ಸಂಸದರು ಮಾನಸಿಕ ಆಸ್ವಸ್ಥರಾಗಿರಬೇಕು. ಇಲ್ಲವೇ ಕೊರೋನಾ ಸಂದರ್ಭದಲ್ಲಿ ದಿಲ್ಲಿಯಿಂದ ಬರುತ್ತಿದ್ದ ಆದಾಯ ಬರದೇ ಇರುವ ಕಾರಣಕ್ಕೆ ಈ ರೀತಿಯಾಗಿ ಹೇಳಿಕೆ ಕೊಟ್ಟಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಂಸದ ಸುಧಾಕರ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣಗಳ ಮೇಲೆ ಹಣ ಲೂಟಿ ಮಾಡುತ್ತಿದ್ದ ಆದಾಯ ಕಡಿಮೆಯಾಗಿರುವ ಹಿನ್ನೆಲೆ ನೋವಿನಿಂದ ಮಾತನಾಡಿದ್ದಾರೆ ಎಂದು ಹೇಳಿದರು.
ಇಲಾಖೆಗೊಬ್ಬ ಏಜೆಂಟರನ್ನ ನೇಮಿಸುವ ಸಂಸ್ಕೃತಿ ಈ ಹಿಂದಿನ ಅವಧಿಯಲ್ಲಿತ್ತು. ಸ್ವಂತ ಕಂಪನಿಗಳಿಗೆ ಪ್ಯಾಕೇಜ್ ಮಾಡಿಕೊಂಡು ಗುತ್ತಿಗೆ ತೆಗೆದುಕೊಂಡಿದ್ದರು. ನಮ್ಮ ಅವಧಿಯಲ್ಲಿ ಯಾರನ್ನೂ ನೇಮಿಸಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಕೇಳಬಹದು. ಕಾಮಾಲೆ ರೋಗ ಬಂದಿರುವವರಿಗೆ ಕಾಣೋದೆಲ್ಲ ಹಳದಿ ಎಂಬಂತೆ ಸಂಸದರು ಭ್ರಮೆಯಲ್ಲಿದ್ದಾರೆ. ಸಂಸದರಾಗಿ ಆಯ್ಕೆಯಾಗಿರುವುದು ತೃಪ್ತಿ ತಂದಿಲ್ಲ. ಜಿಲ್ಲೆಯ ಹಿಡಿತ ಕೈತಪ್ಪಿದೆ. ಬರುತ್ತಿದ್ದ ವರಮಾನ ಕೈತಪ್ಪಿದೆ. ಚಿಕ್ಕಬಳ್ಳಾಪುರ ಉತ್ಸವ ಮತ್ತು ಶಿವೋತ್ಸವಕ್ಕೆ ಎಷ್ಟು ವಸೂಲಿ ಆಯಿತು. ಜಿಪಂ, ತಾಪಂ ಚುನಾವಣೆಗಳಿಗೆ ಪೊಲೀಸ್ ಠಾಣೆಗಳಿಂದ ಎಲ್ಲೆಲ್ಲಿ ವಸೂಲಿ ಆಯಿತು. ಯಾವ್ಯಾವ ಗುತ್ತಿಗೆ ಕಾಮಗಾರಿಗಳಿಗೆ ಎಲ್ಲೆಲ್ಲಿ ವಸೂಲಿ ಆಯಿತು ಎಂಬ ಎಲ್ಲಾ ಮಾಹಿತಿ ಸಂಸದರಿಗೆ ಗೊತ್ತಿದೆ ಎಂದು ಕಾಲೆಳೆದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
ನರ್ಸಿಂಗ್ ವರ್ಗಾವಣೆ, ಡೆಂಟಲ್ ವೈದ್ಯರ ನೇಮಕ, ವೈದ್ಯಕೀಯ ಆಸ್ಪತ್ರೆಗೆ ಅಸಿಸ್ಟೆಂಟ್ ಪ್ರೊಫೆಸರ್‌ಗಳ ನೇಮಕಾತಿಯಲ್ಲಿ ಎಷ್ಟು ತಿಂಗಳ ಸಂಬಳ ನೇರವಾಗಿ ಕೇಳಿ ಪಡೆದಿರುವುದು. ಈ ರೀತಿಯ ಯಾವುದಾದರೂ ಉದಾಹರಣೆಗಳು ನಮ್ಮ ಇಲಾಖೆಯಲ್ಲಿ ನಡೆದಿದ್ದರೆ ನನ್ನ ಗಮನಕ್ಕೆ ತರಲಿ. ನಾವು ಆ ರೀತಿಯ ಸಂಸ್ಕೃತಿಯಲ್ಲಿ ಬೆಳೆದವರಲ್ಲ ಎಂದು ಹೇಳಿದರು.