ಲೋಕೋಪಯೋಗಿ ಇಲಾಖೆ ವತಿಯಿಂದ ನಗರದ ಅಲ್ಲಮಪ್ರಭು ಉದ್ಯಾನವನದಲ್ಲಿ ಶನಿವಾರ ಏರ್ಪಡಿಸಿದ್ದ ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ಉದ್ಯಾನವನದ ಸರ್ವಾಂಗೀಣ ಅಭಿವೃದ್ದಿ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನೆರವೇರಿಸಿದರು.
ಬಳಿಕ ಕ್ರಾಫ್ಟ್ ಆಫ್ ಮಲೆನಾಡು ಮತ್ತು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ಕರಕುಶಲ ಉತ್ಪನ್ನಗಳನ್ನು ಖರೀದಿಸಿ, ಕುಶಲಕರ್ಮಿಗಳನ್ನು ಉತ್ತೇಜಿಸಿದರು. ಈ ವೇಳೆ ಮಾತನಾಡಿದ ಅವರು, “ಜಿಲ್ಲೆಯ ಕುಶಲಕರ್ಮಿಗಳು ವಿಶೇಷವಾಗಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೂ ನೀಡಿ, ಅವರ ಗಮನ ಸೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶಾಶ್ವತ ಮಳಿಗೆ ತೆರೆಯುವ ಆಲೋಚನೆ ಸಹ ಇದೆ. ಇದರಿಂದ ಸ್ಥಳೀಯ ಕಲಾವಿದರು, ಕುಶಲಕರ್ಮಿಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಭದ್ರಾವತಿಯನ್ನ ರಿಪಬ್ಲಿಕ್ ಆಗಲು ಬಿಡಲ್ಲ: ಸಚಿವ ಮಧು ಬಂಗಾರಪ್ಪ
ಈ ವೇಳೆ ಶಾಸಕ ಎಸ್ ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ್, ಮಾಜಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಸೇರಿ ಹಲವು ಮುಖಂಡರು, ಜಿಲ್ಲಾಧಿಕಾರಿ, ಜಿಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇತರೆ ಅಧಿಕಾರಿಗಳು ಇದ್ದರು.