ಹಿಂದೂ ಧರ್ಮಕ್ಕೆ ಸೇರಿದ ದಲಿತರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಪ್ರೇರೇಪಿಸಲು ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ನ್ಯಾಯಾಲಯವು ಕೇರಳ ಮೂಲದ ದಂಪತಿಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಆಡಳಿತಾರೂಢ ಬಿಜೆಪಿ ಪದಾಧಿಕಾರಿಯ ದೂರಿನ ಮೇರೆಗೆ 2023 ರಲ್ಲಿ ಕೇರಳ ಮೂಲದ ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಅಂಬೇಡ್ಕರ್ ನಗರದ ವಿಶೇಷ ನ್ಯಾಯಾಲಯವು ದಂಪತಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಬಿಜೆಪಿ ನಾಯಕಿ ಈ ಪ್ರಕರಣದಲ್ಲಿ ದೂರುದಾರೆಯಾಗಿದ್ದು, ಅವರ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
ಜನವರಿ 22 ರಂದು, ವಿಶೇಷ ನ್ಯಾಯಾಧೀಶರಾದ ರಾಮ್ ವಿಲಾಸ್ ಸಿಂಗ್, ಅವರು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021 ರ ಸೆಕ್ಷನ್ 5 (1) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಜೋಸ್ ಪಾಪಚೆನ್ ಮತ್ತು ಅವರ ಪತ್ನಿ ಶೀಜಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 25,000 ರೂ. ದಂಡ ವಿಧಿಸಿ,ಅವರನ್ನು ತಪ್ಪಿತಸ್ಥರೆಂದು ಘೋಷಿಸಿದರು.
ಪೂರ್ವ ಯುಪಿಯ ಅಂಬೇಡ್ಕರ್ ನಗರದ ಶಹಪುರ್ ಫಿರೋಜ್ ಗ್ರಾಮದಲ್ಲಿ ಕಡು ಬಡತನದಲ್ಲಿರುವ ದಲಿತರನ್ನು ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಿಸಲು ಪ್ರಯತ್ನಿಸಿದ ಆರೋಪದ ಮೇಲೆ ನ್ಯಾಯಾಧೀಶರಾದ ರಾಮ್ ವಿಲಾಸ್ ಸಿಂಗ್ ಕೇರಳ ಮೂಲದ ದಂಪತಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು.
ದಂಪತಿಗಳು ಬೈಬಲ್‌ನಿಂದ ಪಾಠಗಳನ್ನು ಪ್ರವಚನ ಮಾಡುತ್ತಾ ಯೇಸುಕ್ರಿಸ್ತನ ಬಗ್ಗೆ ಪ್ರಚಾರ ಮಾಡುತ್ತಿದ್ದರು, ಧಾರ್ಮಿಕ ಪುಸ್ತಕಗಳನ್ನು ವಿತರಿಸುತ್ತಿದ್ದರು, ಕ್ರಿಸ್‌ಮಸ್‌ನಲ್ಲಿ ಹಬ್ಬಗಳನ್ನು ಆಯೋಜಿಸುತ್ತಿದ್ದರು ಮತ್ತು ದಲಿತರಿಗೆ ಹಣ ನೀಡಿ ಅವರನ್ನು ಮತಾಂತರವಾಗಲು, ಯೇಸುವನ್ನು ಪಾಲಿಸುವಂತೆ ಹೇಳುತ್ತಿದ್ದರು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ವಿಶೇಷವೆಂದರೆ 16 ತಿಂಗಳ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ,ವಿಶೇಷ ನ್ಯಾಯಾಲಯವು ದಂಪತಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಸೆಪ್ಟೆಂಬರ್ 6, 2023 ರಂದು, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರು ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಪಾಪಚೆನ್ ಮತ್ತು ಶೀಜಾ ಅವರಿಗೆ ಜಾಮೀನು ನೀಡಿದ್ದರು. ಉತ್ತಮ ಬೋಧನೆಗಳನ್ನು ಒದಗಿಸುವುದು, ಪವಿತ್ರ ಬೈಬಲ್ ಪುಸ್ತಕಗಳನ್ನು ವಿತರಿಸುವುದು, ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವುದು, ಗ್ರಾಮಸ್ಥರ ಸಭೆ, ಹಬ್ಬಗಳ ಆಚರಣೆ, ಗ್ರಾಮಸ್ಥರಿಗೆ ಅನ್ಯೋನ್ಯವಾಗಿರುವಂತೆ ಹೇಳುವುದು, ಮದ್ಯ ಸೇವಿಸದಂತೆ ಸೂಚಿಸುವುದು ಆಮಿಷಕ್ಕೆ ಸಮಾನವಲ್ಲ ಎಂದು ನ್ಯಾಯಮೂರ್ತಿ ಶಮೀಮ್ ಅಹ್ಮದ್ ತಮ್ಮ ತೀರ್ಪಿನಲ್ಲಿ ಹೇಳಿದ್ದರು.
ಎಫ್‌ಐಆರ್ ಅನ್ನು ದಾಖಲಿಸಿದ ವ್ಯಕ್ತಿ ಸಂತ್ರಸ್ತನಾಗಿಲ್ಲದಿರುವುದರಿಂದ, ಅದು ಸಮರ್ಥವಲ್ಲ ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದರು.
