ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಶಾಸಕರು ಗಮನ ಹರಿಸಿ ಸೌಹಾರ್ದಯುತವಾಗಿ ಬಗೆಹರಿಸಬೇಕು ಎಂದು ಎಸ್‌ಡಿಪಿಐ ಕಾರ್ಯಕರ್ತರು ಆಗ್ರಹಿಸಿದರು.
ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, “ಮಡಿಕೇರಿಯ ಕಟ್ಟೆಮಾಡು ಮೃತ್ಯುಂಜಯ ದೇವಾಲಯದ ಆವರಣದಲ್ಲಿ ನಡೆದ ಭಿನ್ನಮತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎರಡು ಜನಾಂಗದವರು ಪಾರಂಪರಿಕ ಅಭಿಮಾನದ ಸಂಕೇತ. ಜಿಲ್ಲೆಯ ಅಭಿವೃದ್ಧಿಗೆ ಎರಡು ಸಮುದಾಯದವರ ಕೊಡುಗೆಯೂ ಇದೆ. ದೇಶಸೇವೆ, ಕ್ರೀಡೆ, ಚಲನಚಿತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪಾರವಾದ ಕೊಡುಗೆ ಪ್ರಸಂಶನೀಯ” ಎಂದರು.
“ವಸ್ತ್ರ ಸಂಹಿತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯ ಬಗೆಹರಿಯದೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಶಾಸಕರ ಮಧ್ಯಸ್ಥಿಕೆಯ ಕೊರತೆಯಿಂದಾಗಿದೆ. ಈ ವಿಷಯದಲ್ಲಿ ಹೆಚ್ಚು ವಿಳಂಬಗೊಳಿಸದೆ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು ಮಧ್ಯ ಪ್ರವೇಶಿಸಿ ಎರಡು ಜನಾಂಗದವರನ್ನು ಕೂರಿಸಿ ಸೌಹಾರ್ದಯುತವಾಗಿ ಬಗೆಹರಿಸಬೇಕು” ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ತಡೆಗೋಡೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವುದು ಶಾಸಕರ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಮೂಗಿಗಿಂತ ಮೂಗುತ್ತಿ ಭಾರವೆಂಬಂತೆ ₹5 ಕೋಟಿಯಲ್ಲಿ ಡಿಸಿ ಕಚೇರಿ ಪೂರ್ಣಗೊಂಡರೆ ತಡೆಗೋಡೆಗೆ ₹7 ಕೋಟಿ ಕ್ರಿಯಾ ಯೋಜನೆ ಮಾಡಿ ಜರ್ಮನ್ ಟೆಕ್ನಾಲಜಿ ಬಳಕೆ ಮಾಡಿ ಪೂರ್ಣಗೊಳಿಸಿದ ಕಾಮಗಾರಿಯ ಪ್ಯಾನೆಲ್‌ಗಳು ಹೊರಬಂದಿದ್ದವು. ಕಾಂಗ್ರೆಸ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲೆಗೆ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಡೆಗೋಡೆ ವೀಕ್ಷಣೆಗೆ ಬಂದಿದ್ದರು. ಮಾನ್ಯ ಸಿದ್ದರಾಮಯ್ಯನವರ ಮೇಲೆ ಬಿಜೆಪಿಯ ಕಾರ್ಯಕರ್ತರು ಮೊಟ್ಟೆ ಎಸೆದಿದ್ದರು. ಅದೇ ವೇಳೆ ಸಿದ್ದರಾಮಯ್ಯನವರು ʼಮುಖ್ಯಮಂತ್ರಿಯಾಗಿ ಜಿಲ್ಲೆ ಪ್ರವೇಶ ಮಾಡುತ್ತೇನೆʼ ಎಂದೂ ಕೂಡ ಸವಾಲು ಹಾಕಿದ್ದರು” ಎಂದು ಹೇಳಿದರು.
“ನಂತರದ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಬಂದು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆ ಸಂದರ್ಭದಲ್ಲಿ ಡಿಸಿ ಕಚೇರಿಯ ಮುಂಭಾಗದ ತಡೆಗೋಡೆಯ ಬಗ್ಗೆ ಸೊಲ್ಲೆತ್ತಲಿಲ್ಲ. ಮುಂದುವರೆದು ಡೆಪ್ಯುಟಿ ಸ್ಪೀಕರ್ ಕಮಿಟಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಬಂದಿದ್ದರು. ಪ್ರತಿ ಸಲವೂ ಕೂಡ ಆಶ್ವಾಸನೆ ನೀಡುತ್ತಾರೆಯೇ ಹೊರತು ತಡೆಗೋಡೆ ಪೂರ್ಣಗೊಳ್ಳುತ್ತಿಲ್ಲ. ಈ ಬಗ್ಗೆ ಶಾಸಕ ಮಂತರ್ ಗೌಡರು ಜನರಿಗೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ಸಾರ್ವಜನಿಕರಿಗೆ ಹೋರಾಟ ಮಾಡಲು ಕರೆ ನೀಡಬೇಕು. ತಡೆಗೋಡೆಯ ಕಾಮಗಾರಿಯನ್ನು ಇನ್ನೂ ವಿಳಂಬ ಮಾಡಿದರೆ ಎಸ್‌ಡಿಪಿಐಯಿಂದ ತೀವ್ರ ಸ್ವರೂಪದ ಹೋರಾಟ ನಡೆಯಲಿದೆ” ಎಂದು ಎಚ್ಚರಿಸಿದರು.
“ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 2.58 ಲಕ್ಷ ಹೆಕ್ಟೇರ್ ವಿಸ್ತೀರ್ಣದ ಸಿ ಮತ್ತು ಡಿ ಜಮೀನುಗಳನ್ನು ಅರಣ್ಯ ಇಲಾಖೆಗೆ ಲ್ಯಾಂಡ್ ಬ್ಯಾಂಕ್ ನಿರ್ಮಿಸುವ ಸಲುವಾಗಿ ವರ್ಗಾವಣೆ ಮಾಡಿದ್ದು, ಇದರಲ್ಲಿ ಕೊಡಗು ಜಿಲ್ಲೆಯ ಒಟ್ಟು 33,377 ಎಕರೆ ಸಿ ಮತ್ತು ಡಿ ಲ್ಯಾಂಡ್ ಒಳಗೊಂಡಿದೆ. ಇದೀಗ ಸರ್ಕಾರ ಕಂದಾಯ ಇಲಾಖೆಗೆ ಮರಳಿ ಪಡೆದು ಭೂ ರಹಿತರಿಗೆ ಹಂಚಬೇಕು. ವಿಲೇವಾರಿಗೊಳ್ಳದೆ ಬಾಕಿಯಿರುವ ಫಾರಂ 50, 53, 57, 94ಸಿ ಹಾಗೂ 94ಸಿಸಿ ತ್ವರಿತವಾಗಿ ಪೂರ್ಣಗೊಳಿಸಿ ಭೂಮಿ ಹಾಗೂ ನಿವೇಶನದ ಹಕ್ಕನ್ನು ನೈಜ ಫಲಾನುಭವಿಗಳಿಗೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣರಾಜ್ಯೋತ್ಸವದಲ್ಲಿ ಜೈಶ್ರೀರಾಮ್ ಘೋಷಣೆ; ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನ
“ಎಕರೆ ಒಂದಕ್ಕೆ ₹1000ದಂತೆ ಗರಿಷ್ಠ 25 ಎಕರೆವರೆಗೆ ಭೂಮಿಯನ್ನು ಬಂಡವಾಳಶಾಹಿಗಳಿಗೆ 30 ವರ್ಷಕ್ಕೆ ಗುತ್ತಿಗೆ ನೀಡಲು ಹಿಂದಿನ ಬಿಜೆಪಿ ಸರ್ಕಾರ ಆದೇಶ ನೀಡಿತ್ತು. ಅದನ್ನೇ ಯಥವತ್ತಾಗಿ ಜಾರಿಗೆ ತರಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಈ ಆದೇಶವನ್ನು ರದ್ದುಗೊಳಿಸಬೇಕು. ಈ ವಿಷಯವಾಗಿ ಜಿಲ್ಲೆಯ ಶಾಸಕರು ಆದೇಶ ರದ್ದತಿಗೆ ಒತ್ತಾಯಿಸಬೇಕು” ಎಂದರು.
ಜಿಲ್ಲಾಧ್ಯಕ್ಷ ಅಮೀನ್ ಮೋಹಿಸಿನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್, ನಗರಾಧ್ಯಕ್ಷ ರಿಜ್ವಾನ್, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಜಲೀಲ್, ನಗರ ಸಮಿತಿ ಸದಸ್ಯ ಉಮ್ಮರ್, ಜಿಲ್ಲಾ ಸಮಿತಿ ಸದಸ್ಯ ಮೇರಿ ವೇಗಸ್ ಸುದ್ದಿಗೋಷ್ಟಿಯಲ್ಲಿ ಇದ್ದರು.