ಅತ್ಯಾಚಾರ ಪ್ರಕರಣ | ಭಾರೀ ಪ್ರತಿಭಟನೆಯಾದರೆ ಮಾತ್ರ ತ್ವರಿತ ವಿಚಾರಣೆಯೇ?!

Date:

Advertisements

ಕೊಲ್ಕತ್ತಾದ ವೈದ್ಯೆಯ ಅತ್ಯಾಚಾರ- ಕೊಲೆಯ ಪ್ರಕರಣದ ವಿಚಾರಣೆಯನ್ನು ಇಷ್ಟು ಬೇಗ ಮುಗಿಸಿದ ಸಿಬಿಐ ಮತ್ತು ಕೋರ್ಟಿನ ಕ್ರಮವನ್ನು ಶ್ಲಾಘಿಸಲೇಬೇಕು. ಆದರೆ, ಇಂತಹ ಎಲ್ಲ ಪ್ರಕರಣಗಳೂ ಇಷ್ಟೇ ತುರ್ತಾಗಿ ವಿಚಾರಣೆ ಮುಗಿಸಿ ತೀರ್ಪು ಕೊಡಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಇತ್ತೀಚಿನ ವರ್ಷಗಳಲ್ಲೇ ದೇಶದಾದ್ಯಂತ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದ್ದ ಒಂದು ಪ್ರಕರಣ 2024ರ ಆಗಸ್ಟ್‌ನಲ್ಲಿ ಕೊಲ್ಕತ್ತಾದ ಆರ್ ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕರ್ತವ್ಯ ನಿರತ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ. ಈ ಪ್ರಕರಣದ ಏಕೈಕ ಅಪರಾಧಿ ಸಂಜಯ್ ರಾಯ್ ಗೆ ಸ್ಥಳೀಯ ನ್ಯಾಯಾಲಯ ಇದೇ ಜನವರಿ 20ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸೀಯಾಲ್ದಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಈ ತೀರ್ಪು ನೀಡಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಿದ್ದು ಮೋದಿ ಸರ್ಕಾರದ ಸಿಬಿಐ ಎಂಬ ಸಂಗತಿಯನ್ನು ಗಮನಿಸಬೇಕು. ತನಿಖೆಯನ್ನು ಪಶ್ಚಿಮ ಬಂಗಾಳದ ಪೊಲೀಸರು ನಡೆಸಿದ್ದರೆ ಅಪರಾಧಿಗೆ ಮರಣದಂಡನೆ ಕೊಡಿಸುತ್ತಿದ್ದೆವು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಲ್ಲದೇ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತಕ್ಷಣವೇ ಮಮತಾ ಸರ್ಕಾರ ಅರ್ಜಿ ಸಲ್ಲಿಸಿದೆ. ಹಾಗೆ ಸಿಬಿಐ ಕೂಡಾ ಸುಪ್ರೀಂಗೆ ಅರ್ಜಿ ಸಲ್ಲಿಸಲಿದೆ ಎಂದು ವರದಿಯಾಗಿದೆ.

Advertisements

ಹಾಗೆ, ನೋಡಿದರೆ ಇತ್ತೀಚಿನ ವರ್ಷಗಳಲ್ಲಿ ಬಹಳ ಕಡಿಮೆ ಅವಧಿಯಲ್ಲಿ ವಿಚಾರಣೆ ನಡೆದು ತೀರ್ಪು ಕೊಟ್ಟ ಅಪರೂಪದ ಪ್ರಕರಣವಿದು. ಕಳೆದ ವರ್ಷ ಆಗಸ್ಟ್ 9ರಂದು 31 ವರ್ಷದ ವೈದ್ಯೆಯ ಜರ್ಜರಿತ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾದ ನಂತರ ಆಗಸ್ಟ್ 10 ರಂದು ಕೊಲ್ಕತ್ತಾ ಪೊಲೀಸರು ಮಾಜಿ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಿದ್ದರು. ಸಿಬಿಐ ಆಗಸ್ಟ್‌ 14ರಂದು ಈ ತನಿಖೆಯನ್ನು ರಾಜ್ಯ ಪೊಲೀಸರಿಂದ ತಾನು ವಹಿಸಿಕೊಂಡಿತ್ತು. ನವೆಂಬರ್‌ 9ರಂದು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ನವೆಂಬರ್ 12ರಿಂದ ವಿಚಾರಣೆ ಪ್ರಾರಂಭವಾಗಿತ್ತು. 50 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಜನವರಿ 9ರಂದು ರಾಯ್ ವಿಚಾರಣೆ ಮುಕ್ತಾಯಗೊಳಿಸಲಾಗಿತ್ತು. ಜ. 20ರಂದು ತೀರ್ಪು ಪ್ರಕಟವಾಗಿದೆ.

ಕೋಲ್ಕತ್ತ ರೇಪಿಸ್ಟ್
ಆರ್‌ ಜಿ ಕರ್‌ ಆಸ್ಪತ್ರೆಯ ವೈದ್ಯೆಯ ಅತ್ಯಾಚಾರಿ ಸಂಜಯ್‌ ರಾಯ್

ಈ ಪ್ರಕರಣ ಬಯಲಾಗುತ್ತಿದ್ದಂತೆ ಮಮತಾ ಸರ್ಕಾರ ನಡೆದುಕೊಂಡ ರೀತಿ ನಿಜಕ್ಕೂ ಅಮಾನವೀಯ. ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೆಣಗಾಡಿದ್ದರು. ಘಟನೆ ನಡೆದ ಕೊಠಡಿಯಲ್ಲಿ ತರಾತುರಿಯಂದ ನವೀಕರಣ ಮಾಡಿದ್ದು ಸಾಕ್ಷ್ಯಗಳನ್ನು ನಾಶಪಡಿಸುವ‌ ಮತ್ತು ಪ್ರಕರಣದ ತೀವ್ರತೆಯನ್ನು ತಗ್ಗಿಸುವ ಹುನ್ನಾರವಾಗಿತ್ತು. ಅದೇನೇ ಇರಲಿ ಈ ಪ್ರಕರಣ ಬಿಜೆಪಿ ಮತ್ತು‌ ತೃಣಮೂಲ ಕಾಂಗ್ರೆಸ್ ನಡುವಣ ಕಾಲ್ಚೆಂಡಾಗಿ ರಾಜಕೀಕರಣಗೊಂಡಿದ್ದು ಮಾತ್ರ ದುರಂತ.

ಮೊದಲೇ ಸದಾ ಮಮತಾ ಸರ್ಕಾರದ ವಿರುದ್ಧ ನಿರಂತರ ಕಾಲು ಕೆದರಿ ಘರ್ಷಣೆಗೆ ಸಿದ್ಧರಾದಂತೆ ವರ್ತಿಸುತ್ತಿದ್ದ ಬಿಜೆಪಿ ಇಡೀ ಪ್ರಕರಣವನ್ನು ರಾಜಕೀಯ ಕೆಸರೆರಚಾಟಕ್ಕೆ ತಿರುಗಿಸಿತ್ತು. ಆರ್‌ಜಿಕರ್‌ ಆಸ್ಪತ್ರೆ ಮಾತ್ರವಲ್ಲ ಹಲವು ಆಸ್ಪತ್ರೆಗಳ ವೈದ್ಯರು ತಿಂಗಳ ಕಾಲ ಮುಷ್ಕರ ನಡೆಸಿದ ಕಾರಣ ರೋಗಿಗಳು ಚಿಕಿತ್ಸೆಯಿಲ್ಲದೆ ಸಾವಿಗೆ ಬಲಿಯಾದರು.

ಪ್ರಕರಣದ ನಿರ್ವಹಣೆಯಲ್ಲಿ ಸಾಕಷ್ಟು ಲೋಪವಾಗಿದೆ ಎಂದು ಆರಂಭದಿಂದಲೂ ಆರೋಪ ಕೇಳಿಬಂದಿತ್ತು. ಬಿಜೆಪಿ ಈ ಪ್ರಕರಣವನ್ನು ರಾಜಕೀಯಗೊಳಿಸಿದ ಪರಿಣಾಮವಾಗಿ ಸಿಬಿಐಗೆ ತನಿಖೆಯನ್ನು ವಹಿಸಲಾಗಿತ್ತು. ಕೇವಲ ಐದೇ ತಿಂಗಳಲ್ಲಿ ವಿಚಾರಣೆ ಮುಗಿಸಿ ಶಿಕ್ಷೆ ಪ್ರಕಟವಾಗಿದೆ. ಆದರೆ ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆ ನೀಡದಿರುವ ಬಗ್ಗೆ ಸಂತ್ರಸ್ತೆಯ ಕುಟುಂಬ ಅಸಮಾಧಾನ ಹೊರ ಹಾಕಿದೆ. “ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ವಿಧಿಸಬಹುದು. ಇದು ಅಂತಹ ಪ್ರಕರಣ ಅಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಸಿಬಿಐ ಈ ಪ್ರಕರಣವನ್ನು ಅಪರೂಪದ ಪ್ರಕರಣ ಎಂದು ಸಾಬೀತುಪಡಿಸಲು ಸೋತಿದೆ. ‌

ಕೊಲ್ಕತ್ತಾದ ವೈದ್ಯೆಯ ಪ್ರಕರಣದ ವಿಚಾರಣೆಯನ್ನು ಇಷ್ಟು ಬೇಗ ಮುಗಿಸಿದ ಸಿಬಿಐ ಮತ್ತು ಕೋರ್ಟಿನ ಕ್ರಮವನ್ನು ಶ್ಲಾಘಿಸಲೇಬೇಕು. ಆದರೆ, ಇಂತಹ ಎಲ್ಲ ಪ್ರಕರಣಗಳೂ ಇಷ್ಟೇ ತುರ್ತಾಗಿ ವಿಚಾರಣೆ ಮುಗಿಸಿ ತೀರ್ಪು ಕೊಡಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರು?

ಇದಕ್ಕಿಂತಲೂ ಭೀಕರ ಪ್ರಕರಣ 2012ರಲ್ಲಿ ದೆಹಲಿಯಲ್ಲಿ ನಡೆದಿತ್ತು. ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ನಿರ್ಭಯಳ ಸಾಮೂಹಿಕ ಅತ್ಯಾಚಾರ, ನಂತರ ಆಕೆಯ ಚಿಕಿತ್ಸೆ, ಸಾವು, ದೇಶದಾದ್ಯಂತ ಭುಗಿಲೆದ್ದ ಪ್ರತಿಭಟನೆ ಎಲ್ಲದಕ್ಕೂ ನಾವು ಸಾಕ್ಷಿಯಾಗಿದ್ದೇವೆ. ತನ್ನ ಗೆಳೆಯನ ಜೊತೆ ರಾತ್ರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಗೆಳೆಯನ ಮುಂದೆಯೇ ಯುವತಿಯ ಮೇಲೆ ಪೈಶಾಚಿಕ ಕೃತ್ಯ ನಡೆದಿತ್ತು. ಆರು ಮಂದಿ ಕಾಮುಕರು ಯುವಕನ್ನು ಬಸ್ಸಿನಿಂದ ಹೊರಗೆ ತಳ್ಳಿ ಒಬ್ಬರಾದ ಮೇಲೊಬ್ಬರು ಅತ್ಯಾಚಾರ ನಡೆಸಿ ಆಕೆಯ ಮರ್ಮಾಂಗಕ್ಕೆ ಕಬ್ಬಿಣದ ರಾಡ್‌ ತುರುಕಿ ಭೀಕರ ಸ್ಥಿತಿಯಲ್ಲಿದ್ದ ಆಕೆಯನ್ನು ಚಲಿಸುತ್ತಿರುವ ಬಸ್‌ನಿಂದ ರಸ್ತೆಗೆ ಎಸೆದು ಹೋಗಿದ್ದರು. ಯುವಕನ ದೂರಿನ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದರು. ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಅಪ್ರಾಪ್ತ ರಾಮ್ ಸಿಂಗ್, ಬಸ್ ಚಾಲಕ ರಾಮ್ ಸಿಂಗ್ ಮತ್ತು ಸಹೋದರ ಮುಖೇಶ್ ಸಿಂಗ್ ಆ ಭಯಾನಕ ಕೃತ್ಯದ ಪಾತಕಿಗಳು.

ನಿರ್ಭಯ ಅತ್ಯಾಚಾರಿಗಳು
ಗಲ್ಲು ಶಿಕ್ಷೆಗೆ ಗುರಿಯಾದ ನಿರ್ಭಯ ಅತ್ಯಾಚಾರಿಗಳು

ಮನಮೋಹನ್‌ ಸಿಂಗ್‌ ಸರ್ಕಾರ ಸಂತ್ರಸ್ತ ಯುವತಿಯನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಏರ್‌ಲಿಫ್ಟ್‌ ಮಾಡಿ ಕರೆದೊಯ್ದಿತ್ತು. ಒಂದು ವಾರ ಆಸ್ಪತ್ರೆಯಲ್ಲಿ ಅರೆಜೀವವಾಗಿದ್ದ ನಿರ್ಭಯ ಉಸಿರು ಚೆಲ್ಲಿದ್ದಳು. ಆಗ ದೇಶಾದ್ಯಂತ ಭುಗಿಲೆದ್ದ ಪ್ರತಿಭಟನೆಗೆ ಎಲ್ಲ ಪಕ್ಷಗಳು, ಸಂಘಟನೆಗಳು ಸಾಥ್‌ ನೀಡಿದ್ದವು. ಅದರ ಪರಿಣಾಮವಾಗಿ ಕೇಂದ್ರ ಸರ್ಕಾರ ಲೈಂಗಿಕ ಶೋಷಣೆಗೊಳಗಾದವರ ಪುನರ್ವಸತಿಗಾಗಿ ನಿರ್ಭಯ ನಿಧಿ ಸ್ಥಾಪಿಸಿತ್ತು. ಆ ಪ್ರಕರಣದ ತೀರ್ಪು ಒಂದೇ ವರ್ಷದಲ್ಲಿ ಬಂದಿದ್ದರೂ ಅದು ಜಾರಿಯಾಗಲು ಎಂಟು ವರ್ಷಗಳೇ ಬೇಕಾದವು. ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿ ಆಗಿರುವ ಕಾರಣ ಆತ ಶಿಕ್ಷೆಯಿಂದ ತಪ್ಪಿಸಿಕೊಂಡ. ಮತ್ತೊಬ್ಬ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾದ. ಉಳಿದ ನಾಲ್ವರು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಒಬ್ಬರಾದ ಮೇಲೆ ಒಬ್ಬರಂತೆ ಮೇಲ್ಮನವಿ ಸಲ್ಲಿಸುತ್ತಾ ಕಾಲ ಕಾಲಹರಣ ಮಾಡಿದ್ದರು.

ಡಿಸೆಂಬರ್ 16, 2012ರಂದು ಆರು ಜನರಿಂದ ನಿರ್ಭಯಾ ಮೇಲೆ ಕ್ರೂರ ಅತ್ಯಾಚಾರ. ಜನವರಿ 3, 2013ರಂದು ಕೊಲೆ, ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ, ಅಪಹರಣ, ಅಸ್ವಾಭಾವಿಕ ಅಪರಾಧಗಳು ಮತ್ತು ಡಕಾಯಿತಿ ಸೇರಿದಂತೆ ಐದು ವಯಸ್ಕ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದರು. ಜನವರಿ 28, 2013 ಆರನೇ ಆರೋಪಿ ಅಪ್ರಾಪ್ತ ಎಂದು ಬಾಲ ನ್ಯಾಯ ಮಂಡಳಿ (ಜೆಜೆಬಿ) ತೀರ್ಪು ನೀಡಿತು. ಜನವರಿ 7, 2020 ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳನ್ನು ಜನವರಿ 22 ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸಲಾಗುವುದು ಎಂದು ದೆಹಲಿ ನ್ಯಾಯಾಲಯವು ಡೆತ್ ವಾರಂಟ್ ಹೊರಡಿಸಿತು. ಗಲ್ಲಗೇರಿದ ಕೆಲ ನಿಮಿಷದಲ್ಲಿ ಅವರ ಸಾವನ್ನು ಘೋಷಿಸಲಾಯಿತು.

ದೆಹಲಿ ಮತ್ತು ಕೊಲ್ಕತ್ತಾದ ಈ ಎರಡು ಪ್ರಕರಣಗಳಲ್ಲಿ ಭಾರೀ ಪ್ರತಿಭಟನೆಗಳು, ಜನಾಕ್ರೋಶ ವ್ಯಕ್ತವಾದ ಕಾರಣ ಎಲ್ಲ ಕಾನೂನು ಪ್ರಕ್ರಿಯೆಗಳು ತ್ವರಿತವಾಗಿ ನಡೆದುವು. ಹಾಗಿದ್ದರೆ ಬೇರೆಲ್ಲ ಅತ್ಯಾಚಾರ ಪ್ರಕರಣಗಳನ್ನು ಕೋರ್ಟ್‌ಗಳು ಇಷ್ಟೇ ಕಾಳಜಿಯಿಂದ ತ್ವರಿತವಾಗಿ ನಡೆಸಲ್ಲ ಯಾಕೆ ಎಂಬ ಪ್ರಶ್ನೆಯೊಂದು ಮೂಡುತ್ತದೆ.

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಅಪ್ರಾಪ್ತರೂ ಸೇರಿದಂತೆ ಮಹಿಳೆಯರ ಸಾಮೂಹಿಕ ಅತ್ಯಾಚಾರ ಕೊಲೆಗಳಾಗುತ್ತಿವೆ. ಅತ್ಯಾಚಾರದಲ್ಲಿ ಯು ಪಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ ಪ್ರಕರಣ ದಿನವೂ ವರದಿಯಾಗುತ್ತಿದೆ. ಆದರೆ ಅಲ್ಲಿನ ಕೋರ್ಟ್‌ಗಳೆಲ್ಲ ಏನು ಮಾಡುತ್ತಿವೆ? ಕೋರ್ಟ್‌ ಮೆಟ್ಟಿಲೇರುವ ಪ್ರಕರಣಗಳ ತ್ವರಿತ ಇತ್ಯರ್ಥವಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯ ಎಂದು ನ್ಯಾಯಪೀಠಗಳಿಗೆ ಅನ್ನಿಸುತ್ತಿಲ್ಲವೇ?

ಅಷ್ಟಕ್ಕೂ ಭಾರೀ ಪ್ರತಿಭಟನೆಗಳಾದ ಎಲ್ಲ ಪ್ರಕರಣಗಳನ್ನೂ ತ್ವರಿತವಾಗಿ ಮುಗಿದಿದೆ ಅಥವಾ ಸರಿಯಾದ ತೀರ್ಪು ಬಂದಿದೆ ಎಂದುಕೊಳ್ಳುವಂತಿಲ್ಲ.

ಉತ್ತರಪ್ರದೇಶದ ಹಾಥರಸ್‌ನಲ್ಲಿ 2020ರ ಸೆಪ್ಟಂಬರ್‌ 14ರಂದು ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವತಿ ಸಪ್ಟೆಂಬರ್29ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಪೊಲೀಸರೇ ಯುವತಿಯ ಮೃತದೇಹವನ್ನು ಆಕೆಯ ಮನೆಯ ಬಳಿ ತಂದು ಕುಟುಂಬದವರನ್ನು ಮನೆಯೊಳಗೆ ಕೂಡಿ ಹಾಕಿ ಪೊಲೀಸರೇ ಮೃತದೇಹವನ್ನು ಸುಟ್ಟು ಹಾಕಿದ್ದರು. ಇದು ಸಾರ್ವಜನಿಕರ ಮತ್ತು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

hataras
ಮೃತ ಬಾಲಕಿಯ ಶವ ಸುಟ್ಟ ಪೊಲೀಸರು

ಈ ಪ್ರಕರಣದಲ್ಲಿ ‘ಮೇಲ್ಜಾತಿ’ಯ ಸಂದೀಪ್, ರಾಮು, ಲವಕುಶ್ ಮತ್ತು ರವಿ ಯುವಕರನ್ನು ಬಂಧಿಸಲಾಗಿತ್ತು. ನಂತರ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಎಸ್‌ಸಿ/ಎಸ್‌ಟಿ ನ್ಯಾಯಾಲಯವು 2023 ಡಿಸೆಂಬರ್‌ನಲ್ಲಿ ಪ್ರಕರಣವನ್ನು ಮುಗಿಸಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ ಮತ್ತು ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಘೋಷಿಸಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಪ್ರಕರಣವನ್ನು ಯೋಗಿ ಸರ್ಕಾರ ಮತ್ತು ಪೊಲೀಸರು ನಿರ್ವಹಿಸಿದ ರೀತಿ ಭಾರೀ ಜನಾಕ್ರೋಶಕ್ಕೆ ಈಡಾಗಿತ್ತು. ಯುವತಿಯ ಮೃತದೇಹವನ್ನು ಆಕೆಯ ಮನೆಯ ಬಳಿ ತಂದ ಪೊಲೀಸರು ಕುಟುಂಬದವರನ್ನು ಮನೆಯಿಂದಾಚೆಗೆ ಬರಲೂ ಬಿಡದೇ, ಯಾವ ಅಂತ್ಯ ವಿಧಿಗೂ ಅವಕಾಶವನ್ನೂ ಕೊಡದೇ ಕಗ್ಗತ್ತಲ ರಾತ್ರಿಯಲ್ಲಿ ಪೊಲೀಸರೇ ಪೆಟ್ರೋಲ್ ಸುರಿದು ಕೊಳ್ಳಿ ಇಟ್ಟಿದ್ದರು. ಇದನ್ನು ಪತ್ರಕರ್ತೆಯೊಬ್ಬರು ಮರೆಯಲ್ಲಿ ನಿಂತು ವಿಡಿಯೋ ಚಿತ್ರೀಕರಿಸಿಕೊಂಡ ಕಾರಣ ಈ ಕುಕೃತ್ಯ, ಸರ್ಕಾರದ ಅಮಾನವೀಯ ನಡೆ ಬಹಿರಂಗಗೊಂಡಿತ್ತು. ಇಡೀ ದೇಶದೆಲ್ಲೆಡೆ ಭಾರೀ ಆಕ್ರೋಶಕ್ಕೆ ಒಳಗಾದ ಈ ಪ್ರಕರಣದಲ್ಲಿ ನಾಲ್ವರು ಮೇಲ್ವರ್ಗದ ಯುವಕರು ಖುಲಾಸೆಯಾಗಿದ್ದರು. ಇಲ್ಲಿ ಅತ್ಯಾಚಾರ ನಡೆದಿಲ್ಲ, ಪರಸ್ಪರ ಒಪ್ಪಿತ ಕ್ರಿಯೆ ಎಂಬ ರೀತಿಯಲ್ಲಿ ಫೊರೆನ್ಸಿಕ್‌ ವರದಿಗಳು ಹೇಳಿರುವುದು, ಆಕೆ ಪ್ರತಿರೋಧ ತೋರಿದ ಗುರುತಿಲ್ಲ ಎಂದು ಹೇಳಿರುವುದು, ಕತ್ತು ಹಿಸುಕಿ ಸಾವಿಗೆ ಕಾರಣರಾದವರನ್ನು ಮಾತ್ರ ಶಿಕ್ಷೆಗೆ ಗುರಿಪಡಿಸಿರುವುದು ತೀವ್ರ ಅನುಮಾನಕ್ಕೆ ಎಡೆ ಮಾಡಿದೆ.

hathras sixteen nine 3
ಹಾಥರಸ್‌ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಯಾದ ಆರೋಪಿಗಳು

ಸಂತ್ರಸ್ತೆ ಆಸ್ಪತ್ರೆಯಲ್ಲಿ ನೀಡಿದ ಮೊದಲ ಹೇಳಿಕೆಯಲ್ಲಿ ಸಂದೀಪನ ಹೆಸರನ್ನಷ್ಟೇ ಹೇಳಿದ್ದಳು. ಆ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಆದರೆ ಎರಡನೇ ಹೇಳಿಕೆಯಲ್ಲಿ ಆಕೆ ಮಿಕ್ಕ ನಾಲ್ವರ ಹೆಸರನ್ನು ಹೇಳಿದ್ದಳು. ಆದರೆ ಅದು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ. ಇದು ಪ್ರಕರಣದಲ್ಲಿ ಮೂವರ ಖುಲಾಸೆಗೆ ಕಾರಣವಾಯ್ತು. ಪ್ರಕರಣ ದಾಖಲಾಗಿ ಮೂರೇ ವರ್ಷದಲ್ಲಿ ವಿಚಾರಣೆ ಮುಗಿದು ತೀರ್ಪೂ ಬಂತು. ಮೂವರು ಖುಲಾಸೆಯಾದರು. ಒಬ್ಬನಿಗೆ ಜೀವಾವಧಿ ಶಿಕ್ಷೆ ಆಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣಗಳು ದಿನವೂ ನಡೆಯುತ್ತಿರುವಾಗ ಈ ತೀರ್ಪು ಕೊಟ್ಟ ಸಂದೇಶವೇನು?

ಉತ್ತರಪ್ರದೇಶದ ಉನ್ನಾವ್‌ ನಲ್ಲಿ ಬಿಜೆಪಿ ಶಾಸಕ ಕುಲದೀಪ್‌ ಸೆಂಗರ್ ಮತ್ತು ಆತನ ಗ್ಯಾಂಗ್‌ನಿಂದಲೇ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಕಾನೂನು ಹೋರಾಟ ನಡೆಸಿದ್ದನ್ನು ನಾವೆಲ್ಲ ಕಂಡಿದ್ದೇವೆ. ಪೊಲೀಸ್‌ ಠಾಣೆಯಲ್ಲಿ ದೂರು ಕೊಡಲು ಹೋದ ಆಕೆಯ ತಂದೆಯನ್ನು ಪೊಲೀಸರು ಹೊಡೆದು ಸಾಯಿಸಿದ್ದರು. ಕೋರ್ಟ್ಗೆ ಹೋಗುವಾಗ ಆಕೆಯ ವಕೀಲರು ಮತ್ತು ಸಂಬಂಧಿಗಳಿದ್ದ ಕಾರಿಗೆ ಅಪಘಾತ ಮಾಡಿಸಿ ಇಬ್ಬರನ್ನು ಮುಗಿಸಿದ್ದರು. ಇದಾದ ನಂತರ ಆರೋಪಿ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ಕೊಡುವುದು ಕೋರ್ಟ್‌ಗೆ ಅನಿವಾರ್ಯ ಎನಿಸಿತೇನೋ! ಆತ ಈಗ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದರೆ ಆ ಹೋರಾಟದಲ್ಲಿ ಆಕೆ ಕಳೆದುಕೊಂಡಿದ್ದೆಷ್ಟು? ಮೊದಲೇ ಜರ್ಜರಿತಗೊಂಡ ದೇಹ ಮನಸ್ಸಿಗೆ ಇನ್ನಷ್ಟು ಆಘಾತ ನೀಡುವ ನಮ್ಮ ವ್ಯವಸ್ಥೆ ಎಂಥದ್ಧು? ಅತ್ಯಾಚಾರಕ್ಕೊಳಗಾದ ಯುವತಿಯನ್ನು ಆ ಕಿರಾತಕರು ಕಾಡಿದ ಪರಿ ಊಹಿಸಲೂ ಸಾಧ್ಯವಿಲ್ಲ. ಅಂದರೆ ಅವರಿಗೆ ಈ ನೆಲದ ಕಾನೂನು ಯಾವ ಭಯವನ್ನೂ ಉಂಟು ಮಾಡಿರಲಿಲ್ಲ. ಜಾಮೀನಿನಲ್ಲಿ ಹೊರಗಿದ್ದ ಆರೋಪಿ ಶಾಸಕ ತನ್ನ ಸಂಗಡಿಗರಿಂದ ಆಕೆಯ ಕಾನೂನು ಹೋರಾಟ ಕೊನೆಗಾಣಿಸಲು ಇನ್ನಿಲ್ಲದಂತೆ ಕಾಡಿದ್ದರು.

Kuldeep Singh Sengar
ಉನ್ನಾವ್‌ ಅತ್ಯಾಚಾರದ ಅಪರಾಧಿ ಕುಲದೀಪ್‌ ಸೆಂಗಾರ್

2023ರಲ್ಲಿ ಮಣಿಪುರದಲ್ಲಿ ನಡೆದ ಇಬ್ಬರು ಕುಕಿ ಯುವತಿಯರ ಬೆತ್ತಲೆ ಮೆರವಣಿಗೆ ಸಾಮೂಹಿಕ ಅತ್ಯಾಚಾರ ನಂತರ ಕೊಲೆ ಮಾಡಿದ ಪ್ರಕರಣ ಮೂರು ತಿಂಗಳ ನಂತರ ಬೆಳಕಿಗೆ ಬಂದಿತ್ತು. ಆ ಪ್ರಕರಣದಲ್ಲಿ ಐವರು ಆರೋಪಿಗಳನ್ನು 2023ರಲ್ಲೇ ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ಇನ್ನೂ ಮುಗಿದಿಲ್ಲ. ಮಣಿಪುರದ ಪ್ರಕರಣ ದೇಶ ವಿದೇಶದಲ್ಲೂ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

ಈಗ ಕರ್ನಾಟಕದ ವಿಚಾರಕ್ಕೆ ಬರೋಣ. 13 ವರ್ಷಗಳ ಹಿಂದೆ 2012ರಲ್ಲಿ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಕೊಲೆಯ ಅಪರಾಧಿಗಳು ಇಂದಿಗೂ ಪತ್ತೆಯಾಗಿಲ್ಲ. ಕೊಲೆಯಾದ ಮರುದಿನ ಧರ್ಮಸ್ಥಳದ ಗೊಮ್ಮಟಗಿರಿ ಮೆಟ್ಟಿಲ ಮೇಲೆ ಕೂತಿದ್ದ ಖಿನ್ನತೆಯ ಕಾಯಿಲೆಯಿಂದ ಬಳಲುತ್ತಿದ್ದ ಅಮಾಯಕ ಕಾರ್ಕಳದ ಸಂತೋಷ್‌ನನ್ನು ಹಿಡಿದ ಕೆಲ ಸ್ಥಳೀಯರು ಈತನೇ ಅತ್ಯಾಚಾರಿ ಇರಬಹುದು ಎಂದು ಪೊಲೀಸರಿಗೆ ಒಪ್ಪಿಸಿದ್ದರು. ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಸೌಜನ್ಯ ಕುಟುಂಬದವರು ಅಲ್ಲಿನ ಸ್ಥಳೀಯ ಮೂವರು ಯುವಕರ ಮೇಲೆ ಸಂಶಯ ವ್ಯಕ್ತಪಡಿಸಿದ್ದರೂ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸಿರಲಿಲ್ಲ. ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದು ಸಿಬಿಐ ತನಿಖೆ ಒಪ್ಪಿಸುವಂತೆ ಒತ್ತಡ ಬಂದ ನಂತರ ಆಗ ಹೊಸದಾಗಿ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ಒಪ್ಪಿಸಿತ್ತು. ಆದರೆ, ಶಂಕಿತ ಅಪರಾಧಿ ಹೌದೋ ಅಲ್ವೋ ಎಂಬ ನಿಟ್ಟಿನಲ್ಲಿ ಮಾತ್ರ ಹನ್ನೊಂದು ವರ್ಷಗಳ ಕಾಲ ವಿಚಾರಣೆ ನಡೆದು ಕಡೆಗೆ 2023ರ ಜೂನ್‌ನಲ್ಲಿ ಸಂತೋಷ್‌ ನಿರಪರಾಧಿ ಎಂಬ ತೀರ್ಪು ಬಂತು. ಆ ನಂತರ ಆರು ತಿಂಗಳ ಕಾಲ ಸೌಜನ್ಯ ಕುಟುಂಬ, ಹಲವು ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದು ರಾಜ್ಯದಾದ್ಯಂತ ಹೋರಾಟ ನಡೆಸಿ ಮರು ತನಿಖೆಗೆ ಒತ್ತಾಯಿಸಿದ್ದವು. ಮರುತನಿಖೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಸೌಜನ್ಯಳನ್ನು ಅಪಹರಿಸಿ, ಅಮಾನುಷವಾಗಿ ಅತ್ಯಾಚಾರಗೈದು ಕೊಂದು ಕಾಡಿನಲ್ಲಿ ಬಿಸಾಕಿದವರು ಯಾರು ಎಂಬುದನ್ನು ಪತ್ತೆ ಮಾಡುವಲ್ಲಿ ನಮ್ಮ ಪೊಲೀಸರು, ಕೋರ್ಟುಗಳು ಸಂಪೂರ್ಣವಾಗಿ ವಿಫಲವಾದವು.

Sowjanya case Family members appeal to CM Siddaramaiah
ಸಂತೋಷ್‌ ರಾವ್‌ ನಿರಪರಾಧಿ ಎಂದು ಸಿಬಿಐ ಕೋರ್ಟ್‌ ತೀರ್ಪು ಬಂದ ನಂತರ ಮರು ತನಿಖೆಗೆ ಒತ್ತಾಯಿಸಿ ಸಿಎಂ ಭೇಟಿ ಮಾಡಿದ ಸೌಜನ್ಯ ಕುಟುಂಬ

ಗೋಲ್ಡನ್‌ ಅವರ್‌ನಲ್ಲಿ ಅಮೂಲ್ಯವಾದ ಸಾಕ್ಷ್ಯಗಳನ್ನು ನಾಶ ಮಾಡಿದ ವೈದ್ಯರು, ಸರಿಯಾದ ರೀತಿಯಲ್ಲಿ ಸಾಕ್ಷಿ ಸಂಗ್ರಹಿಸದ ಪೊಲೀಸರು, ಕುಟುಂಬದವರು ಸಂಶಯಿಸಿದ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸದ ತನಿಖಾಧಿಕಾರಿಗಳು ಎಲ್ಲರೂ ಸೇರಿ ಸೌಜನ್ಯಳೆಂಬ ಎಳೆ ಹುಡುಗಿಯನ್ನು ಹರಿದು ಮುಕ್ಕಿದ ಕಿರಾತಕರನ್ನು ಬಚಾವ್‌ ಮಾಡಿ ನ್ಯಾಯವನ್ನು ಅಣಕಿಸುವಂತೆ ಮಾಡಿದರು. ಸಂತೋಷ್‌ ಬಿಡುಗಡೆಯಾದ, ಆದರೆ ಆತನ ಬಂಧನದಿಂದ ಇಡೀ ಕುಟುಂಬ ಸರ್ವನಾಶವಾಗಿತ್ತು. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಆರಾಮವಾಗಿದ್ದಾರೆ. ಈ ನೆಲದ ಕಾನೂನು ಬಡ ಕುಟುಂಬದ ಸೌಜನ್ಯಳ ಪಕ್ಷಪಾತಿಯಾಗಲಿಲ್ಲ ಎಂಬುದು ದುರಂತ. ಎಷ್ಟೇ ಹೋರಾಟ ಮಾಡಿದರೂ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಮಗಳ ಕೊಲೆಗಾರರು ಎಂದಾದರೂ ಸಿಗುತ್ತಾರೆ ಎಂಬ ಕನಸು ಕಂಡಿದ್ದ ಚಂದಪ್ಪ ಗೌಡ ವಾರದ ಹಿಂದೆ ಕಾಲವಶವಾಗಿದ್ದಾರೆ.

ಹತ್ತು ವರ್ಷಗಳ ಹಿಂದೆ, 2014ರಲ್ಲಿ ಕರ್ನಾಟಕದಲ್ಲಿ ಭಾರೀ ಸುದ್ದಿ ಮಾಡಿದ್ದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯ ಅತ್ಯಾಚಾರ ಪ್ರಕರಣ. 2014ರ ಆಗಸ್ಟ್‌ 17ರಂದು ರಾಮಕಥಾ ಗಾಯಕಿಯೊಬ್ಬರು ತನ್ನ ಮೇಲೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ಹಲವು ವರ್ಷಗಳಿಂದ ಸುಮಾರು 169 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಆ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಸ್ವಾಮೀಜಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಅತ್ಯಾಚಾರ ಆರೋಪಿಯನ್ನು ಒಂದು ದಿನಕ್ಕೂ ಬಂಧಿಸಲಿಲ್ಲ. ಬದಲಿಗೆ ಸ್ವಾಮೀಜಿ ನೀಡಿದ ಪ್ರತಿದೂರಿನ ಮೇಲೆ ಸಂತ್ರಸ್ತೆಯನ್ನೇ ಬಂಧಿಸಿದ್ದರು.

ರಾಘವೇಶ್ವರ ಭಾರತಿ
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ

ಪ್ರಭಾವಿ ಬ್ರಾಹ್ಮಣ ಪೀಠವಾದ ಕಾರಣ ರಾಜ್ಯ ಹೈಕೋರ್ಟಿನ ಸುಮಾರು ಏಳೆಂಟು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದದ್ದು ಒಂದು ದಾಖಲೆಯೇ ಸರಿ. ತ್ವರಿತವಾಗಿ ನಡೆದ ವಿಚಾರಣೆಯು ಇದು ಒಪ್ಪಿತ ಸಂಬಂಧ ಎಂಬ ತೀರ್ಪಿನೊಂದಿಗೆ ಕೊನೆಗೊಂಡಿತ್ತು. ನಿರ್ದೋಷಿಯಾದ ಸ್ವಾಮೀಜಿ ಈಗಲೂ ಪೀಠಾಧ್ಯಕ್ಷ. ಸಕಲ ಗೌರವ ಸಮ್ಮಾನಗಳಿಗೆ ಭಾಜನ. ದೂರುದಾರೆ ಹಾಡುವುದನ್ನು ನಿಲ್ಲಿಸಿದ್ದಾರೆ. ಅವಮಾನದಿಂದ ನಲುಗಿ ಹೋಗಿದ್ದಾರೆ. ಕುಟುಂಬದ ಬೆಂಬಲವಿದ್ದರೂ ಆಕೆಗೆ ಹಿಂದಿನ ಜೀವನ ಸಿಕ್ಕಿಲ್ಲ. ಆರೋಪಿ ಮಾತ್ರ ರಾಜಾರೋಷವಾಗಿ ಬದುಕುತ್ತಿದ್ದಾನೆ.

2016ರಲ್ಲಿ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನ ಮೇಲೆ ಅತ್ಯಾಚಾರದ ಆರೋಪವನ್ನು ಮಠದ ಭಕ್ತೆಯೊಬ್ಬರು ಮಾಡಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಿತ್ಯಾನಂದ 50 ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಪ್ರಕರಣ ಇನ್ನೂ ಇತ್ಯರ್ಥ ಆಗಿಲ್ಲ. ಆರೋಪಿ ಲೊಕೇಷನ್‌ ಶಿಫ್ಟ್‌ ಮಾಡಿದ್ದಾನೆ. ನಾಲ್ಕು ವರ್ಷಗಳ ಹಿಂದೆ ವಿದೇಶದಲ್ಲಿ ದ್ವೀಪವನ್ನೇ ಖರೀದಿಸಿ ಕೈಲಾಸ ಎಂದು ಹೆಸರಿಟ್ಟು ಅಲ್ಲಿ ತನ್ನ ಕಾಯಕವನ್ನು ಮುಂದುವರಿಸಿದ್ದಾನೆ. ಆದರೆ, ಸಂತ್ರಸ್ತೆಗೆ ನ್ಯಾಯ ಇನ್ನೂ ಸಿಕ್ಕಿಲ್ಲ.

nithyananda swami 64230598

ರಾಘವೇಶ್ವರ ಭಾರತಿ ಸ್ವಾಮಿ ಮತ್ತು ಬಿಡದಿಯ ನಿತ್ಯಾನಂದ ಇಬ್ಬರೂ ತಮ್ಮ ಮಠದ ಭಕ್ತೆಯರು ಮತ್ತು ಗುರುವೆಂದು ನಂಬಿ ಬಂದ ಮಹಿಳೆಯರನ್ನು ತಮ್ಮ ಕಾಮವಾಂಛೆಗೆ ಬಳಸಿಕೊಂಡವರು. ಅದೂ ದೇವರ ಹೆಸರಿನಲ್ಲಿ! ಇಬ್ಬರೂ ಯಾವುದೇ ತೊಂದರೆ ಅನುಭವಿಸದೇ ಸಮಾಜದಲ್ಲಿ ಇನ್ನಷ್ಟು ಭಕ್ತ ಪಡೆಯನ್ನು ಕಟ್ಟಿಕೊಂಡು ಮಜವಾಗಿದ್ದಾರೆ.

ಉತ್ತರ ಭಾರತದಲ್ಲಿ ಇಂತಹ ಸ್ತ್ರೀ ಶೋಷಕ ಆಧ್ಯಾತ್ಮ ಗುರುಗಳು, ಕಾವಿಧಾರಿಗಳು ಸಾಲು ಸಾಲು ಸಿಗುತ್ತಾರೆ. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪು, ಗುರ್ಮೀತ್‌ ರಾಮ್‌ ರಹೀಂ ತರಹದ ಸ್ವಯಂಘೋಷಿತ ದೇವಮಾನವರಿಗೆ ತಿಂಗಳಾವರ್ತಿ ಪೆರೋಲ್‌ ಕೊಡುವ ಕೋರ್ಟುಗಳೂ ಇದೆ. ಶೋಕೀವಾಲ ರಾಮ್‌ ರಹೀಂ ಲೋಕಸಭಾ ಚುನಾವಣೆ, ಹರಿಯಾಣದ ವಿಧಾನಸಭಾ ಚುನಾವಣೆಗಳಿಗೆ ತಿಂಗಳಿರುವಾಗ ಪೆರೋಲ್‌ನಲ್ಲಿ ಹೊರಬಂದು ಚುನಾವಣಾ ಪ್ರಚಾರ ನಡೆಸುತ್ತಾನೆ. ಇಂತಹ ಸಮಾಜಘಾತಕ ವ್ಯಕ್ತಿಗಳಿಗೆ ಸರ್ಕಾರಗಳೇ ಬೆಂಬಲಕ್ಕೆ ನಿಲ್ಲುತ್ತವೆ. ಈ ಮಧ್ಯೆ ಅವರಿಂದ ಶೋಷಣೆಗೊಳಗಾದ ಬಡ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲು ಸಾಧ್ಯವೇ?

Gurmeet Ram Rahim
ಹರಿಯಾಣದ ಗುರ್ಮೀತ್‌ ರಾಮ್‌ರಹೀಂ ಸಿಂಗ್

ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಶೋಷಣೆ ತಡೆಗೆ POCSO ಕಾಯ್ದೆ ಜಾರಿಗೊಳಿಸಿ ಒಂದು ದಶಕ ಕಳೆದಿದೆ. ಆದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಂತಿಲ್ಲ. ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಕನಿಷ್ಠ ಒಂಭತ್ತು ವರ್ಷಗಳು ಬೇಕಾಗುತ್ತವೆ ಎಂದು ವರದಿಯೊಂದು ಹೇಳಿದೆ. ಅಂದರೆ ಬಾಲ್ಯದಲ್ಲಿ ಶೋಷಣೆಗೊಳಗಾದ ಬಾಲೆಗೆ ನ್ಯಾಯ ಸಿಗುವಾಗ ಆಕೆ ಯವ್ವನಕ್ಕೆ ಕಾಲಿಡುತ್ತಾಳೆ! ಕಾಯ್ದೆ ಜಾರಿಯಾಗುವಾಗಲೇ ದೇಶದಲ್ಲಿ ಸುಮಾರು ಒಂದೂವರೆ ಸಾವಿರ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ ಅವುಗಳ ನಿರ್ವಹಣೆ ಇಲ್ಲ. ಹೀಗಾಗಿ ಪೋಕ್ಸೊ ಕಾಯ್ದೆಯಿಂದಲೂ ಹೆಣ್ಣುಮಕ್ಕಳ ರಕ್ಷಣೆ ಆಗುತ್ತಿಲ್ಲ.

ಬಿಜೆಪಿ ಮುಖಂಡ ಬಿ ಎಸ್‌ ಯಡಿಯೂರಪ್ಪ ತಮ್ಮ ಎಂಬತ್ತೈದನೇ ಈ ಇಳಿ ವಯಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ಆರೋಪಿಯನ್ನು ಇಪ್ಪತ್ತ ನಾಲ್ಕು ಗಂಟೆಯೊಳಗೆ ಬಂಧಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಮಾರ್ಚ್‌ನಲ್ಲಿ ದೂರು ದಾಖಲಾಗಿದೆ, ಆರೋಪಿಗೆ ಕೋರ್ಟ್‌ ಸಂಪೂರ್ಣ ರಕ್ಷಣೆ ನೀಡಿದೆ. ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಹೇಳಿದೆ. ಆರೋಪಕ್ಕೆ ಪೂರಕವಾಗಿ ವಿಡಿಯೋ ಪುರಾವೆ ಇದೆ, ಧ್ವನಿ ಪರೀಕ್ಷೆಯೂ ಪೂರಕವಾಗಿದೆ. ಪ್ರಕರಣದ ವಿಚಾರಣೆ ಮಾತ್ರ ಮುಂದಕ್ಕೆ ಹೋಗುತ್ತಲೇ ಇದೆ. ಸಂತ್ರಸ್ತೆಯ ಹೇಳಿಕೆಯೇ ಅಂತಿಮ ಎಂದು ಕಾಯ್ದೆ ಹೇಳುತ್ತದೆ. ಆದರೆ ಇಲ್ಲಿ ಇಡೀ ವ್ಯವಸ್ಥೆಗೆ ಪ್ರಭಾವಿಯನ್ನು ರಕ್ಷಿಸುವುದೇ ಮುಖ್ಯವಾಗಿದೆ. ಹೀಗಾಗಿ ಪೋಕ್ಸೊ ಕಾಯ್ದೆ ಕೂಡಾ ಹಲ್ಲಿಲ್ಲದ ಹಾವಿನಂತಾಗಿದೆ.

bs yediyurappa
ಬಿ ಎಸ್‌ ಯಡಿಯೂರಪ್ಪ

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳಿಗೆ ಶಿಕ್ಷೆಯ ಪ್ರಮಾಣ 2.56% ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶ ಹೇಳುತ್ತದೆ. ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣವು ಕೇವಲ 0.92% ಆಗಿದೆ. ಅಂದ್ರೆ ಶೇ ಒಂದಕ್ಕಿಂತ ಕಡಿಮೆ!

ಅತ್ಯಾಚಾರ ಸಂತ್ರಸ್ತರ ವಯೋಮಾನ 18-30 ಎಂದು ಸರ್ಕಾರದ ದತ್ತಾಂಶ ಹೇಳುತ್ತದೆ. ಮನೆಯಿಂದಾಚೆ ಹೋಗಿ ದುಡಿಯುವ ಹೆಣ್ಣುಮಕ್ಕಳೇ ಹೆಚ್ಚು ಎಂದು ವರದಿ ಹೇಳುತ್ತದೆ. ದುಡಿಯುವ ಜಾಗದಲ್ಲಿ, ಮನೆ- ಕಚೇರಿ ಮಧ್ಯೆ ಪ್ರಯಾಣಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ವರದಿ ಹೇಳುತ್ತದೆ.

Rape cases

ವಿಳಂಬವಾದ ನ್ಯಾಯವು ನ್ಯಾಯವನ್ನು ನಿರಾಕರಿಸುತ್ತದೆ ಎಂಬ ಮಾತಿದೆ. ಅದು ಅಕ್ಷರಶಃ ನಿಜವಾಗಿದೆ.‌ 1992ರಲ್ಲಿ ರಾಜಸ್ಥಾನದ 18 ವರ್ಷದ ಯುವತಿಯ ಮೇಲೆ 18 ಕಾಮುಕರಿಂದ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆರೋಪಿಗಳು ರಾಜಸ್ತಾನದ ಅಜ್ಮೀರ್‌ನ ಶ್ರೀಮಂತ, ಪ್ರಭಾವಿ ಕುಟುಂಬಗಳಿಗೆ ಸೇರಿದವರು. ಈದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಎಂಟು ಮಂದಿಗೆ 1998ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ನಾಲ್ವರನ್ನು ಹೈಕೋರ್ಟ್‌ ಖುಲಾಸೆಗೊಳಿಸಿತು. ಇಬ್ಬರ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಲಾಯಿತು. ಒಬ್ಬ ಆತ್ಮಹತ್ಯೆ ಮಾಡಿಕೊಂಡು. ಮತ್ತೊಬ್ಬನಿಗೆ 2007ರಲ್ಲಿ ಆರು ವರ್ಷಗಳ ನಂತರ ಖುಲಾಸೆಯಾದ. ಮಿಕ್ಕ ಆರು ಮಂದಿಗೆ ಸುದೀರ್ಘ 32 ವರ್ಷಗಳ ಕಾನೂನು ಸಮರದ ನಂತರ 2024 ಆಗಸ್ಟ್‌ 30 ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ತೀರ್ಪು ಬಂದಾಗ ಆಕೆಗೆ ಐವತ್ತು ವರ್ಷ!

ಅಜ್ಮೀರ್‌ ರೇಪ್‌ ಅಪರಾಧಿಗಳು
ಅಜ್ಮೀರ್‌ ಅತ್ಯಾಚಾರ ಪ್ರಕರಣದ ಅಪರಾಧಿಗಳು

ಇಂತಹ ವಿಳಂಬ ನ್ಯಾಯಗಳು ಅಪರಾಧಿಗಳಿಗೆ ಸಮಾಜದಲ್ಲಿ ಎಂದಿನಂತೆ ಬದುಕುವ ಅವಕಾಶವನ್ನು ನೀಡುತ್ತದೆ. ಆದರೆ ಸಂತ್ರಸ್ತರನ್ನು ದಿನ ದಿನವೂ ನೋವು, ಅವಮಾನಗಳಿಂದ ಸಾಯುವಂತೆ ಮಾಡುತ್ತಿದೆ. ಈ ದೇಶದಲ್ಲಿ ಕಠಿಣ ಕಾನೂನುಗಳಿಗೆ ಬರವಿಲ್ಲ. ಆದರೆ ಅದನ್ನು ಜಾರಿಗೆ ತರುವಲ್ಲಿ ಇಡೀ ವ್ಯವಸ್ಥೆ ಸೋತಿದೆ ಎಂದಷ್ಟೇ ಹೇಳಬೇಕು. ದೇಶದ ಎಲ್ಲ ಕೋರ್ಟಿನ ಕಟಕಟೆಯಲ್ಲಿ ಕೊಳೆಯುತ್ತಿರುವ ಅತ್ಯಾಚಾರ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಿ ಅಪರಾಧಿಗಳಿಗೆ ಶಿಕ್ಷೆಯಾಗಲಿ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X