ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಒಟ್ಟು 15 ಗ್ಯಾರಂಟಿಗಳನ್ನು ಪ್ರಸ್ತಾಪಿಸಿದ್ದಾರೆ.
ಯುವಕರಿಗೆ ಉದ್ಯೋಗ ಖಾತರಿ, ‘ಮಹಿಳಾ ಸಮ್ಮಾನ್ ಯೋಜನೆ’, ವೃದ್ಧರಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆಯನ್ನು ಎಎಪಿ ನೀಡಿದೆ. ಎಎಪಿ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಮೆಟ್ರೋ ದರದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಎಎಪಿಯ ‘ಅಪ್ರಾಮಾಣಿಕ’ 11 ನಾಯಕರ ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿ ಚಿತ್ರ
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೇಶದಲ್ಲಿ ಮೊದಲು ನಾವು ‘ಗ್ಯಾರಂಟಿ’ ಎಂಬ ಪದವನ್ನು ಸೃಷ್ಟಿಸಿದೆವು. ನಮ್ಮ ನಂತರ, ಬಿಜೆಪಿ ಅದನ್ನು ನಕಲಿಸಿದೆ. ಆದರೆ ವ್ಯತ್ಯಾಸವೆಂದರೆ, ನಾವು ನಮ್ಮ ಭರವಸೆಗಳನ್ನು ಪೂರೈಸುತ್ತೇವೆ, ಅವರು ಪೂರೈಸುವುದಿಲ್ಲ” ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ನಾವು 15 ಗ್ಯಾರಂಟಿಗಳನ್ನು ನೀಡಿದ್ದೇವೆ. ಅದರಲ್ಲಿ ನಮ್ಮ ಮೊದಲ ಗ್ಯಾರಂಟಿ ದೆಹಲಿ ನಿವಾಸಿಗಳಿಗೆ ‘ದೃಢವಾದ’ ಉದ್ಯೋಗ ಸೃಷ್ಟಿಸುವುದು ಎಂದು ತಿಳಿಸಿದರು.
ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಾಸಿಕ 2,100 ರೂಪಾಯಿ ಆರ್ಥಿಕ ಸಹಾಯವನ್ನು ನೀಡುವುದು ಎಎಪಿ ಎರಡನೇ ಗ್ಯಾರಂಟಿ ಆಗಿದೆ. ಹಿರಿಯ ನಾಗರಿಕರಿಗೆ, ಸಂಜೀವನಿ ಯೋಜನೆಯಡಿಯಲ್ಲಿ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇನ್ನು ಬಾಕಿ ಇರುವ ‘ಹೆಚ್ಚುವರಿ’ ನೀರಿನ ಬಿಲ್‌ಗಳನ್ನು ಮನ್ನಾ ಮಾಡುವ ಭರವಸೆಯನ್ನು ಎಎಪಿ ನೀಡಿದೆ.
ಇದನ್ನು ಓದಿದ್ದೀರಾ? ದೆಹಲಿ ಚುನಾವಣೆ | ಚೀನೀ ಸಿಸಿಟಿವಿ ಕ್ಯಾಮೆರಾ ಬಳಕೆ, ಪಂಜಾಬ್ ಆಡಳಿತ ದುರುಪಯೋಗ: ಎಎಪಿ, ಬಿಜೆಪಿ ವಾಕ್ಸಮರ
ರಾಷ್ಟ್ರ ರಾಜಧಾನಿಯ ಪ್ರತಿ ಮನೆಗೆ 24/7 ಶುದ್ಧ ಕುಡಿಯುವ ನೀರಿನ ಪೂರೈಕೆಯಾಗಲಿದೆ ಎಂದು ಎಎಪಿ ಭರವಸೆ ನೀಡಿದೆ. ಕಲುಷಿತ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಮತ್ತು ದೆಹಲಿಯ ರಸ್ತೆಗಳನ್ನು ವಿಶ್ವ ದರ್ಜೆಯ ರಸ್ತೆಯನ್ನಾಗಿಸುವುದು, ಬಾಬಾಸಾಹೇಬ್ ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನ ನೀಡುವ ಭರವಸೆಯನ್ನು ಕೂಡಾ ಎಎಪಿ ನೀಡಿದೆ.
दिल्ली की जनता को “केजरीवाल की गारंटी”
— Arvind Kejriwal (@ArvindKejriwal) January 27, 2025
मुझे पूरा भरोसा है कि दिल्ली की जनता एक बार फिर से झाड़ू को ही चुनेगी। pic.twitter.com/s8m6V9iQKX
ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋದಲ್ಲಿ ಶೇಕಡ 50ರಷ್ಟು ರಿಯಾಯಿತಿಯನ್ನು ಮಹಿಳೆಯರಿಗೆ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಎಎಪಿ ಹೇಳಿದೆ. ಪುರೋಹಿತರು ಮತ್ತು ಗುರುದ್ವಾರ ಗ್ರಂಥಗಳಿಗೆ ಮಾಸಿಕ 18,000 ರೂಪಾಯಿ ಆರ್ಥಿಕ ನೆರವು, ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರಿನ ಪ್ರಯೋಜನ ವಿಸ್ತರಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಹೆಚ್ಚುವರಿಯಾಗಿ, ದೆಹಲಿಯ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು, ಪಡಿತರ ಚೀಟಿಗಳನ್ನು ನೀಡುವುದು, ಆಟೋ ಮತ್ತು ಕ್ಯಾಬ್ ಚಾಲಕರಿಗೆ ಆರ್ಥಿಕ ನೆರವು ನೀಡುವುದು, ಅವರ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂಪಾಯಿ ಮತ್ತು 10 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡುವ ಭರವಸೆಯನ್ನು ಕೂಡಾ ಎಎಪಿ ನೀಡಿದೆ.
