“ಪ್ರಸ್ತುತ ಸನ್ನಿವೇಶದಲ್ಲಿ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಂಬಿಕೆ ಕುಸಿತವಾಗಿದೆ. ಜಸ್ಟಿಸ್ ಓಕಾ ಅವರು ಈ ಹಿಂದೆ, ‘ನ್ಯಾಯಾಂಗದ ಮೇಲೆ ಗಾಢವಾದ ನಂಬಿಕೆ ನಾಗರಿಕರಲ್ಲಿತ್ತು. ಆದರೆ, ಈಗ ನಂಬಿಕೆ ಕಾಣಯಾಗುತ್ತಿದೆ’ ಎಂದಿದ್ದರು. ಈ ಪರಿಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸಲು ಹೃದಯವಂತಿಕೆ ಇರುವ ನೌಕರಶಾಹಿಗಳ ಅಗತ್ಯವಿದೆ” ಎಂದು ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಹೇಳಿದರು.
ಬೆಂಗಳೂರಿನಲ್ಲಿ ಭಾರತ ಉಳಿಸಿ ಸಮಿತಿ ಆಯೋಜಿಸಿದ್ದ ‘ಗಣರಾಜ್ಯ ಭಾರತ @75 – ಪ್ರಸಕ್ತ ಸವಾಲುಗಳು’ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಜನರಿಗೆ ಯಾವುದು ಮುಖ್ಯ, ಯಾವುದು ಮುಖ್ಯವಲ್ಲ ಎಂಬ ತಿಳುವಳಿಕೆ ಇಲ್ಲವಾಗಿದೆ. ರೈತರು, ಕಾರ್ಮಿಕರು ಇಂತಹ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಜನರ ಪಾಲ್ಗೋಳ್ಳುವಿಕೆ ಕಡಿಮೆಯಾಗಿದೆ. ಅಲ್ಲದೆ, ಅಭಿಪ್ರಾಯಗಳನ್ನು ರೂಪಿಸುವ ಸಾಮೂಹಿಕ ಚಳುವಳಿಗಳು ಸ್ಥಗಿತವಾಗಿವೆ. ನವ ಆರ್ಥಿಕತೆ ನೀತಿ ಸಂಪೂರ್ಣವಾಗಿ ವಿನಾಶಕಾರಿ ನೀತಿಗಳಾಗಿವೆ. ಅನೈತಿಕ ಕಾರ್ಯಗಳ ಸಾಮಾನ್ಯೀಕರಣ, ಮತಗಳ ಖರೀದಿ, ಅಧಿಕಾರದ ದುರುಪಯೋಗ ಹೆಚ್ಚಾಗುತ್ತಿದೆ” ಎಂದರು.
“ಜನರಿಗೆ ರಾಜಕೀಯವನ್ನು ಅರ್ಥ ಮಾಡಿಸದೆ, ಆರ್ಥಿಕ ವಿಚಾರಗಳ ಬಗ್ಗೆ ಹೇಳಲು ಹೋಗುತ್ತಿದ್ದೇವೆ. ಹೀಗಾಗಿ, ಸಮಾಜದಲ್ಲಾಗುತ್ತಿರುವ ದಮನಕಾರಿ ವಿಚಾರಗಳನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಹಿಂದೆ ಉಳಿಯುತ್ತಿದ್ದೇವೆ. ಮಾರ್ಕ್ಸ್‌ವಾದಿ ಪಕ್ಷಗಳು ಒಳ್ಳೆಯ ವಿಚಾರ-ಚಿಂತನೆಗಳನ್ನು ಹೊಂದಿವೆ. ಆದರೆ, ಜನರ ಮಧ್ಯೆ ಹೋಗಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ನಿಜವಾಗಿ ಏನು ನಡೆಯುತ್ತಿದೆ? ರಾಜಕೀಯ ದೃವೀಕರಣ ಹೇಗೆ ನಡೆಯುತ್ತಿದೆ ಎಂಬುದು ಜನರಿಗೆ ತಿಳಿದಿಲ್ಲ. ಜನರಿಗೆ ಅರ್ಥ ಮಾಡಿಸಲು ಆಗುತ್ತಿಲ್ಲ. ಯಾವ ರಾಜಕೀಯ ಪಕ್ಷದಲ್ಲೂ ಜನರ ಬಗ್ಗೆ ಯೋಚನೆ ಮಾಡುವ ಪ್ರಣಾಳಿಕೆ ಇಲ್ಲ. ಕೆಳ ಮಟ್ಟದ ಭಾಷೆ ಬಳಿಸಿ ರಾಜಕೀಯ ನಾಯಕರು ಮಾತಾಡುತ್ತಿದ್ದಾರೆ. ಒಬ್ಬರ ಮೇಲೆ ಒಬ್ಬರು ಹರಿಹಾಯುತ್ತಿದ್ದಾರೆ. ನಾಗರಿಕ ಚರ್ಚೆಯ ಕೊರತೆ ಇದೆ. ಮಾಧ್ಯಮಗಳಲ್ಲಿ ಸೆಲೆಬ್ರೆಟಿಗಳ ಬಗ್ಗೆ ಡಿಬೇಟ್ ನಡೆಯುತ್ತದೆ. ಆದರೆ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ” ಎಂದು ಅಸಮಾಧಾನದಿಂದ ಮಾತನಾಡಿದರು.
“ಮತದಾರರ ಮೇಲೆ ಬಲವಂತ, ಬಲಾತ್ಕಾರ, ಹಣ ಬಳಿಸಿ ಮತ ಖರೀದಿಸುವುದು ಪ್ರಚಲಿತವಾಗಿದೆ. ಮಹಾರಾಷ್ಟ್ರದಲ್ಲಿ 5 ಗಂಟೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಸಾಯಂಕಾಲದ ನಂತರ ಇಷ್ಟೋಂದು ಮತ ಹೇಗೆ ಬಂತು? ಇದಕ್ಕೆ ಚುನಾವಣಾ ಆಯೋಗದ ಬಳಿ ಉತ್ತರ ಇಲ್ಲ. ಮತದಾನದ ಮೇಲೆಯೇ ಅನುಮಾನ ಮೂಡುತ್ತಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಭಾರತದ ಸಂವಿಧಾನ ಕೇವಲ ದಾಖಲೆಗಳ ಪುಸ್ತಕವಲ್ಲ, ದೇಶದ ಚೇತನ: ಡಾ. ಕೆ ಷರೀಫಾ
“ಪ್ರತಿಯೊಬ್ಬರಿಗೂ ಓದು, ಕಲಿಕೆ, ಉದ್ಯೋಗ ನೀಡಬೇಕು ಎಂಬುದು ಸಂವಿಧಾನದ ಆಶಯ. ನ್ಯಾಯಾಂಗದ ಮೇಲೆ ರಾಜಕೀಯ ಪ್ರಭಾವ ಇದೆ ಎಂದು ಜನರು ಹೇಳುತ್ತಿದ್ದಾರೆ. ನ್ಯಾಯಾಲಯದ ನಿರ್ಧಾರಗಳಲ್ಲಿ ರಾಜಕೀಯ ಪ್ರಭಾವಿಗಳ ಒಳನುಸುಳುವಿಕೆ ಜನರ ನಂಬಿಕೆಯನ್ನು ಕುಂದಿಸುತ್ತಿದೆ. ಪಾರದರ್ಶಕತೆಯ ಕೊರತೆಯು ನೀತಿಪಾಲನೆಗೆ ತೊಂದರೆಯಾಗುತ್ತಿದೆ. ಪಾರದರ್ಶಕತೆಯನ್ನು ಗಾಳಿಗೆ ತೂರಲಾಗುತ್ತಿದೆ” ಎಂದು ಆರೋಪಿಸಿದರು.
“ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ. ಆರ್ಥಿಕ ಮತ್ತು ಅದಾಯದ ಅಸಮಾನತೆ ಹೆಚ್ಚಾಗಿದೆ. 1% ಜನರು ದೇಶದ 41% ಆದಾಯ ಹೊಂದಿದ್ದಾರೆ. 50% ಜನರು 13% ಆಸ್ತಿಯನ್ನು ನಿಯಂತ್ರಿಸುತ್ತಿದ್ದಾರೆ. ಖಾಸಗಿ ವಿದ್ಯಾಸಂಸ್ಥೆಗಳು ಹೆಚ್ಚಿನ ಹಣ ಪಡೆಯುತ್ತಿವೆ. ಸರ್ಕಾರಿ ಆಸ್ಪತ್ರೆಗಳು ಜನರ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ವಿದ್ಯಾಭ್ಯಾಸ ಮತ್ತು ಆರೋಗ್ಯದ ಅಸಮಾನತೆ ಬಡವರನ್ನು ಕಾಡುತ್ತಿದೆ. ಎಷ್ಟು ಅಸಮಾನತೆ ಇದೆಯೋ, ಅದಕ್ಕಿಂತ ಹೆಚ್ಚು ಶೋಷಣೆ ಇದೆ” ಎಂದರು.