ಸಂವಿಧಾನ ಬದಲಿಸಬೇಕೆನ್ನುವ ಮನುವಾದಿಗಳ ವಿರುದ್ಧ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ಹಿರಿಯ ಹೋರಾಟಗಾರ ಭಾರದ್ವಾಜ್ ಕರೆ ನೀಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಗಣರಾಜ್ಯೋತ್ಸವ ಆಚರಿಸಿ ಅಂಬೇಡ್ಕರ್ ಸರ್ಕಲ್‌ನಲ್ಲಿ ಎದ್ದೇಳು ಕರ್ನಾಟಕ, ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ “ಸಂವಿಧಾನ ಯಾನ”ಕ್ಕೆ ಸಂವಿಧಾನ ಪುರ್ವ ಪೀಠಿಕೆ ಓದುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
“ಈ ದೇಶಕ್ಕೆ ಸಂವಿಧಾನ ಬರುವ ಪೂರ್ವದಲ್ಲಿ ದಲಿತ, ಶೋಷಿತ ಸಮುದಾಯಗಳ ಧ್ವನಿ, ಸಮಾನತೆ ಹಾಗೂ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಂಡಿದ್ದರು. ಇವತ್ತು ಸಂವಿಧಾನ ಸಮಾನತೆಯ ಜತೆಗೆ ಸಾಮಾಜಿಕವಾಗಿ, ನ್ಯಾಯಕ್ಕಾಗಿ ಹೋರಾಡುವ ಹಕ್ಕನ್ನು ನಮಗೆ ಕೊಟ್ಟಿದೆ. ಸಂವಿಧಾನ ಬದಲಿಸಲು ಸಂಚು ನಡೆದಿರುವುದು ಇಂದು ನಿನ್ನೆಯದಲ್ಲ. ಜಾರಿಯಾದ ದಿನದಿಂದಲೇ ನಡೆದಿದೆ. ಇಂತಹ ಕುತಂತ್ರಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕು” ಎಂದು ಹೇಳಿದರು.
ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಸಿರಾಜ್ ಅಹ್ಮದ್ ಮಾತನಾಡಿ, “ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಸಂವಿಧಾನ, ರೈತ, ಸೈನಿಕ, ದೇಶದ ಸುರಕ್ಷತೆ ಹೆಸರೇಳುತ್ತ ಅಧಿಕಾರಕ್ಕೆ ಬಂದ ಈ ಸರ್ಕಾರ ಸಚಿವರು, ಪಕ್ಷದ ನಾಯಕರು ಬಹಿರಂಗವಾಗಿ, ʼಸಂವಿಧಾನ ಬದಲಿಸುವುದಕ್ಕೇ ನಾವು ಬಂದಿರುವುದುʼ ಎಂದು ಹೇಳಿಕೆ ಕೊಡುತ್ತಿವೆ. ಇವರ ಮನುವಾದದ ಕಾನೂನು ಜಾರಿಗೆ ತಂದು ಈ ದೇಶದ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡುವ ಅವರ ಉದ್ದೇಶ ಸ್ಪಷ್ಟವಾಗಿದೆ. ಆದರಿಂದ, ನಾವು ಇವತ್ತಿನ ಮನುವಾದಿಗಳ ವಿರುದ್ಧ ಬೀದಿಗಿಳಿದು ಹೋರಾಡಲು ಸಿದ್ಧವಾಗಬೇಕು” ಎಂದು ಕರೆಕೊಟ್ಟರು.
ರೈತ ಮುಖಂಡ ಶಂಕರ್ ಪಾಟೀಲ್ ಮಾತನಾಡಿ, “ಸಂವಿಧಾನ ನಮಗೆ ಶಿಕ್ಷಣದ ಹಕ್ಕು, ಸಂಘಟಿಸುವ ಹಕ್ಕು, ಹೋರಾಟದ ಹಕ್ಕುಗಳನ್ನು ಕೊಟ್ಟಿದೆ, ಅದು ಅಂಬೇಡ್ಕರ್ ಅವರ ಶ್ರಮದ ಫಲ. ನಮ್ಮ ಹಕ್ಕಿಗಾಗಿ ಹೋರಾಡುವ ರೈತರನ್ನು ದೇಶದ್ರೋಹಿಗಳು, ಖಲಿಸ್ತಾನಿಗಳೆಂದು ಕರೆದು, ಅನ್ನದಾತನಿಗೆ ಕೇಂದ್ರ ದ್ರೋಹ ಬಗೆದು ಅವೈಜ್ಞಾನಿಕ ಕಾನೂನು ಜಾರಿಗೆ ತರುವುದರ ಮೂಲಕ ಸಂವಿಧಾನಕ್ಕೆ ಅನ್ಯಾಯ ಮಾಡಿದೆ. ನಿರಂತರ ಸಂವಿಧಾನ ಒಪ್ಪಿಗೆ ಇಲ್ಲವೆಂದು ಹೇಳುವ ಮೂಲಕ ಸಮಾನತೆ ಕೊಟ್ಟ ಸಂವಿಧಾನದ ಪ್ರತಿ ಸುಡುತ್ತಿದ್ದಾರೆ. ಹಾಗಾಗಿ ಎಲ್ಲರೂ ಎಚ್ವರಗೊಳ್ಳುವ ಕಾಲವಿದು” ಎಂದು ಹೇಳಿದರು.
ಜಮಾತೆಯ ಎಮ್ ಆರ್ ರಾಜಾ ಸಾಬ್ ಮಾತನಾಡಿ, “ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವಾಗ ಯಾವುದೇ ಒಂದು ಸಮುದಾಯ, ಜಾತಿ, ಧರ್ಮದ ಉದ್ಧಾರಕ್ಕೆ ರಚನೆ ಮಾಡಲಿಲ್ಲ. ಎಲ್ಲರನ್ನೊಳಗೊಂಡು ಸಮಾನ ಹಕ್ಕು ಕೊಟ್ಟರು. ಅಂಬೇಡ್ಕರ್ ಸಂವಿಧಾನ ‘ಸತ್ತವರ ಚರಿತ್ರೆಯಲ್ಲ, ಬದುಕಿದವರ ಬದುಕು’ ಎಂದರು. ಆದ್ದರಿಂದ ಮೂಲ ನಿವಾಸಿಗಳ ಬದುಕನ್ನೇ ತುಳಿಯುವ ಮತಾಂಧರಿಂದ ಸಂವಿಧಾನ ರಕ್ಷಿಸಬೇಕಿದೆ. ಸಂವಿಧಾನದಲ್ಲಿ ಅಕ್ಷರಗಳಿಲ್ಲ, ಭಾಷೆಯಿಲ್ಲ ಭಾರತದ ಮೂಲ ನಿವಾಸಿಗಳ ಬದುಕು, ಉಸಿರು ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕೋಟೆಕಾರ್ ಬ್ಯಾಂಕ್‌ನಲ್ಲಿ ಕಳುವಾಗಿದ್ದ ಚಿನ್ನ, ನಗದು ವಶ
ಜನಶಕ್ತಿ ರಾಜ್ಯ ಸಂಚಾಲಕ ರಾಜನಾಯ್ಕ್ ಕುಷ್ಟಗಿ ಮಾತನಾಡಿ, “ಸಂವಿಧಾನದ ಮೂಲ ಆಶಯ, ಉದ್ದೇಶವನ್ನು ಎದ್ದೇಳು ಕರ್ನಾಟಕದ ಮೂಲಕ ಹಳ್ಳಿಯವರೆಗೂ ಹಳ್ಳಿಯ ಮುಗ್ದ ಜನರಲ್ಲಿ ಅರಿವು ಮೂಡಿಸಬೇಕು. ಸಂವಿಧಾನ ಸಂರಕ್ಷಣೆಯ ಪಡೆಯಲ್ಲಿ ಯುವಕರನ್ನು ಸಂಘಟಿಸಿ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡುವ ಅಗತ್ಯವಿದೆ. ಸಂವಿಧಾನ ಮೂಲ ಆಶಯ ಕಿತ್ತೊಗೆದರೆ ಭಾರತ ಸಂಪೂರ್ಣ ಸಂಕಷ್ಟದಲ್ಲಿ ಸಿಲುಕಿದೆಯೆಂದೇ ಅರ್ಥ. ಅದ್ದರಿಂದ ಸಂವಿಧಾನ ಸಂರಕ್ಷಣಾ ಪಡೆಯಿಂದ ‘ಸಂವಿಧಾನ ಬದಲಿಸುತ್ತೆವೆ, ಸಂವಿಧಾನದಲ್ಲಿ ನಮಗೆ ಗೌರವ ಇಲ್ಲ’ ಎನ್ನುವವರನ್ನು ಸೋಲಿಸಬೇಕು” ಎಂದು ಹೇಳಿದರು.
ದುರ್ಗೇಶ ಬರಗೂರು, ಯುಮನೂರು ಇಳೆಗನೂರು, ಲಕ್ಷ್ಮೀ ಹೊಸಕೇರಿ, ಯಮುನಾ ಚೇಳೂರು, ಚೈತ್ರ ಗಬ್ಬೂರ, ಮಾರುತಿ, ಸುನೀಲ್, ಶೋಭಾ ರಾಂಪೂರ, ಜಾಂಭವಿ ರಂಪೂರ, ವಿಜಯ, ಅನುಪಮ್, ಸರಣು, ಶ್ರೀದೇವಿ ಬರಗೂರು ಸೇರಿದಂತೆ ಮುಂತಾದವರು ಇದ್ದರು.