ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಋತುಚಕ್ರವಾಗಿದೆ. ಈ ಸಮಯದಲ್ಲಿ ಆಕೆಗೆ ಅಗತ್ಯ ಸಹಾಯ ಮಾಡಬೇಕಿದ್ದ ಶಾಲೆಯ ಪ್ರಾಂಶುಪಾಲರು, ಆಕೆಯನ್ನು ಒಂದು ಗಂಟೆಗಳ ಕಾಲ ತರಗತಿಯ ಹೊರಗೆ ನಿಲ್ಲಿಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. 11ನೇ ತರಗತಿಯ ವಿದ್ಯಾರ್ಥಿನಿ ಸ್ಯಾನಿಟರಿ ಪ್ಯಾಡ್ ಒದಗಿಸುಂತೆ ಪ್ರಾಂಶುಪಾಲರನ್ನು ಕೇಳಿಕೊಂಡಿದ್ದಾರೆ. ಆದರೆ, ಸ್ಯಾನಿಟರಿ ಪ್ಯಾಡ್ ಒದಗಿಸುವ ಬದಲು, ಆಕೆಯನ್ನು ಪ್ರಾಂಶುಪಾಲರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಆಕೆಗೆ ಯಾವುದೇ ನೆರವು ನೀಡದೆ, ತರಗತಿಯ ಹೊರಗೆ ನಿಲ್ಲಿಸಿದ್ದಾರೆ.
ಬಾಲಕಿಯ ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಶಾಲೆಗಳ ನಿರೀಕ್ಷಕರು (DIOS), ರಾಜ್ಯ ಮಹಿಳಾ ಆಯೋಗ ಹಾಗೂ ಮಹಿಳಾ ಕಲ್ಯಾಣ ಇಲಾಖೆಗೆ ಲಿಖಿತ ದೂರುಗಳನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಾಲೆಗಳ ನಿರೀಕ್ಷಕ ದೇವಕಿ ನಂದನ್ ಹೇಳಿದ್ದಾರೆ.