ಕೊಪ್ಪಳ ನಗರದ ಶಾದಿ ಮಹಲ್ ಬಾಡಿಗೆ ಕಡಿಮೆ ಮಾಡುವಂತೆ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ ಎ ಗಫಾರ್, ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ ಮುಂತಾದವರು ಮನವಿ ಸಲ್ಲಿಸಿದರು.
“ನಗರಸಭೆ ಎದುರಿನ ಶಾದಿ ಮಹಲ್ ಬಾಡಿಗೆ ಪ್ರಸ್ತುತ ₹12,000 ಗಳು ಇದೆ. ಬಡ ಜನರು ಕೈಲಾದಷ್ಟು ದೇಣಿಗೆ ನೀಡಿದ ಹಣದಲ್ಲಿ ಜಾಗ ಖರೀದಿಸಿದ್ದು, ನಂತರ ಸರ್ಕಾರದಿಂದ ಬಂದ ವಿವಿಧ ಅನುದಾನದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಆದರೆ ಆಗ ಚಂದ ನೀಡಿದ ಬಡವರಿಗೆ ಈಗ ಶಾದಿ ಮಹಲ್‌ನಲ್ಲಿ ಮದುವೆಗೆ ಪಡೆಯಲು ಸಾಧ್ಯವಾಗದಷ್ಟು ಬಾಡಿಗೆ ಏರಿಸುವುದರಿಂದ ಸಮಸ್ಯೆ ಅನುಭವಿಸಬೇಕಾಗಿದೆ. ಉಳ್ಳವರಿಗೆ ಶಾದಿ ಮಹಲ್ ಎಂಬಂತಾಗಿದೆ. ಈ ಹಿಂದೆ ಘೋಷಿಸಿದಂತೆ ಶಾದಿ ಮಹಲ್ ಬಾಡಿಗೆಯನ್ನು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ₹3000 ಗಳಿಗೆ ನಿಗದಿಪಡಿಸಬೇಕು. ಶಾದಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ದೇವಸ್ಥಾನದ ದೇಣಿಗೆ ಹಣ ಶಾಲೆಯ ಕೊಠಡಿ ನಿರ್ಮಾಣಕ್ಕೆ ಬಳಕೆ; ಉದಾರತೆ ಮೆರೆದ ಗ್ರಾಮಸ್ಥರು
“ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸಲು ಕ್ರಮವಹಿಸಬೇಕು. ರಾಜ್ಯದಾದ್ಯಂತ ವಕ್ಫ್ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು. ವಿವಿಧ ತಾಂತ್ರಿಕ ಶಿಕ್ಷಣ ಬೋಧನಾ ತರಬೇತಿ ಕಾಲೇಜುಗಳು ಸರ್ಕಾರದಿಂದ ಮಂಜೂರಾಗಬೇಕು. ಶೂನ್ಯದಿಂದ ಪದವಿವರೆಗೆ ಧಾರ್ಮಿಕ ಹಾಗೂ ಲೌಕಿಕ ಶೈಕ್ಷಣಿಕ ಶಾಲಾ ಕಾಲೇಜುಗಳು ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
