ಹುಳುವಿನಿಂದ ತುಂಬಿರುವ ಪಡಿತರ ಅಕ್ಕಿ, ಜೋಳ ವಿತರಣೆ ಮಾಡಿದ್ದು, ನ್ಯಾಯಬೆಲೆ ಅಂಗಡಿಯವರು ಹಾಗೂ ಸರ್ಕಾರ ಬಡವರ ಆರೋಗ್ಯದ ಜತೆಗೆ ಚಲ್ಲಾಟ ಆಡುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಈಳಿಗನೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸುಮಾರು 650ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಬಡವರಿದ್ದಾರೆ. ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಪಡಿತರ ಆಹಾರ ಧಾನ್ಯವನ್ನೇ ನಂಬಿದ ಕುಟುಂಬಗಳಿವೆ. ಆದರೆ ಇಲ್ಲಿನ ಆಹಾರ ಧಾನ್ಯ ವಿತರಕರು ತುಂಬಾ ಕಳಪೆ ಮಟ್ಟದ ಅಕ್ಕಿ, ಜೋಳ ವಿತರಿಸುತ್ತಿದ್ದು, ಅದರಲ್ಲಿ ಕಲ್ಲು, ಮಣ್ಣು, ಧೂಳು ಅಷ್ಟೇ ಅಲ್ಲದೆ ಹುಳುಗಳ ಮಯವಾಗಿರುವ ಪಡಿತರ, ಬಳಕೆಗೆ ಯೋಗ್ಯವಿಲ್ಲದಂತಾಗಿದೆ” ಎಂದು ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಯುವಕರು, ಪಡಿತರ ವಿತರಕರನ್ನು ಪ್ರಶ್ನಿಸಿದರೂ ಕೂಡಾ ಯಾವುದೇ ರೀತಿಯ ಉತ್ತರ ನೀಡದೆ ನಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸಿದ್ದಾರೆ.
ಪಡಿತರ ಫಲಾನುಭವಿಗಳು ವಿಷಕಾರಿ ಆಹಾರದ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾದರೆ ಅದಕ್ಕೆ ಆಹಾರ ಇಲಾಖೆಯೇ ನೇರಹೊಣೆಯಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ₹6 ಕೋಟಿ ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದಲ್ಲಿ ಹುಳು ಪತ್ತೆ; ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ
ಬಳ್ಳಾರಿಯಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ(ಕೆಎಸ್ಡಬ್ಲ್ಯೂಸಿ) ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸುಮಾರು 24,000 ಕ್ವಿಂಟಾಲ್ ಜೋಳ ಸೇವನೆಗೆ ಯೋಗ್ಯವಲ್ಲವೆಂದು ತಿಳಿದುಬಂದಿತ್ತು. ಹುಳು ಬಿದ್ದಿರುವ ಜೋಳವನ್ನು ಬಳ್ಳಾರಿ ಜಿಲ್ಲೆ ಮತ್ತು ಸುತ್ತಮುತ್ತಲಿನ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಲಾಗುತ್ತಿದೆಯೆಂದು ಈಗಾಗಲೇ ಈ ದಿನ.ಕಾಮ್ ವರದಿ ಪ್ರಕಟಿಸಿತ್ತು. ಅಂತೆಯೇ ದನಕರುಗಳೂ ತಿನ್ನಲು ಯೋಗ್ಯವಿಲ್ಲದಂತಹ ಆಹಾರ ಧಾನ್ಯಗಳನ್ನು ಜನರಿಗೆ ನೀಡಿರುವುದು ಖಂಡಿನೀಯ.
ಈ ಸುದ್ದಿ ಓದಿದ್ದೀರಾ? ‘ನನ್ನ ಕಿಡ್ನಿ ಮಾರಿದ್ದೇನೆ, ಮಕ್ಕಳ ಕಿಡ್ನಿಯನ್ನೂ ಮಾರುವಂತೆ ಒತ್ತಾಯಿಸುತ್ತಿದ್ದಾರೆ’; ಮೈಕ್ರೋಫೈನಾನ್ಸ್ ಕಿರುಕುಳ ಬಿಚ್ಚಿಟ್ಟ ಮಹಿಳೆ
ಇಳಗನೂರು ಗ್ರಾಮದಲ್ಲಿ ದನಗಳು ತಿನ್ನುವುದಕ್ಕೂ ಯೋಗ್ಯವಲ್ಲದ ಕಳಪೆ ಪಡಿತರ ಜೋಳ, ಅಕ್ಕಿಯನ್ನು ಬಡವರಿಗೆ ವಿತರಿಸಿರುವುದರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕಾನೂನು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದ ಕಾನೂನು ವಿದ್ಯಾರ್ಥಿ ಯಮನೂರಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವಿಡಿಯೋ ವೈರಲ್ ಆಗಿದ್ದರೂ ಕೂಡ ಸಂಬಂಧಿಸಿದ ಇಲಾಖೆಯ ಯಾವುದೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿಕೊಟ್ಟು ಸೂಕ್ತ ಕ್ರಮ ತೆಗೆದುಕೊಂಡಿರುವುದಿಲ್ಲ. ಇದರಿಂದ ಆಹಾರ ಇಲಾಖೆಯ ನಿರ್ಲಕ್ಷ್ಯ ಧೋರಣೆ ಎದ್ದು ತೋರುತ್ತಿದೆ. ತೆರಿಗೆದಾರರ ಹಣವನ್ನು ಬಳಸಿ ಜೋಳವನ್ನು ಖರೀದಿಸಲಾಗಿದ್ದು, ಅದನ್ನು ಈ ರೀತಿ ವ್ಯರ್ಥ ಮಾಡಬಾರದು. ಸರ್ಕಾರದ ಅನ್ನಭಾಗ್ಯ ಯೋಜನೆಯು ದುರಪಯೋಗವಾಗುತ್ತಿರುವುದು ಕಂಡುಬರುತ್ತಿದೆ” ಬೇಸರ ವ್ಯಕ್ತಪಡಿಸಿದರು.