ಉತ್ತರಕಾಶಿ ಜಿಲ್ಲೆಯ ಮೋರಿ ಬ್ಲಾಕ್‌ನ ಸವಾನಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ಅಗ್ನಿ ಅವಘಡದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಸುಮಾರು ಹತ್ತು ಮನೆಗಳು ನಾಶವಾಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಜಿಲ್ಲಾ ಆಡಳಿತ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್), ಪೊಲೀಸರು, ಅಗ್ನಿಶಾಮಕ ಸೇವೆಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರು.
ಇದನ್ನು ಓದಿದ್ದೀರಾ? ಟರ್ಕಿ ಹೋಟೆಲ್‌ನಲ್ಲಿ ಭಾರೀ ಅಗ್ನಿ ದುರಂತ; 76 ಮಂದಿ ದುರ್ಮರಣ
ಆರಂಭಿಕ ವರದಿ ಪ್ರಕಾರ ಸುಮಾರು 8ರಿಂದ 10 ಮನೆಗಳು ನಾಶವಾಗಿದೆ. ಸುಮಾರು 25 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ವರದಿಯಾಗಿದೆ. ಈ ಅಗ್ನಿ ದುರಂತದಲ್ಲಿ ಸವಾನಿ ಗ್ರಾಮದ 75 ವರ್ಷದ ಬ್ರಹ್ಮ ದೇವಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಉತ್ತರಕಾಶಿಯ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಭಾನುವಾರ ರಾತ್ರಿ 10:40ರ ಸುಮಾರಿಗೆ ಅಗ್ನಿ ದುರಂತದ ಬಗ್ಗೆ ಮಾಹಿತಿ ಲಭಿಸಿದೆ. ಕೂಡಲೇ ಮೋರಿ ಮತ್ತು ನೌಗಾಂವ್‌ನಲ್ಲಿರುವ ಎಸ್‌ಡಿಆರ್‌ಎಫ್, ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳು, ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ 5 ಕಿ.ಮೀ. ಕಾಲ್ನಡಿಗೆ ದಾರಿ ಮಾತ್ರವಿದ್ದು ಇದು ತಂಡಕ್ಕೆ ದೊಡ್ಡ ಸವಾಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಮೆಹರ್ಬಾನ್ ಸಿಂಗ್ ಬಿಶ್ತ್, “ಮೋರಿಯ ತಹಶೀಲ್ದಾರ್ ಅವರು ಹೆಚ್ಚುವರಿ ಕಂದಾಯ ಸಿಬ್ಬಂದಿ ಮತ್ತು ರಕ್ಷಣಾ ಸಾಮಾಗ್ರಿಗಳೊಂದಿಗೆ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ಸ್ಥಳಕ್ಕೆ ತಲುಪಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಯಾಗ್‌ರಾಜ್ | ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ
ಹಾಗೆಯೇ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವಾನಂದ್ ಶರ್ಮಾ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ದೃಢಪಡಿಸಿದ್ದಾರೆ.
ಕಾರ್ಯಾಚರಣೆ ಸಹಾಯವಾಗಲು ಹತ್ತಿರದ ಪ್ರದೇಶಗಳಿಂದ ಹೆಚ್ಚುವರಿ ತಂಡಗಳನ್ನು ಕಳುಹಿಸಲಾಗಿದೆ. ವೈದ್ಯಕೀಯ ಮತ್ತು ಕುಡಿಯುವ ನೀರು ಸೇವೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಗೆ ತ್ವರಿತವಾಗಿ ಸೇವೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸದ್ಯ ಈ ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಲಾಗಿದೆ.
