ಚದುರಂಗ(ಚೆಸ್) ಆಟದಿಂದ ಗ್ರಾಮೀಣ ಪ್ರತಿಭೆಗಳು ವಂಚಿತರಾಗಬಾರದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಆಸೋಸಿಯೇಷನ್(ಬಿಆರ್‌ಡಿಸಿಎ) ಮಕ್ಕಳಿಗೆ ಚೆಸ್ ತರಬೇತಿ ಮತ್ತು ಸ್ಪರ್ಧೆ ಆಯೋಜಿಸುತ್ತಿದೆ.
2005ರಿಂದ ಈವರೆಗೂ ಸುಮಾರು 127 ಚದುರಂಗ ಸ್ಪರ್ಧೆಗಳನ್ನು ಆಯೋಜಿಸಿದ್ದು, ಸುಮಾರು 52 ಸ್ಪರ್ಧಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈವರೆಗೂ 18 ರಿಂದ 20 ರಾಜ್ಯಗಳ ಸುಮಾರು 3 ಲಕ್ಷ ಚೆಸ್ ಆಟಗಾರರಿಗೆ ಹೊಸಕೋಟೆಯ ಬಿಆರ್‌ಡಿಸಿಎ ವೇದಿಕೆ ಒದಗಿಸಿಕೊಟ್ಟಿದೆ. ಸ್ಪರ್ಧೆ ಆಯೋಜನೆ, ನಗದು ಬಹುಮಾನ, ಪ್ರಶಸ್ತಿ, ಪ್ರೋತ್ಸಾಹಧನಕ್ಕಾಗಿ ಬಿಆರ್‌ಡಿಸಿಎ ಈವರೆಗೂ ₹1.50 ಕೋಟಿ ವೆಚ್ಚ ಮಾಡಿದೆ.
ಚದುರಂಗ ಸ್ಪರ್ಧೆಯನ್ನು 2008ರಲ್ಲಿ ಆಯೋಜಿಸಿದಾಗ 100 ರಿಂದ 150 ಮಂದಿ ಮಾತ್ರ ಫಿಡೆ ರೇಟೆಡ್ ಆಟಗಾರರಷ್ಟೆ ಇದ್ದರು. ರೇಟಿಂಗ್ ಟೂರ್ನಿ ಆರಂಭಿಸಿದ ನಂತರ ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಅಲ್ಲದೆ ರಾಜ್ಯದ ಎಲ್ಲ ಗ್ರ್ಯಾಂಡ್ ಮಾಸ್ಟರ್, ಇಂಟರ್ ನ್ಯಾಷನಲ್ ಮಾಸ್ಟರ್ ಇಲ್ಲಿಯ ಟೂರ್ನಿಗಳಲ್ಲಿ ಆಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣರಾಜ್ಯೋತ್ಸವದಲ್ಲಿ ಜೈಶ್ರೀರಾಮ್ ಘೋಷಣೆ; ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಇಡದೆ ಅವಮಾನ
“ಬಿಆರ್‌ಡಿಸಿಎ ಆರಂಭವಾದ ದಿನದಿಂದ ಈವರೆಗೆ 120ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ತರಬೇತಿ ನೀಡಿದ್ದೇವೆ. ಮುಂದಿನ ತಿಂಗಳು ಹೊಸಕೇಟೆ ತಾಲೂಕಿನ ದೇವನಗೊಂದಿಯ ಬಳಿ ಶಾಲೆಯಲ್ಲಿ ಜಿಲ್ಲಾ ಚಾಂಪಿಯನ್‌ಷಿಪ್‌ಗೆ ಉಚಿತ ತರಬೇತಿ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಚೆಸ್ ಪಟುಗಳ ಎಲ್ಲ ಖರ್ಚುವೆಚ್ಚಗಳನ್ನು ಸಂಸ್ಥೆಯೇ ಭರಸಲಿದೆ” ಎಂದು ಬಿಆರ್‌ಡಿಸಿಎ ಅಧ್ಯಕ್ಷ ಎ ಚಿದಾನಂದ ತಿಳಿಸಿದ್ದಾರೆ.