದಿಂದ ಹೆಚ್ಚಿನ ಪ್ರಯೋಜನವಿಲ್ಲ.
ಇದರ ಜೊತೆಗೆ ಯೋಜನೆಯನ್ನು ರಾಮನಗರದಿಂದ ಮೈಸೂರು, ದೊಡ್ಡಬಳ್ಳಾಪುರದಿಂದ ಗೌರಿಬಿದನೂರು-ಹಿಂದೂಪುರ, ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ವಿಸ್ತರಿಸಬೇಕು. ಹೀಗಾದಾಗ ಮಾತ್ರ ಯೋಜನೆ ಲಾಭ ದೊರಕಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ನೈತಿಕ ಪೊಲೀಸ್‌ಗಿರಿ ಕಡಿವಾಣಕ್ಕೆ ʼಆ್ಯಂಟಿ ಕಮ್ಯುನಲ್ ವಿಂಗ್ʼ ಸ್ಥಾಪನೆಗೆ ಮುಂದಾದ ಸರ್ಕಾರ
ಸಬರ್ಬನ್ ರೈಲು ಯೋಜನೆಯನ್ನು ರಾಮನಗರ, ಚಿಕ್ಕಬಾಣಾವರ, ದೊಡ್ಡಬಳ್ಳಾಪುರ, ವೈಟ್ ಫೀಲ್ಡ್ ವರೆಗೆ ಮುಟ್ಟಿಸುವ ಗುರಿ ಇದೆ. ಯೋಜನೆ ಮುಗಿಯುವ ಹೊತ್ತಿಗೆ ಈ ಭಾಗಗಳೆಲ್ಲವೂ ಬೆಂಗಳೂರಿನ ಪ್ರಮುಖ ಭಾಗವಾಗಿವೆ. ಹೀಗಾಗಿ ರಾಜಧಾನಿಯ ಸುತ್ತಲಿನ ನೂರು ಕಿ.ಮೀ. ಸುತ್ತಳತೆಯಲ್ಲಿ ಇರುವ ನಗರಗಳಿಗೆ ಸಬರ್ಬನ್ ರೈಲು ಸೌಕರ್ಯ ಒದಗಿಸಬೇಕು.
ಇದು ಜಾರಿಯಾದಲ್ಲಿ ಬೆಂಗಳೂರಿನ ಉದ್ದಿಮೆಗಳಿಗೆ ಬೇಕಾದ ಜನರು ಈ ಊರುಗಳಿಂದ ಸುಗಮವಾಗಿ ದಿನವೂ ಓಡಾಡುವಂತೆ ಆಗಬೇಕು. ಇದು ಸಂಚಾರ ದಟ್ಟಣೆಯ ಜತೆಗೆ ವಲಸೆಯ ಸಮಸ್ಯೆಗೂ ಕಡಿವಾಣ ಹಾಕುತ್ತದೆ ಎಂದು ಮಾಹಿತಿ ಒದಗಿಸಿದರು.
ಪ್ರತೀ ಹತ್ತು ನಿಮಿಷಕ್ಕೆ ಒಂದರಂತೆ ಸಬರ್ಬನ್ ರೈಲು ಸೇವೆ ಒದಗಿಸುವುದು ನಮ್ಮ ಗುರಿಯಾಗಿದೆ. ಸುಗಮ ಸಂಚಾರ ವ್ಯವಸ್ಥೆಯ ಜಾಲವನ್ನು ಬೆಳೆಸುವುದು ಮೂಲಸೌಲಭ್ಯ ಅಭಿವೃದ್ಧಿಯ ಪ್ರಮುಖ ಗುರಿಗಳಲ್ಲೊಂದು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.