ವಿಜಯಪುರ ನಗರದಲ್ಲಿ ಇಟ್ಟಿಗೆ ಭಟ್ಟಿ ಮಾಲೀಕರಿಂದ ದಲಿತ ಕಾರ್ಮಿಕರ ಮೇಲೆ ನಡೆದ ಹಲ್ಲೆ ಪ್ರಕರಣ ಇಡೀ ರಾಜ್ಯ ತಲೆತಗ್ಗಿಸುವಂತಹ ವಿಚಾರ. ಹಾಗಾಗಿ ಆರೋಪಿಗಳ ಆಸ್ತಿ ಮುಟ್ಟುಗೊಲು ಹಾಕಿಕೊಂಡು ಅವರನ್ನು ಗಡಿಪಾರು ಮಾಡಲು ಒತ್ತಾಯಿಸಿ ಜಮಖಂಡಿಯ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
“ಬಸವ ನಾಡಿನಲ್ಲಿ ಇಂತಹದ್ದೊಂದು ಹೇಯ ಕೃತ್ಯ ನಡೆದಿರುವುದು ನಾಚಿಕೇಡಿನ ಸಂಗತಿ. ಈ ವಿಷಯ ಪ್ರಜ್ಞಾವಂತ ನಾಗರಿಕ ಸಮಾಜದ ವಿರುದ್ಧವಾಗಿದೆ. ಮಾನವೀಯತೆ ಇರುವ ಯಾರೂ ಈ ಕೃತ್ಯವನ್ನು ಒಪ್ಪಿಕೊಳ್ಳಲಾರರು. ಕಷ್ಟಪಟ್ಟು ದುಡಿಯುವ ಅಮಾಯಕ ದಲಿತ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಕಿರಾತಕರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಮುಖ್ಯಮಂತ್ರಿಗಳು ಕೂಡಲೇ ಇಂತಹ ಕೃತ್ಯಕ್ಕೆ ಕಡಿವಾಣ ಹಾಕಬೇಕು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಇಟ್ಟಿಗೆ ಭಟ್ಟಿಗಳನ್ನು ಬಂದ್ ಮಾಡಬೇಕು. ಇಟ್ಟಿಗೆ ಭಟ್ಟಿ ಮಾಲೀಕರು ಎನಿಸಿಕೊಂಡವರ ಮನಸ್ಥಿತಿ ಬದಲಾಗಬೇಕು. ಕಾರ್ಮಿಕರೂ ಮನುಷ್ಯರೇ ಎಂಬುದನ್ನು ಮರೆಯಬಾರದು. ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ಮೌಲಾನಾ ಆಝಾದ್ ರಾಷ್ಟ್ರೀಯ ವಿವಿ: ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಬಾಗಲಕೋಟೆಯ ಡಾ. ಶಬಾನಾ ಸೂರಿ
ಪ್ರತಿಭಟನೆಯಲ್ಲಿ ಸಿದ್ದು ಮಿಸಿ, ಮುತ್ತಣ್ಣ ಮೇತ್ರಿ, ಸುರೇಶ ನಡುವಿನಮನಿ, ರಮೇಶ್ ಬಾಳೋಲಗಿಡದ, ಪುಟ್ಟು ಪಾಣಿ, ಪ್ರೇಮ್ ಬಾಳೋಲಗಿಡದ, ಸಂಜು ಮುಂಡಗನೂರ, ರಮೇಶ ಪೂಜಾರಿ, ರವಿ ದೊಡ್ಡಮನಿ, ಮಾರುತಿ ಮರೇಗುದ್ದಿ, ಪ್ರಕಾಶ ಹುಗ್ಗಿನ್ನವರ, ಬಸು ಬುದ್ನಿ ಹಾಗೂ ಸಂಗಮೇಶ ಕಾಂಬಳೆ, ಸಿದ್ದು ಸತ್ಯನ್ನವರ, ಸಂತೋಷ ನಾಟಿಕಾರ ಇದ್ದರು.